Smile Please | ಮುಖದ ಮೇಲೊಂದು ಸಣ್ಣ ನಗುವಿರಲಿ….

ಭಾರತದ ಕೋರೋನಾ ಅಪ್ಡೇಟ್ಸ್

ಸೊಂಕಿತರು : 8446
ಮರಣ : 288
ಗುಣಮುಖ : 969

ನಾವು ಎಷ್ಟೇ ನೋವಿನಲ್ಲಿದ್ದರೂ, ನಮ್ಮ ನೋವು ಇನ್ನೊಬ್ಬರಿಗೆ ಗೊತ್ತಾಗಬಾರದು ಎಂಬುದು ಹೆಚ್ಚಿನವರ ಅಭಿಪ್ರಾಯ. ಅದು ಒಳ್ಳೆಯ ವಿಚಾರವೇ. ತನ್ನ ನೋವನ್ನು ಇನ್ನೊಬ್ಬರಿಗೆ ತೋಪ೯ಡಿಸದಿರಲು ಕೆಲವರು ಸಂಕಟ ಪಡುತ್ತಿರುವರು. ಯಾವುದೇ ವೆಚ್ಚವಿಲ್ಲದ ಸುಲಭ ಉಪಾಯ ನಮ್ಮಲ್ಲೇ ಇದೆ ಎಂಬುದನ್ನು ಹಲವರು ತಿಳಿದುಕೊಳ್ಳುವಲ್ಲಿ ಸೋತಿದ್ದಾರೆ.

ನಮ್ಮ ನೋವು ಇನ್ನೊಬ್ಬರಿಗೆ ಗೊತ್ತಾಗದಂತೆ ಇರಲು ಸುಲಭ ಉಪಾಯವೇ ಇದೆ. ಅದೇನೆಂದರೆ, ನಮ್ಮ ಮುಖದ ಮೇಲಿರುವ ಮುಗುಳು ನಗು.

” ನಗುತಾ ನಗುತಾ ಬಾಳೂ ನೀ ನೂರು ವರುಷ” ಎಂದೂ ಹೀಗೆ ಇರಲೀ ಇರಲೀ ಹರುಷ ವರುಷ” ಎಂಬ ಹಾಡಿನಲ್ಲೂ ನಗು ನಗುತ್ತ ನೂರು ವರುಷ ಸುಖವಾಗಿ ಬಾಳಬೇಕೆಂಬ ಹಾರೈಕೆ ಇದೆ. ನಗು ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ಮುಖದ ಮೇಲೆ ಸ್ಮೈಲ್ ಒಂದಿದ್ದರೆ ಸಾಕು, ಶತ್ರುಗಳೂ ಸಹ ನಮ್ಮನ್ನು ಇಷ್ಟಪಡುತ್ತಾರೆ ಎಂದು ಅನುಭವಿಗಳು ಹೇಳುತ್ತಾರೆ. ಒಂದು ‌ಹೆಣ್ಣಿನ ಅಂದ ಅಡಗಿರುವುದು ಅವಳ ಮುಖದ ಮೇಲಿರುವ ಸಿಂಧೂರ, ಮೂಗುತಿಯಲ್ಲಿ ಎಂದು ಹಿರಿಯರು ಹೇಳುತ್ತಾರೆ. ಅದರ ಜೊತೆಗೇ ನಗು ಸಹ ಆಕೆಯ ಸೌಂದರ್ಯಕ್ಕೆ ಹಿಡಿದು ಕೈಗನ್ನಡಿ.

ನಗುವಿಗೆ ಯಾವುದೇ ಹೆಣ್ಣು ಗಂಡು, ಹಿರಿಯರು ಕಿರಿಯರು. ವಿದ್ಯಾವಂತರು ಅವಿದ್ಯಾವಂತರು ಎಂಬ ಭೇದ ಭಾವ ಇಲ್ಲ. ಸಣ್ಣ ಮುಗುಳು ನಗುವೊಂದು ಎಲ್ಲರ ಮುಖದ ಮೇಲೆಯೂ ಒಂದು ರೀತಿಯಲ್ಲಿ ಲಕ್ಷಣದ ಶೋಭೆಯನ್ನು ಕೊಡುತ್ತದೆ. ನಮ್ಮ ಮುಖದ ಮೇಲಿನ ನಗು ಇನ್ನೊಬ್ಬರ ಮುಖದಲ್ಲೂ ಖುಷಿಯನ್ನು ತರಿಸುವಂತಿರಬೇಕೇ ಹೊರತು, ಅಳು ತರಿಸುವಂತೆ ಇರಬಾರದು.

