ದೆಹಲಿ ಮರ್ಕಜ್ ಕೊರೋನಾ ಅಪ್ಡೇಟ್ । ಕಳೆದ 24 ಗಂಟೆಯಲ್ಲಿ 386 ಸೋಂಕು !
ನವದೆಹಲಿ : ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕಳೆದ 24 ಗಂಟೆಯಲ್ಲಿ 386 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.
ದೆಹಲಿಯ ತಬ್ಲಿಘಿ ಜಮಾತ್ ನಲ್ಲಿ ಪಾಲ್ಗೊಂಡಿದ್ದವರು ದೇಶಾದ್ಯಂತ ಸಂಚರಿಸಿದ್ದು, ಇದರ ಪರಿಣಾಮ ಸೋಂಕು ಹೆಚ್ಚಾಗಿದೆ. ಮರ್ಕಜ್ ನಿಜಾಮುದ್ದೀನ್ ನಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,637 ಕ್ಕೆ ಏರಿಕೆಯಾಗಿ, 38 ಮಂದಿ ಮೃತಪಟ್ಟಿದ್ದಾರೆ ಎಂದವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಸಂಪುಟ ಕಾರ್ಯದರ್ಶಿ ಅವರು ಇಂದು ವಿಡಿಯೋ ಸಂವಾದ ನಡೆಸಿದ್ದು, ವಲಸೆ ಕಾರ್ಯಕರ ಹಿತರಕ್ಷಣೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದ್ದಾರೆ. ಕೊರೋನಾ ಚಿಕಿತ್ಸೆಗಾಗಿ ರೈಲ್ವೆ ಇಲಾಖೆ 2 ಲಕ್ಷಕ್ಕೂ ಹೆಚ್ಚು ಐಸೋಲೇಷನ್ ಹಾಸಿಗೆಗಳನ್ನು ಸಿದ್ಧಪಡಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 20000 ಬೆಡ್ ಗಳು ಸಿದ್ಧವಾಗುತ್ತಿವೆ ಎಂದರು. ಕೊರೋನಾ ವ್ಯಾಪಿಸಲು ಯಾರು ಕಾರಣ ಎಂದು ಹುಡುಕುತ್ತ ಕೂರಲು ಇದು ಸಂದರ್ಭ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಈಗಿನ ಪ್ರಾಮುಖ್ಯತೆ ಏನಂದ್ರೆ ಎಲ್ಲೆಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತವೋ ಅಲ್ಲೆಲ್ಲ ನಮಗೆ ಸಾಧ್ಯವಾದಷ್ಟು ರೀತಿಯಲ್ಲಿ ಕ್ವಾರಂಟೈನ್ ಪ್ರಕ್ರಿಯೆ ನಡೆಸಬೇಕಿದೆ ಎಂದು ಹೇಳಿದರು.
ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಾರ್ಕಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ವಾಪಸ್ ಆದವರ ಪೈಕಿ ದಿಲ್ಲಿಯಲ್ಲೇ ಕನಿಷ್ಠ 441 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಸಮಾವೇಶದಲ್ಲಿ ಪಾಲ್ಗೊಂಡು ವಾಪಸಾದವರ ಪೈಕಿ ಈಗಾಗಲೇ 10 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2100 ಮಂದಿ ಸೇರಿದ್ದ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ದೆಹಲಿಯಲ್ಲಿ ಲಾಕ್ ಡೌನ್ ಆದೇಶದ ನಡುವೆಯೂ ಮಸೀದಿಗಳಲ್ಲಿ ನೆಲೆಸಿದ್ದವರ ವಿರುದ್ಧ ಸಿಎಂ ಕೇಜ್ರಿವಾಲ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಸೀದಿ ಆಡಳಿತ ಮಂಡಳಿ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇಡೀ ಮಸೀದಿಯನ್ನು ಖಾಲಿ ಮಾಡಿಸಿ ಮಸೀದಿಯಲ್ಲಿದ್ದವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.