ಸದ್ದಿಲ್ಲದೆ ಜನಮನ್ನಣೆ ಗೊಳ್ಳುತ್ತಿದೆ ಸಂಪಾಜೆಯ ಈ ಪ್ರಾಥಮಿಕ ಆರೋಗ್ಯ ಕೇಂದ್ರ
ವರದಿ : ಹಸೈನಾರ್ ಜಯನಗರ
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಗಡಿ ಪ್ರದೇಶವಾದ ಸಂಪಾಜೆ ಗ್ರಾಮದ ಚೆಕ್ ಪೋಸ್ಟ್ ಬಳಿ ಯಿಂದ ಸುಮಾರು ಎರಡು ಕಿಲೋಮೀಟರ್ ದೂರದ ಸುಂದರ ರಮಣೀಯ ಪರಿಸರದಲ್ಲಿ ಸದ್ದಿಲ್ಲದೆ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದು ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ತನ್ನ ಹೆಸರನ್ನು ಪ್ರಚಾರಗೊಳಿಸಿ ಜನರ ಆಶಾ ಕೇಂದ್ರವಾಗಿ ಮಾರ್ಪಟ್ಟಿದೆ.
ಇದಕ್ಕೆ ಮೂಲ ಕಾರಣ ಕಳೆದ ಒಂದು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುತ್ತಿರುವ ಗರ್ಭಿಣಿ ಸ್ತ್ರೀಯರ ಸಂಖ್ಯೆ ಹೆಚ್ಚಾಗಿರುವುದು.
ಕಳೆದ ಒಂದು ವರ್ಷದಲ್ಲಿ ಈ ಆಸ್ಪತ್ರೆಯಲ್ಲಿ ಸುಮಾರು 139 ಕ್ಕೂ ಹೆಚ್ಚು ಗರ್ಭಿಣಿ ಸ್ತ್ರೀಯರು ಹೆರಿಗೆಯಾಗಿದ್ದು ಇದರಲ್ಲಿ ವಿಶೇಷವೆಂದರೆ ಏಳು ಮಹಿಳೆಯರು ತಮ್ಮ ಪ್ರಥಮ ಹೆರಿಗೆಯ ಸಮಯದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯಾಗಿ ಎರಡನೆಯ ಹೆರಿಗೆ ಸಂದರ್ಭದಲ್ಲಿ ಇಲ್ಲಿ ನಾರ್ಮಲ್ ಡೆಲಿವರಿ ಆಗಿರುತ್ತಾರೆ. ಈ ವಿಷಯಗಳು ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಕಾಸರಗೋಡು ಮುಂತಾದ ಕಡೆಗಳಲ್ಲಿ ಜನಪ್ರಿಯತೆಗೊಳ್ಳಲು ಕಾರಣವಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಭಾಗಮಂಡಲ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಹಾಗೂ ನೆರೆ ಜಿಲ್ಲೆಯಾದ ಕಾಸರಗೋಡು ಮುಂತಾದ ಕಡೆಗಳಿಂದ ಗರ್ಭಿಣಿ ಸ್ತ್ರೀಯರ ಬರುವಿಕೆಯ ಸಂಖ್ಯೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೋವಿಡ್ 19 ನಿಂದಾಗಿ ಕಾಸರಗೋಡು ಜಿಲ್ಲೆಯಿಂದ ಬರುವವರು ಯಾರು ಇಲ್ಲ ಹಾಗೂ ಮುಂಜಾಗ್ರತಾ ದೃಷ್ಟಿಯಿಂದ ದೂರದ ಊರುಗಳಿಂದ ಬರುವ ರೋಗಿಗಳನ್ನು ಆದಷ್ಟು ತಡೆಹಿಡಿಯಲಾಗಿದೆ.
ಇಲ್ಲಿಯ ಮುಖ್ಯ ವೈದ್ಯಾಧಿಕಾರಿಯಾಗಿ ಡಾಕ್ಟರ್ ವಿನುತ್ ಎಚ್ ಎಸ್ ರವರು ಸೇವೆ ಸಲ್ಲಿಸುತ್ತಿದ್ದು ಇವರು ಮೂಲತಃ ಚಿತ್ರದುರ್ಗದವರಾಗಿರುತ್ತಾರೆ. ಇವರು ತಮ್ಮ ವೈದ್ಯಕೀಯ ತರಬೇತಿಯನ್ನು ಸುಳ್ಯದ ಕೆವಿಜಿ ವೈದ್ಯಕೀಯ ಸಂಸ್ಥೆಯಲ್ಲಿ ಪಡೆದಿದ್ದು, ಎಂಬಿಬಿಎಸ್ ಪದವಿಯನ್ನು ಕೆವಿಜಿ ಸಂಸ್ಥೆಯಿಂದಲೇ ಪಡೆದಿರುತ್ತಾರೆ. ಇವರ ಪ್ರಕಾರ ಒಂದು ತಿಂಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರು ಚಿಕಿತ್ಸೆಗೆ ಬರುತ್ತಿದ್ದು, ಕೆಲವು ಸಂದರ್ಭಗಳಲ್ಲಿ ದಿನದಲ್ಲಿ ಎರಡು ಅಥವಾ ಮೂರು ಹೆರಿಗೆಗಳು ನಡೆದಿರುತ್ತದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿರುತ್ತಾರೆ. ನಮ್ಮ ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಗಳು ದಾದಿಯರು ಮತ್ತು ಆರೋಗ್ಯ ಇಲಾಖೆಯ ಮುಖ್ಯ ಅಧಿಕಾರಿಗಳ ಸಹಕಾರ ಮತ್ತು ಸೇವೆಯಿಂದ ಇವೆಲ್ಲ ಸಾಧ್ಯವಾಗುತ್ತಿದೆ. ನಾವೆಲ್ಲರೂ ಒಟ್ಟಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಈ ರೀತಿಯ ನಿಸ್ವಾರ್ಥ ಸೇವೆ ಹಾಗೂ ಸಾರ್ವಜನಿಕರ ಆಶಾ ಕೇಂದ್ರವಾಗಿ ನಮ್ಮ ಸ್ಥಳೀಯ ಪರಿಸರದಲ್ಲಿ ಆರೋಗ್ಯ ಕೇಂದ್ರವು ಬೆಳೆದು ಬಂದದ್ದು ನಮ್ಮೆಲ್ಲರಿಗೂ ಮಹಾ ಭಾಗ್ಯ ಎಂದು ಫಲಾನುಭವಿಗಳು ಆರೋಗ್ಯ ಕೇಂದ್ರಕ್ಕೆ ಮತ್ತು ವೈದ್ಯಾಧಿಕಾರಿ ಡಾ.ವಿನುತ್ ಹಾಗೂ ಸಂಪೂರ್ಣ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಇವರ ಈ ಸೇವೆಯು ಬೆಳೆಯಲಿ ಎಂದು ಆಶಿಸೋಣ.
Comments are closed.