ಪುತ್ತೂರಿನ ಜನರಲ್ಲಿ ಸಾಮಾಗ್ರಿ ಕೊಳ್ಳುವ ಸಂಭ್ರಮ | 3 ದಿನಗಳ ಬಳಿಕ ಜನವೋ ಜನ

ಕಳೆದ ಮೂರು ದಿನಗಳಿಂದ ಯಾರೋ ಕೂಡಿ ಹಾಕಿದಂತೆ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಗಾಗಿ ಶ್ರದ್ಧೆಯಿಂದ ಲಾಕ್ ಡೌನ್ ಆದೇಶ ಪಾಲಿಸಿದ ಪುತ್ತೂರಿನ ಮಂದಿಗೆ ಇವತ್ತು ಎಂದಿಗಿಂತ ಬೇಗ ಎಚ್ಚರವಾಗಿದೆ.

ಇವತ್ತು ಫ್ರೆಶ್ ಆಗಿ ಬಗಲಲ್ಲಿ ದೊಡ್ಡ ಬ್ಯಾಗ್ ಹಿಡಿದುಕೊಂಡು ಪೇಟೆಗೆ ಇಳಿದಿದ್ದಾರೆ. ಹಾಗಾಗಿ ಅಂಗಡಿಗಳ ಮುಂದೆ ಜನವೋ ಜನ.
ಕೆಲವರು ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದರೆ ಇನ್ನೂ ಹಲವಾರು ಜನ ಯಾವುದೇ ಮಾಸ್ಕ್ ಹಾಕದೆ ಬಂದಿದ್ದರು. ಅಲ್ಲದೆ ಸರದಿ ಸಾಲಿನಲ್ಲಿ ನಿಂತಿದ್ದ ಹಲವಾರು ಮಂದಿ ಯಾವುದೇ ಪ್ರೊಟೆಕ್ಷನ್ ಇಲ್ಲದೆ ಬಂದಿದ್ದರು. ಅವರನ್ನು ಹೊಸಕನ್ನಡ ತಂಡ ಪ್ರಶ್ನಿಸಿತು. ಯಾಕೆ ಮಾಸ್ಕ್ ಇಲ್ಲದೆ ಈ ರೀತಿ ಕ್ಯೂ ನಲ್ಲಿ ನಿಂತಿದ್ದೀರಿ ಎಂದಾಗ, ” ಇತ್ತೆ ಬತ್ತಿನ, ಆಂಡ್… ಪೋಪಿನನೆ ನನ ” ಅಂದರು. ಅವರೇನೋ ಈಗ ತಾನೇ ಬಂದಿರಬಹುದು. ಆದರೆ ಕೋರೋನಾಗೆ ಹೇಗೆ ಗೊತ್ತಾಗಬೇಕು ಅವರು ಈಗ ತಾನೇ ಬಂದ ವಿಷಯ?

ಪುತ್ತೂರಿನ ಮಾಂಸದಂಗಡಿಗಳ ಮುಂದೆ ಅರಳಿದ ಕಣ್ಣುಗಳ ಜನ

ತುಂಬಾ ದಿನದಿಂದ ಮೀನು ಊಟ ಸವಿಯದೆ, ಮೂಳೆ ಕಡಿಯದೆ ಬಾಯಿ ನಾಲಿಗೆ ಹಾಳು ಮಾಡಿಕೊಂಡ ಜನ ಸಾಲಿನಲ್ಲಿ ನಿಂತು ಕೋಳಿ ಮತ್ತು ಮಟನ್ ಖರೀದಿಸುತ್ತಿದ್ದಾರೆ. ರಾಜ್ಯದ ಟಿವಿ ಗಳಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ಮಟನ್ ಚಿಕನ್ ತಿನ್ನದಿದ್ದರೆ ಜನರಿಗೆ ಏನಾಗುತ್ತದೆ ? ದಕ್ಷಿಣ ಕನ್ನಡದಲ್ಲಿ ಮೀನು ಮಾರುಕಟ್ಟೆಗೆ ಜನ ಮುಗಿಬೀಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಮೀನು ತಿನ್ನಲೇಬೇಕಾ ಎನ್ನುವಂತಹ ವ್ಯಾಖ್ಯಾನಗಳು ಬರುತ್ತಿವೆ. ಒಟ್ಟಾರೆ ದಕ್ಷಿಣಕನ್ನಡ ಜನರಿಗೆ ಮೀನು ಮಾಂಸ ಜೀವನಾವಶ್ಯಕ ಸಂಗತಿ. ಯಾವುದೇ ಸನ್ನಿವೇಶದಲ್ಲಿಯೂ ಜನ ಅದನ್ನು ಬಿಡಲು ತಯಾರಿಲ್ಲ.

ದರ್ಬೆ ಯಲ್ಲಿರುವ ರಿಲಯನ್ಸ್ ಸ್ಮಾರ್ಟ್, ನೆಹರುನಗರದ ಮಂಗಲ್ ಸ್ಟೋರ್ಸ್ ಮುಂದೆ ಕಿಲೋಮೀಟರ್ ಗಟ್ಟಲೆ ಜನ ಸರತಿ ಸಾಲಿನಲ್ಲಿ ನಿಂತಿದ್ದರು.

