ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳತೆಗೆ ಸಂದಿತು 101 ವರುಷ

ಮಾನವನ ಜೀವನ ಬೇವು ಬೆಲ್ಲದಂತೆ. ಬದುಕಿನಲ್ಲಿ ಎಷ್ಟು ಸಿಹಿ ಇರುತ್ತದೋ ಅಷ್ಟೇ ಕಹಿ ಕೂಡಾ ಆವರಿಸಿರುತ್ತದೆ. ಹಬ್ಬದ ದಿನವೇ ಒಂದು ಘೋರ ದುರಂತ ನಡೆದುಹೋದರೆ ಅಲ್ಲಿ ಸಿಹಿಗಿಂತ ಕಹಿಯೇ ಹೆಚ್ಚಾಗಿರುತ್ತದೆ. ಹೌದು, ಹೀಗೊಂದು ಘಟನೆ ನಡೆದು ಇಂದಿಗೆ 101 ವರ್ಷಗಳು ಸಂದರೂ ಅದರ ಕರಾಳ ನೆನಪು ಮಾತ್ರಾ ಮಾಸಿಲ್ಲ.ಅದುವೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.

ನಮ್ಮ ರಾಷ್ಟ್ರದ ಪಂಜಾಬ್ ರಾಜ್ಯದಲ್ಲಿ ಬೇಸಿಗೆಯ ಅವಧಿಯಲ್ಲಿ ‘ಬೈಸಾಕಿ’ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಪಂಜಾಬಿ ಭಾಷೆಯಲ್ಲಿ ಬೈಸಾಕಿ ಎಂದರೆ ಸುಗ್ಗಿ ಎಂದರ್ಥ. ನಮ್ಮ ಕರ್ನಾಟಕ ರಾಜ್ಯದಲ್ಲಿ ನಾವು ಸಂಕ್ರಾಂತಿ ಹಬ್ಬವನ್ನು ಹೇಗೆ ವೈಭವದಿಂದ ಆಚರಿಸುತ್ತೇವೋ, ಅದೇ ರೀತಿ ಪಂಜಾಬಿಗರು ಬೈಸಾಕಿಯನ್ನು ಆಚರಣೆ ಮಾಡಿ ಸಂಭ್ರಮಿಸುತ್ತಾರೆ. ಏಪ್ರಿಲ್ 13, ಪಂಜಾಬಿಗರ ಪಾಲಿಗೆ ಹೊಸ ವರ್ಷದ ಆರಂಭವೂ ಹೌದು. ಆದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದುರಂತದ ನಂತರ ಏಪ್ರಿಲ್ 13 ಬೇವಿನ ಕಹಿಯಂತಾಯಿತು.

ಭಾರತದಲ್ಲಿ ಬ್ರಿಟಿಷ್ ಸರ್ಕಾರದ ಆಡಳಿತವಿದ್ದ ಅವಧಿ ಅದಾಗಿತ್ತು. ಪಂಜಾಬಿನಲ್ಲಿ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಆಡಳಿತ ನಡೆಸುತ್ತಿದ್ದ. ಆತನ ದಬ್ಬಾಳಿಕೆಗೆ ಜನರು ರೋಸಿಹೋಗಿದ್ದರು. ಅದೇ ಸಮಯಕ್ಕೆ ಬ್ರಿಟಿಷ್ ಸರ್ಕಾರವು ರೌಲತ್ ಕಾಯ್ದೆಯನ್ನು ಜಾರಿಗೆ ತಂದಿತು. ರೌಲತ್ ಕಾಯ್ದೆಯನ್ನು ನಿಷೇಧಿಸಬೇಕು ಎಂದು 1919 ಏಪ್ರಿಲ್ 6ರಂದು ಪಂಜಾಬಿನ ಹಲವಾರು ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆದವು. ಹೀಗಾಗಿ ಪ್ರತಿಭಟನೆಗಳ ರೂವಾರಿಯಾಗಿದ್ದ ಇಬ್ಬರನ್ನು ಬ್ರಿಟಿಷ್ ಸರ್ಕಾರವು ಗಡಿಪಾರು ಮಾಡಿತು. ಇದರಿಂದ ಜನರು ಮತ್ತಷ್ಟು ಕ್ರೋಧಿತರಾದರು. ಆಕ್ರೋಷಗೊಂಡ ಪ್ರತಿಭಟನಾಕಾರರಿಂದ ಐವರು ಬ್ರಿಟಿಷ್ ಅಧಿಕಾರಿಗಳು ಸಾವನ್ನಪ್ಪಿದರು. ಇದಕ್ಕೆ ಪ್ರತ್ಯುತ್ತರವಾಗಿ ಬ್ರಿಟಿಷ್ ಸರ್ಕಾರ ಗೋಲಿಬಾರ್ ನಡೆಸಿತು. ಪರಿಣಾಮವಾಗಿ 30 ಜನರು ಪ್ರಾಣ ಕಳೆದುಕೊಂಡರು. ಆ

