ಗುಟ್ಕಾ ನಿಷೇಧ ವದಂತಿ ನಂಬಬೇಡಿ : ಅಡಿಕೆ ಬೆಳೆಗಾರರಿಗೆ ಆತಂಕದ ಅಗತ್ಯವಿಲ್ಲ – ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ

ಪುತ್ತೂರು: ಕೊರೊನಾ ವೈರಸ್ ಹರಡುವುದು ತಡೆಯಲು ಸರಕಾರಗಳು ಕಟ್ಟುನಿಟ್ಟಿನ ಆದೇಶ ಮಾಡಿವೆ.

ಲಾಕ್ಡೌನ್ ಸಹಿತ ವಿವಿಧ ಮಾರ್ಗಸೂಚಿಗಳನ್ನು ತಿಳಿಸಿದೆ. ಇದನ್ನು ಅನುಸರಿಸಬೇಕಾದ್ದು ದೇಶದ ಎಲ್ಲರ ಜವಾಬ್ದಾರಿ. ಇದು ಪ್ರತಿಯೊಬ್ಬ ನಾಗರಿಕನ ಉಳಿವಿಗಾಗಿ. ಇಂತಹ ಸಂದರ್ಭದಲ್ಲಿ ಅಡಿಕೆ ನಿಷೇಧ, ಗುಟ್ಕಾ ನಿಷೇಧ ಮೊದಲಾದ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ವದಂತಿಗಳಿಗೆ, ಅಪಪ್ರಚಾರಗಳಿಗೆ ಕಿವಿಗೊಡಬೇಕಾಗಿಲ್ಲ, ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ತಿಳಿಸಿದೆ.

ದೇಶದ ಹಿತದ ಸಂದರ್ಭದಲ್ಲಿ ಪ್ರತೀ ಬೆಳೆಗಾರರ ಪಾತ್ರವೂ ಬಹುಮುಖ್ಯವಾಗಿದೆ. ಅಡಿಕೆ ಬೆಳೆಯುವ ಪ್ರದೇಶಗಳಂತೆಯೇ ಅಡಿಕೆ ಬಳಕೆಯ ಪ್ರದೇಶದಲ್ಲೂ ಈಗ ಕೊರೊನಾ ವೈರಸ್ ಭೀತಿ ಇದೆ. ಹೀಗಾಗಿ ಅಲ್ಲಿನ ರಾಜ್ಯ ಸರಕಾರಗಳು ವೈರಸ್ ಹರಡುವುದು ತಡೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತವೆ.

ಇದರಲ್ಲಿ ತಿಂದು ಉಗುಳುವುದೂ ಸೇರಿದೆ. ಈ ಸಂದರ್ಭ ತಾತ್ಕಾಲಿಕವಾಗಿ ಅಂತಹ ವಸ್ತುಗಳ ಮಾರಾಟ ನಿಷೇಧ ಇರುತ್ತದೆ. ಇದೇ ಅಂತಿಮವಲ್ಲ ಎಂಬ ವಿಶ್ವಾಸ ಎಲ್ಲರಿಗೂ ಇದೆ. ಈ ಬಗ್ಗೆ ಜನಪ್ರತಿನಿಧಿಗಳು, ಸಂಸ್ಥೆಗಳು, ಅಡಿಕೆ ಬೆಳೆಯುವ ಪ್ರದೇಶದ ಸಂಸದರುಗಳು ಸರಕಾರದ ಗಮನಕ್ಕೆ ಈಗಾಗಲೇ ತಂದಿದ್ದಾರೆ.

ಈಗ ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಅಡಿಕೆ ಖರೀದಿಗೆ ಕ್ಯಾಂಪ್ಕೋ ಹಾಗೂ ಶಿರಸಿಯಲ್ಲಿ ಟಿಎಸ್‍ಎಸ್ ಮುಂದೆ ಬಂದಿದೆ. ಈ ಮೂಲಕ ಅಡಿಕೆ ಬೆಳೆಗಾರರಿಗೆ ಧೈರ್ಯವನ್ನೂ ತುಂಬಿದ್ದಾರೆ.

ಈ ಸಂದರ್ಭದಲ್ಲಿ ಆರ್ಥಿಕವಾಗಿ ಯಾರಿಗೆ ಈಗ ತಕ್ಷಣದ ಅಗತ್ಯ ಇದೆಯೋ ಅಂತಹವರು ಅಡಿಕೆ ಮಾರಾಟ ಮಾಡಿದರೆ ಮಧ್ಯಮ ಹಾಗೂ ಬಡವರ್ಗದ ಮಂದಿಗೆ ಸಹಕಾರವಾಗುತ್ತದೆ. ಮುಂದೆ ಲಾಕ್ಡೌನ್ ಮುಗಿದ ತಕ್ಷಣವೇ ಅಡಿಕೆ ಮಾರುಕಟ್ಟೆ ಸಹಜ ಸ್ಥಿತಿಗೆ ಬರುತ್ತದೆ ಎನ್ನಲು ಸಾಧ್ಯವಿಲ್ಲ.

ಈಗಿನ ಪರಿಸ್ಥಿತಿಗಿಂತ ಸುಧಾರಣೆಯಾಗಲಿದೆ. ಲಾಕ್ಡೌನ್ ಮುಗಿದ ಬಳಿಕ ಅಡಿಕೆಯನ್ನು ಒಮ್ಮೆಲೇ ಮಾರುಕಟ್ಟೆಗೆ ಬಿಡದೇ ಇದ್ದರೆ ಕೆಲವೇ ಸಮಯಗಳಲ್ಲಿ ಅಡಿಕೆ ಮಾರುಕಟ್ಟೆ ಸಹಜ ಸ್ಥಿತಿಗೆ ಬರಲಿದೆ.

ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರಕಾರವನ್ನು, ಜನಪ್ರತಿನಿಧಿಗಳನ್ನು ಒತ್ತಾಯ ಮಾಡಲಾಗುವುದು ಎಂದು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ತಿಳಿಸಿದ್ದಾರೆ.

Comments are closed.