ಪುತ್ತೂರಿನ ದರ್ಬೆ, ಬೊಳುವಾರು, ಬಸ್ಸ್ಟ್ಯಾಂಡ್ ಪಕ್ಕ, ಕುಂಬ್ರ, ಕೌಡಿಚ್ಚಾರು, ತಿಂಗಳಾಡಿ, ಕೆಯ್ಯೂರು, ಈಶ್ವರ ಮಂಗಲ, ಸುಳ್ಯಪದವು, ಸಂಪ್ಯ, ಉಪ್ಪಿನಂಗಡಿ, ಮುಂತಾದ ಸ್ಥಳಗಳಲ್ಲಿ ಅಲ್ಲದೆ ಸವಣೂರು, ಕಡಬ, ಸುಬ್ರಹ್ಮಣ್ಯ ಮುಂತಾದ ಕಡೆಗಳಲ್ಲಿಯೂ ಜನರು ಅಂಗಡಿಗಳ ಮುಂದೆ ಕ್ಯೂ ನಿಂತು ತಮಗೆ ಅಗತ್ಯವಿರುವ ಸಾಮಾನುಗಳ ಖರೀದಿಯಲ್ಲಿ ತೊಡಗಿದ್ದಾರೆ. ಈ ದೃಶ್ಯ ದಕ್ಷಿಣ ಕನ್ನಡದ ಎಲ್ಲ ಕಡೆಯೂ ಸಾಮಾನ್ಯವಾಗಿ ಕಂಡುಬರುತ್ತಿದೆ.

ಜನರು ಪುತ್ತೂರು ಪೇಟೆಯಲ್ಲಿ ಸಾಮಾನು ಖರೀದಿಸುವಾಗ ಅಲ್ಲಲ್ಲಿ ನಗರ ಸಭೆಯಿಂದ ಮತ್ತು ಪೋಲೀಸರ ಕಡೆಯಿಂದ ಮೈಕಿನಲ್ಲಿ ಘೋಷಣೆ ಕೇಳಿಬರುತ್ತಿತ್ತು. ಇವತ್ತು ಸಂಜೆ 3 ಗಂಟೆಯೊಳಗೆ ಪೂರ್ತಿ ಪುತ್ತೂರು, ಮತ್ತೆ ನಿನ್ನೆಯ ವಾತಾವರಣಕ್ಕೆ ಮರಳಬೇಕೆಂಬ ವಿನಂತಿಭರಿತ ಎಚ್ಚರಿಕೆ ಕೇಳಿಬರುತ್ತಿತ್ತು. ಆ ಮೈಕಿನ ಸಡ್ಡು ಕೇಳಿ ಬಂದಾಗ ಜನರಲ್ಲಿ ಒಂದು ಥರದ ಅವಸರ. ಬೇಗ ಬ್ಯಾಗು ತುಂಬಿಸಿಕೊಂಡು ಮನೆ ಸೇರುವ ಹುನ್ನಾರ !

ಬೆಳ್ತಂಗಡಿ, ಸುಳ್ಯ, ಕಡಬ, ಸುಬ್ರಮಣ್ಯ, ಉಜಿರೆ, ಧರ್ಮಸ್ಥಳ, ಉಪ್ಪಿನಂಗಡಿ, ಪುಂಜಾಲಕಟ್ಟೆ- ಹೀಗೆ ಪೇಟೆಗಳು ಹಲವು. ದೃಶ್ಯ ಒಂದೇ : ಅಗತ್ಯ ವಸ್ತುಗಳು ಖಾಲಿಯಾದ ಮನೆಗಳು, ” ಪೋಲೆ ಸಾಮಾನ್ ಕಣಲೆ. ಇಜ್ಜಾ೦ಡ ಮದ್ಯಾನಗ್ ಬರೆಲ್ಲೊಡಾತೆ ” ಅಂತ ಗಂಡನನ್ನು ದಬ್ಬುವ ಹೆಂಡತಿಯರು, ಸರದಿಯಲ್ಲಿ ತನ್ನ ಹಿಂದೆ ಮುಂದೆ ನಿಂತ ಜನರನ್ನೇ ಅನುಮಾನದಿಂದ ಕಿರುಗಣ್ಣಿನಲ್ಲೇ ಗಮನಿಸಿ ಕೊರೋನಾ ಅನುಮಾನಿಸುವ ವ್ಯಕ್ತಿಗಳು ; ಒಂದು ಐಟಂ ಕಮ್ಮಿ ಆದರೂ ಪರವಾಗಿಲ್ಲ, ಮಾಂಸದಂಗಡಿಗೇ ಮೊದಲು ಹೋಗೋಣ, ಆಮೇಲೆ ಖಾಲಿಯಾದರೆ ಎಂಬ ಚಿಂತೆಯ ಮಾಂಸಪ್ರಿಯರು, ಇವರೆಲ್ಲರನ್ನೂ ಸಂಜೆ ಮೂರರೊಳಗೆ ಮನೆಗೆ ಕಳುಹಿಸಿ, ಕೊನೆಗೆ ಆತನ್ನ ಮನೆಗೆ ಸಾಮಾನು ಕಟ್ಟಿಸಿಕೊಳ್ಳಲು ಪ್ಲಾನ್ ಹಾಕುತ್ತಿರುವ ಪೊಲೀಸರು ! ಎಲ್ಲ ಸೇರಿದರೆ ಅದು ಇವತ್ತಿನ ದಕ್ಷಿಣ ಕನ್ನಡ !

ಕೋರೋನಾ ಸೋಂಕಿತರ ಸುಶ್ರೂಷೆಗೈದ ನರ್ಸ್ ಗೆ ವೈರಸ್ ಸೋಂಕು | ಗುಣಮುಖರಾದ 93 ವರ್ಷದ ವೃದ್ಧ ದಂಪತಿ

Leave A Reply

Your email address will not be published.