ದರೆ ಹೋರಾಟ ಮಾತ್ರಾ ನಿಲ್ಲಲಿಲ್ಲ. ಉದ್ವಿಗ್ನ ಸ್ಥಿತಿಯನ್ನು ನಿಭಾಯಿಸಲು ಬ್ರಿಟಿಷ್ ಸರ್ಕಾರ ಜನರಲ್ ಡಯರ್‍ನನ್ನು ಪಂಜಾಬ್ ಪ್ರಾಂತ್ಯಕ್ಕೆ ಕಳುಹಿಸಿತು. ಡಯರ್‍ನ ವಿರುದ್ಧ ಮತ್ತಷ್ಟು ಪ್ರತಿಭಟನೆಗಳು ನಡೆದವು. ಹೀಗಾಗಿ ಡಯರ್ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಿದ. 1919, ಏಪ್ರಿಲ್ 13 ಪಂಜಾಬ್‍ನಲ್ಲಿ ಬೈಸಾಕಿ ಹಬ್ಬದ ಸಂಭ್ರಮ ಕಳೆಗಟ್ಟಿತು. ಹೀಗಾಗಿ ಜಲಿಯನ್ ವಾಲಾಬಾಗ್‍ನಲ್ಲಿ ಸಾರ್ವಜನಿಕ ಸಭೆಯನ್ನು ಕರೆಯಲಾಯಿತು.

ಸಭೆಯನ್ನು ಆಯೋಜಿಸಿದ್ದ ಮುಖಂಡರಿಗೆ ಡಯರ್ ವಿಧಿಸಿದ್ದ ಸಭಾ ಸಮಾರಂಭಗಳ ನಿಷೇಧದ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಏಕೆಂದರೆ ಬ್ರಿಟಿಷ್ ಸರ್ಕಾರ ದೊಡ್ಡ ಮಟ್ಟದಲ್ಲಿ ಯಾವ ಪ್ರಕಟಣೆಯನ್ನೂ ಹೊರಡಿಸಿರಲಿಲ್ಲ.

ಜಲಿಯನ್ ವಾಲಾಬಾಗ್ ಚಿಕ್ಕ ಬಾಗಿಲಿನ ಒಳಾಂಗಣವಾಗಿತ್ತು. ಬೈಸಾಕಿ ಹಬ್ಬದ ಸವಿಯನ್ನುಂಡು ಹತ್ತು ಸಾವಿರಕ್ಕೂ ಅಧಿಕ ಮಂದಿ ಜನರು ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಸಭೆಯ ವಿಚಾರ ತಿಳಿಯುತ್ತಿದ್ದಂತೆ ಜನರಲ್ ಡಯರ್ ತನ್ನ ಸಶಸ್ತ್ರ ಸೇನೆಯನ್ನು ನುಗ್ಗಿಸಿದ.