ಸಂತೋಷದ ಛಾಯೆ ಎಂಬಂತಿರುವ ನಗು ಪ್ರೀತಿ ಮತ್ತು ಸ್ನೇಹದ ಸಂಕೇತ. ಇದು ದೇವರು ಕೊಟ್ಟಿರುವ ಅತೀ ಅಮೂಲ್ಯವಾದ ಮತ್ತು ಸುಂದರವಾದ ವರ. ಇದನ್ನು ಇನ್ನೊಬ್ಬರು ಅನುಸರಿಸಬಹುದೇ ಹೊರತು ಕದಿಯುವುದು ಅಸಾಧ್ಯ. ಮುಖದ ಮೇಲಿನ ನಗುವಿಗೆ ಎದುರಿಗಿರುವವರು ಶತ್ರುವೇ ಆದರೂ, ಆತನೂ ಸಹ ವೈರತ್ವವನ್ನು ಮರೆತು ನಮ್ಮ ಜೊತೆ ಸ್ನೇಹದಿಂದ ವ್ಯವಹರಿಸುವಂತೆ ಮಾಡುವ ಶಕ್ತಿ ಇದೆ. ಜೀವನದ ಗೆಲುವು ನಮ್ಮ ಮುಖದ ಮೇಲಿರುವ ಸಣ್ಣ ಸ್ಮೈಲ್ ನಲ್ಲಿ ಅಡಗಿದೆ ಎಂಬುದನ್ನು ಅಥ೯ ಮಾಡಿಕೊಳ್ಳ ಬೇಕಾಗಿದೆ ಫ್ರೆಂಡ್ಸ್.

ನಗು ಅನ್ನೋದು ಬದುಕಿನುದ್ದಕ್ಕೂ ಇರುವ ವಿಟಮಿನ್ ಟಾನಿಕ್ ಇದ್ದಂತೆ. ಆದರೆ ಇಂದಿನ ಹೈಟೆಕ್ ಯುಗದಲ್ಲಿ ನೋಡುವುದನ್ನೇ ಮರೆತಿದ್ದೇವೆ ಎಂದರೆ ವಿಪರ್ಯಾಸ. ಎಷ್ಟೇ ದುಃಖವಿದ್ದರೂ ಮುಖದ ಮೇಲೆ ಮೂಡುವ ಸಣ್ಣ ಮುಗುಳು ನಗು ಆ ದುಃಖವನ್ನು ಶಾಶ್ವತವಾಗಿ ಅಲ್ಲದಿದ್ದರೂ ಸ್ವಲ್ಪ ಸಮಯದವರೆಗಾದರೂ ಮರೆಮಾಚಬಹುದು.

ಆ ಸುಂದರ ನಗು ಎಂಬ ಛಾಯೆಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ ಎಂದಾದರೆ, ನಾವ್ಯಾಕೆ ಮುಖವನ್ನು ಗಂಟಿಕ್ಕಿ ಕೂರಬೇಕು ಎಂಬುದನ್ನು ಒಮ್ಮೆ ಯೋಚನೆ ಮಾಡಿ ಫ್ರೆಂಡ್ಸ್. ನಗು ಎಂಬುದು ದೇವರು ಕೊಟ್ಟಿರುವ ವರ, ಆ ವರವೇ ನಮ್ಮ ಮುಖದ ಮೇಲಿದ್ದರೆ ಅದಕ್ಕಿಂತ ಹೆಚ್ಚಿನ ಅಂದೇ ಇನ್ನೊಂದಿಲ್ಲ. ಸೋ ಸ್ಮೈಲ್ ಪ್ಲೀಸ್ ಫ್ರೆಂಡ್ಸ್…

ಸರೋಜ.ಪಿ.ಜೆ ದೋಳ್ಪಾಡಿ, ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Leave A Reply

Your email address will not be published.