ಪುತ್ತೂರು ಪೇಟೆಗೆ ನಾಲ್ಕು ಮುಖ್ಯರಸ್ತೆಗಳಿಂದ ಮಾತ್ರ ಪ್ರವೇಶ ಶಾರ್ಟ್ ಕಟ್,ಒಳ ರಸ್ತೆಗಳು ಸಂಪೂರ್ಣ ಬಂದ್!

ಪುತ್ತೂರು: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಪುತ್ತೂರು ಪಟ್ಟಣ ಪ್ರದೇಶಕ್ಕೆ ಅನಗತ್ಯವಾಗಿ ವಾಹನ ಸಂಚಾರ ಪೊಲೀಸರ ತಾಳ್ಮೆ ಕೆಡಿಸುವಂತೆ ಮಾಡಿದ್ದ ಹಿನ್ನೆಲೆಯಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲೆಂದು ಪೇಟೆಗೆ ಬರುವ ಎಲ್ಲಾ ಒಳ ರಸ್ತೆಗಳನ್ನು ಬಂದ್ ಮಾಡಿ, ನಾಲ್ಕು ಮುಖ್ಯರಸ್ತೆಯಿಂದಲೇ ವಾಹನಗಳು ಪೇಟೆಗೆ ಪ್ರವೇಶಿಸುವಂತೆ ಪುತ್ತೂರು ಸಂಚಾರ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ.

ಅನಗತ್ಯವಾಗಿ ವಾಹನ ಸಂಚಾರವನ್ನು ತಡೆದಾಗ ಬದಲಿ ಒಳ ರಸ್ತೆಯಾಗಿ ವಾಹನಗಳು ಪೇಟೆಗೆ ಎಂಟ್ರಿ ಕೊಡುವುದು ಸಾಮಾನ್ಯವಾಗಿತ್ತು.

ಈ ನಿಟ್ಟಿನಲ್ಲಿ ಪೊಲೀಸರು ಇದೀಗ ಹೊಸ ಪ್ರಯೋಗ ಮಾಡಿದ್ದು, ಬೈಪಾಸ್‌ನಿಂದ ಪೇಟೆಗೆ ಬರುವ ಎಲ್ಲಾ ಒಳ ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದಾರೆ. ಸುಳ್ಯ ಕಡೆಯಿಂದ ಬರುವ ವಾಹನಗಳು ದರ್ಬೆ ಅಶ್ವಿನಿ ಸರ್ಕಲ್ ಬಳಿಯಿಂದ, ಸವಣೂರು ಕಡೆಯಿಂದ ಬರುವ ವಾಹನಗಳು ದರ್ಬೆ ಸರ್ಕಲ್ ನಿಂದ, ಉಪ್ಪಿನಂಗಡಿಯಿಂದ ಬರುವ ವಾಹನಗಳು ಪಡೀಲ್ ಮೂಲಕ, ಅದೇ ರೀತಿ ಮಂಗಳೂರು ಕಡೆಯಿಂದ ಬರುವ ವಾಹನಗಳು ಮಂಜಲ್ಪಡ್ಪು ಬೈಪಾಸ್ ರಸ್ತೆಯಿಂದ ಪುತ್ತೂರು ಪೇಟೆಗೆ ಬರಬೇಕು.

ಉಳಿದಂತೆ ಎಲ್ಲಾ ಒಳ ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರಿಗೂ ಅವಕಾಶವಿಲ್ಲ- ಎಸೈ ಎಂ.ವಿ.ಚೆಲುವಯ್ಯ

ಸ್ಥಳೀಯರು ವಾಹನದಲ್ಲಿ ಪೇಟೆಗೆ ಹೋಗಬೇಕಾದರೂ ಸಂಚಾರ ಪೊಲೀಸರು ಸೂಚಿಸಿರುವ ಮುಖ್ಯರಸ್ತೆಯಲ್ಲೇ ಪೇಟೆಗೆ ಎಂಟ್ರಿ ಕೊಡಬೇಕು. ಒಂದು ವೇಳೆ ಸ್ಥಳೀಯರಿಗೆ ಮಾತ್ರ ಅವಕಾಶ ಕೊಟ್ಟಲ್ಲಿ ಮತ್ತೆ ಇತರ ವಾಹನ ಸವಾರರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆಂಬ ನಿಟ್ಟಿನಲ್ಲಿ ಎಲ್ಲಾ ವಾಹನಗಳಿಗೂ ಒಳ ರಸ್ತೆಯಿಂದ ಪೇಟೆಗೆ ಎಂಟ್ರಿ ನಿಷೇಧಿಸಲಾಗಿದೆ ಎಂದು ಸಂಚಾರ ಠಾಣೆಯ ಎಸೈ ಎಂ.ವಿ ಚೆಲುವಯ್ಯ ತಿಳಿಸಿದ್ದಾರೆ.

Leave A Reply

Your email address will not be published.