ಉಪ್ಪಿನಂಗಡಿ | ಮನೆಗಳ ಬದಲು ವಿದ್ಯಾಸಂಸ್ಥೆಗಳಲ್ಲಿ ಕಳ್ಳತನಕ್ಕೆ ಮುಂದಾದ ಕಳ್ಳರು

ಉಪ್ಪಿನಂಗಡಿ, ಎ 9 : ಕಳ್ಳರು ಶಾಲೆ ಕಾಲೇಜಿನಲ್ಲಿ ಏನು ಸಿಗುತ್ತದೆ ಎಂದು ಕಳ್ಳತನಕ್ಕೆ ಹೋದರೋ ಗೊತ್ತಿಲ್ಲ, ಉಪ್ಪಿನಂಗಡಿಯಲ್ಲಿ ಕಳ್ಳರು ಮನೆಯನ್ನು ಬಿಟ್ಟು ಸಂಸ್ಥೆಗಳ ಬೆನ್ನು ಹಿಡಿದಿದ್ದಾರೆ. ಎಲ್ಲರೂ ಮನೇಲೇ ಇರುವ ಕಾರಣ ಅವರು ತಮ್ಮ ಬಿಸಿನೆಸ್ ಸ್ಟ್ರಾಟೆಜಿ ಬದಲಿಸಿಕೊಂಡರಾ ? ಗೊತ್ತಿಲ್ಲ.

ಇದು ನಡೆದದ್ದು ಕಳೆದ ಸೋಮವಾರದಂದು ಉಪ್ಪಿನಂಗಡಿ ಸರಕಾರಿ ಕಾಲೇಜು ಹಾಗೂ ಪ್ರೌಢ ಶಾಲೆಯಲ್ಲಿ ಈ ಎರಡು ಪ್ರತ್ಯೇಕ ಕಳ್ಳತನದ ಪ್ರಕರಣಗಳು ಸಂಭವಿಸಿದೆ.

ಕಳ್ಳರು ಕಾಲೇಜಿನ ನೆಲ ಹಂತದಲ್ಲಿರುವ ಮೂರು ಕೊಠಡಿಗಳ ಬೀಗ ಮುರಿದು ಬಾಗಿಲು ತೆರೆದು ಒಳ ಪ್ರವೇಶಿಸಿ ಕೊಠಡಿಗಳ ಒಳಗಿದ್ದ 13 ಕಪಾಟುಗಳ ಬೀಗಗಳನ್ನು ಮುರಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ಕಛೇರಿಯ ಶೈಕ್ಷಣಿಕ ದಾಖಾಲಾತಿಗಳನ್ನು ಹಾಗೂ ಆಡಳಿತಾತ್ಮಕ ದಾಖಲಾತಿಗಳನ್ನು ಅಡ್ಡಾದಿಡ್ಡಿ ಯಾಗಿ ಚೆಲ್ಲಾಡಿದ್ದಾರೆ. ಅಲ್ಲಿ ಏನೋ ಹುಡುಕಾಟ ನಡೆಸಿದಂತೆ ಕಾಣುತ್ತಿದೆ ಎಂದು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಹರಿಶಂಕರರವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 8 ರಂದು ಬೆಳಿಗ್ಗೆ ಕಾಲೇಜಿಗೆ ಆಗಮಿಸಿದಾಗ ಕಳ್ಳತನ ಬೆಳಕಿಗೆ ಬಂದಿತ್ತು . ಈ ಹಿಂದೆ, ಏಪ್ರಿಲ್ 3 ರಂದು ಕಾಲೇಜಿಗೆ ಆಗಮಿಸಿದಾಗ ಎಲ್ಲವೂ ಸರಿ ಇತ್ತು. ಅದರ ಮಧ್ಯೆ ಕಳ್ಳತನದ ಪ್ರಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮೇಲಿನ ಪ್ರಕರಣದಂತೆಯೆ ಕಾಲೇಜಿನ ಸಮೀಪದ ಪ್ರೌಢ ಶಾಲೆಯಲ್ಲಿ ಶಾಲಾ ಕಛೇರಿ, ಉಪ ಪ್ರಾಂಶುಪಾಲರ ಕೊಠಡಿ ಮತ್ತು ಶಿಕ್ಷಕರ ಕೊಠಡಿಗಳ ಬೀಗಗಳನ್ನು ಯಾವುದೋ ಆಯುಧದಿಂದ ಮೀಟಿ ಒಡೆದು ಕೊಠಡಿಗಳಲ್ಲಿದ್ದ ಒಟ್ಟು ಎಲ್ಲಾ ಗೋದ್ರೆಜುಗಳನ್ನು ತೆರೆದು ಹುಡುಕಾಟ ಮಾಡಿರುವುದು ಕಂಡು ಬಂದಿದೆ.

ಹೈಸ್ಕೂಲ್ ನ ಸಿಸಿ ಕ್ಯಾಮರಗಳ ಸುಮಾರು 4000 ರೂಪಾಯಿ ಡಿವಿಆರ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ. ಪ್ರೌಡಶಾಲಾ ವಿಭಾಗದ ಪ್ರಾಂಶುಪಾಲರಾದ ದಿವಾಕರ ಆಚಾರ್ಯ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರುತ್ತಿದ್ದಾರೆ.
ಉಪ್ಪಿನಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಆಗಮಿಸಿದ್ದು ಶೀಘ್ರದಲ್ಲಿ ಕಳ್ಳನನ್ನು ಹಿಡಿದು ಹಾಕುವ ವಿಶ್ವಾಸದಲ್ಲಿಿ ಪೊಲೀಸರಿದ್ದಾರೆ.

Leave A Reply

Your email address will not be published.