ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು | ಮನೆಯಲ್ಲಿ ದೀಪ ಉರಿಸುವ ಬದಲಿಗೆ ಗುಡ್ಡಕ್ಕೆ ಬೆಂಕಿ ಇಟ್ಟ ದುಶ್ಟ ಮನಸ್ಸುಗಳು
ಬೆಳ್ತಂಗಡಿ, ಏಪ್ರಿಲ್ 5 : ಅತ್ತ ದೇಶಕ್ಕೆ ದೇಶವೇ ಆ ಒಂಬತ್ತು ಗಂಟೆಗೆ ಜರುಗುವ 9 ನಿಮಿಷಗಳ ಸಂಭ್ರಮಕ್ಕೆ ಮೈ ಮನಸ್ಸುಗಳನ್ನು ತೊಡಗಿಸಿಕೊಂಡು ದೀಪ ಬೆಳಗುವ ಸಂಭ್ರಮದಲ್ಲಿದೆ. ಪ್ರತಿ ಮನೆಯಲ್ಲೂ, ಈ ಕೋರೋನಾ ಕಾಟದ ಮಧ್ಯದಲ್ಲೂ ದೀಪಾವಳಿಯ ಮಾದರಿಯ ಸಂಭ್ರಮ.
ಮನೆಮಂದಿಯೆಲ್ಲ ದೀಪವನ್ನು ಹಚ್ಚುವ ಕಾರ್ಯದಲ್ಲಿ ಇದ್ದರೆ, ಅದೇ ವೇಳೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಕೊಟ್ಟು ಪರಾರಿಯಾದ ಘಟನೆ ನಡೆದಿದೆ.
ಆದರೆ ಗುಡ್ಡದಲ್ಲಿ ಬೆಂಕಿ ಕಂಡ ತಕ್ಷಣ ಸ್ಥಳೀಯರು ಗುಡ್ಡಕ್ಕೆ ಓಡಿ ಹೋಗಿದ್ದಾರೆ. ದೀಪೋತ್ಸವದ ಪ್ರಯುಕ್ತ ಎಲ್ಲರೂ ಮನೆಯ ಹೊರಗೆ ಇದ್ದ ಕಾರಣದಿಂದ ಜನರಿಗೆ ಬೆಂಕಿ ಬಹುಬೇಗ ಕಾಣಿಸಿದೆ. ಆದುದರಿಂದ ಬೇಗ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ತಲ್ಲೀನವಿರುವಾಗ, ಪರಿಸರ ನಾಶದಂತಹ ವಿಕೃತಿ ಮೆರೆಯುವ ದುಷ್ಕರ್ಮಿಗಳ ಕೃತ್ಯಕ್ಕೆ ವ್ಯಾಪಕ ಆಕ್ರೋಶ ಕೇಳಿ ಬಂದಿದ್ದು, ಇಂತಹಾ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.