ಕೊಳ್ತಿಗೆ ಗ್ರಾಮದ ಉರುಂಬಿ | ಅಕ್ರಮವಾಗಿ ಮದ್ಯ ಮಾರಾಟ, ಆರೋಪಿ ಪರಾರಿ
ಕೊಳ್ತಿಗೆ ಗ್ರಾಮದ ಉರುಂಬಿ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿದ್ದು ಆರೋಪಿ ಓಡಿ ಪರಾರಿಯಾಗಿದ್ದು ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಎ.1 ರಂದು ನಡೆದಿದೆ.
ಬೆಳ್ಳಾರೆ ಪೊಲೀಸ್ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಕೋವಿಢ್ -19 ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯದ ವೇಳೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕುಂಟಿಕಾನ ಉರುಂಬಿ ಕಾಲೋನಿ ಎಂಬಲ್ಲಿ ಈ ಘಟನೆ ನಡೆದಿದೆ.
ಮನೆಯ ಹಿಂಬದಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯವನ್ನು ಶೇಖರಿಸಿ ವಶದಲ್ಲಿ ಇಟ್ಟುಕೊಂಡು ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ವಾಸನೆ ಪೊಲೀಸರಿಗೆ ಬಡಿದಿತ್ತು. ಯಾರೋ ಕುಡಿಯುವ ಅಭ್ಯಾಸ ಇಲ್ಲದವರು ಬಹುಶ: ತಿಳಿಸಿರಬೇಕು ! ಬಾಜೆಲ್ ಗೆ ಬರಗಾಲ ಇರುವ ಕಾಲದಲ್ಲಿ ಅಕ್ರಮ ಮದ್ಯ ಯಾರಿಗೆ ಬೇಡ ? ಹಾಗಾಗಿ ಆತನ ವ್ಯಾಪಾರ ಭರ್ಜರಿಯಾಗಿ ಸಾಗಿತ್ತು. ಆತ ಹೇಳಿದ್ದೇ ರೇಟು. ಮದ್ಯಪ್ರಿಯರಿಗೆ ಈಗ ರೇಟಿನ ಬಗ್ಗೆ ಚಿಂತೆಯಿಲ್ಲ. ಸಂಜೆಯ ಹೊತ್ತಿಗೆ ಒಟ್ಟಾರೆ ಎಣ್ಣೆ ಏಟು ತಲೆಗೇರಿದರೆ ಸಾಕು.
ಹಾಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಅಲ್ಲಿಗೆ ದಾಳಿ ನಡೆಸಿದಾಗ ಆರೋಪಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ. ಆದರೆ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಆರೋಪಿ ಹರೀಶ್ (24) ಉರುಂಬಿ ಕಾಲೋನಿ ಕುಂಟಿಕಾನ ಎಂಬಾತನು ಓಡಿ ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ 2 ರಟ್ಟಿನ ಬಾಕ್ಸ್ ಗಳಲ್ಲಿ ಪರಿಶೀಲಿಸಲಾಗಿ Mysore Lancer Whisky ಎಂಬ ಬ್ರಾಂಡಿನ ತಲಾ 180 ml ನ 48 ಕ್ವಾರ್ಟರ್ ಬಾಟಲ್ ಗಳು ಮತ್ತು ಇತರ ಕ್ವಾರ್ಟರ್ ಗಳು, ಶ್ಯಾಚೆಟ್ ಗಳು ಸಿಕ್ಕಿರುತ್ತದೆ.
ಕೊವಿಡ್ -19 ವೈರಸ್ ಸೋಂಕು ಹರಡದಂತೆ ಜಿಲ್ಲಾಡಳಿತವು ಎಲ್ಲಾ ಬಾರ್ ಮತ್ತು ವೈನ್ ಶಾಪ್ ಗಳನ್ನು ಮುಚ್ಚಿದ್ದರೂ ಆರೋಪಿಯು ಅದೆಲ್ಲಿಂದಲೋ ಮದ್ಯವನ್ನು ತಂದು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ತನ್ನ ಮನೆಯ ಬಳಿ ದಾಸ್ತಾನಿರಿಸಿ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಮದ್ಯವನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ.
ಓಡಿ ಪರಾರಿಯಾದ ಆರೋಪಿ ಹರೀಶನ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿದೆ. ಇರೋ ಒಂದು ಔಟ್ ಲೆಟ್ ಕೂಡಾ ಲಾಕ್ ಔಟ್ ಆದುದಕ್ಕೆ ಕುಡುಕರಿಗೆ ಫುಲ್ಲು ಬೇಜಾರು.
ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