ಜಲಿಯನ್ ವಾಲಾಬಾಗ್‍ನಲ್ಲಿ ಸ್ವಾತಂತ್ರ್ಯದ ಕನಸಿನಲ್ಲಿದ್ದ ನಿಶ್ಶಸ್ತ್ರ ಸೇನಾನಿಗಳ ಮೇಲೆ ಡಯರ್‍ನ ಸೇನೆ ಹತ್ತು ನಿಮಿಷಗಳ ಕಾಲ ಏಕಾಏಕಿ ಗುಂಡಿನ ದಾಳಿಯನ್ನು ಮಾಡಿತು. ಆ ದಾಳಿಯಲ್ಲಿ ಸ್ತ್ರೀಯರು, ಮಕ್ಕಳು, ಪುರುಷರೆನ್ನದೆ ಎಲ್ಲರೂ ಸಾವಿಗೊಳಗಾದರು.

ಬ್ರಿಟಿಷ್ ಸರ್ಕಾರ, ಗುಂಡಿನ ದಾಳಿಯಲ್ಲಿ ಸತ್ತವರು 500ಮಂದಿ ಎಂದು ಲೆಕ್ಕ ಕೊಟ್ಟರೂ ಹತ್ಯಾಕಾಂಡಕ್ಕೆ ಸಾವಿರ ಮಂದಿ ಭಾರತೀಯರು ಬಲಿಯಾಗಿದ್ದರು. ಇದನ್ನು ಖಂಡಿಸಿ ಮತ್ತಷ್ಟು ಹೋರಾಟ, ಚಳುವಳಿಗಳು ಆರಂಭವಾದವು. ಸ್ವಾತಂತ್ರ್ಯ ಸೇನಾನಿಗಳ ವೀರ ಮರಣವು ಅನೇಕರಿಗೆ ಸ್ವಾತಂತ್ರ್ಯ ಹೋರಾಟದ ಹುರುಪನ್ನು ನೀಡಿತು.

ಇದೇ ಸಂದರ್ಭದಲ್ಲಿ ರವೀಂದ್ರನಾಥ ಠಾಕೂರರು ತಮ್ಮ ‘ಸರ್’ ಪದವಿಯನ್ನು ಹಿಂದಿರುಗಿಸಿದರು. ಮಹಾತ್ಮ ಗಾಂಧಿಯವರು ‘ಕೈಸರ್ ಎ ಹಿಂದ್’ ಎಂಬ ಪದವಿಯನ್ನು ಹಿಂದಿರುಗಿಸುವುದಾಗಿ ಪತ್ರ ಬರೆದರು.

ಇಂದಿಗೂ ಪಂಜಾಬ್‍ನ ಅಮೃತಸರದ ಜಲಿಯನ್ ವಾಲಾಬಾಗ್‍ನಲ್ಲಿ ನಡೆದಂತಹ ಘೋರ ಹತ್ಯಾಕಾಂಡದಲ್ಲಿ ಹತರಾದ ವೀರ ಹುತಾತ್ಮರನ್ನು ಏಪ್ರಿಲ್ 13ರಂದು ಸ್ಮರಿಸಿ ಗೌರವಿಸಲಾಗುತ್ತದೆ. ಅಂದಿನ ಹತ್ಯಾಕಾಂಡವು ಒಂದು ಬೆಂಕಿ ಕಿಡಿಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಆತ ಬೇರಾರು ಅಲ್ಲ, ಕ್ರಾಂತಿಕಾರಿ ಭಗತ್ ಸಿಂಗ್.

ಇಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 101 ವರ್ಷಗಳು ಸಂದಿವೆ. ಅಂದು ಹುತಾತ್ಮರಾದ ವೀರರನ್ನು ಮನೆಯಲ್ಲೇ ಕುಳಿತು ಸ್ಮರಿಸಿ ನಮಿಸೋಣ. ಅಂದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ರಾಷ್ಟ್ರಪ್ರೇಮ ಪ್ರತಿಯೊಬ್ಬ ಭಾರತೀಯನಲ್ಲೂ ಸ್ಫುರಿಸಲಿ.

– ಸೌಜನ್ಯ.ಬಿ.ಎಂ.ಕೆಯ್ಯೂರು. ದ್ವಿತೀಯ ಪತ್ರಿಕೋದ್ಯಮ ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Leave A Reply

Your email address will not be published.