ಬೆಳ್ತಂಗಡಿ | ನೆರಿಯದಲ್ಲಿ ನೀರಿಗೆ ವಿಷ ಹಾಕಿ ಮೀನುಗಳ ಮಾರಣ ಹೋಮ,ನವಿಲು ಸಾವು

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕೊಲ್ನ ನದಿ ಬದಿಯಲ್ಲಿ ಯಾರೋ ದುಷ್ಕರ್ಮಿಗಳ ದುರಾಸೆಗೆ ಮೀನುಗಳು ವಿಲ ವಿಲ ಒದ್ದಾಡಿ ಪ್ರಾಣಬಿಟ್ಟಿವೆ. ಅಲ್ಲಿ ನದಿಗೆ ಮೀನು ಹಿಡಿಯಲು ನದಿಗೆ ಅಡಕೆ ಗಿಡಕ್ಕೆ, ಕೊಳೆ ರೋಗಕ್ಕೆ ಬಳಸುವ ಮೈಲುತುತ್ತು ಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಮೀನುಗಳು ಸಾವನ್ನಪ್ಪಿವೆ. ಇದೇ ವಿಷಪೂರಿತ ನೀರನ್ನು ಕುಡಿದು ನವಿಲುಗಳು ಕೂಡಾ ಸಾವನ್ನಪ್ಪಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನದೀ ತೀರದಲ್ಲಿ ವಾಸಿಸುವ ಮಂದಿ ಮತ್ತು ಮೀನು ಹಿಡಿಯಲು ಉತ್ಸಾಹ ತೋರುವ ಮಂದಿ ಈ ಕಾಪರ್ ಸಲ್ಫೇಟ್ ಪದಾರ್ಥ ಬಳಸಿ ನದಿ ಮೀನು ಹಿಡಿಯಲು ಮುಂದಾಗುವ ಮೂಲಕ ನದಿ ನೀರನ್ನು ಕಲುಷಿತ ಗೊಳಿಸುತ್ತಿದ್ದಾರೆ. ಅಲ್ಲದೆ ನದಿಗೆ ಈ ರೀತಿ ವಿಷಕಾರಿ ಪದಾರ್ಥ ಹಾಕುವುದರಿಂದ ದೊಡ್ಡ ಮೀನುಗಳು ಅಲ್ಲದೆ ಚಿಕ್ಕಪುಟ್ಟ ಮೀನುಗಳು, ಜಲಚರಗಳು ಕೂಡಾ ಸತ್ತುಹೋಗುತ್ತವೆ.

ಸಾಂದರ್ಭಿಕ ಚಿತ್ರ

ಈಗ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯಲು ಯಾರೂ ತೊಂದರೆ ಕೊಡುವುದಿಲ್ಲ. ಆದರೆ ಕಾಪರ್ ಸಲ್ಫೇಟ್ ಬಳಸಲು ಅನುಮತಿ ಇಲ್ಲ. ಜನರು ಕೆಳಗೆ ಬಲೆ ಹಾಕಿ ಅ ನಂತರ ಮೇಲೆ ಹೋಗಿ ಅಲ್ಲಿ ಮೀನುಗಳು ಇರುವ ಒಂದು ನೀರು ಹರಿವು ಇರುವ ಜಾಗದಲ್ಲಿ ಈ ಮೈಲುತುತ್ತನ್ನು ಹಾಗೆಯೇ ಬಟ್ಟೆಯಲ್ಲಿ ಕಟ್ಟಿ ಇಡುತ್ತಾರೆ.

ನಿಧಾನವಾಗಿ ಕರಗುವ ಮೈಲುತುತ್ತಿನ ಖಾರಕ್ಕೆ ಮೀನುಗಳೆಲ್ಲ ದಿಕ್ಕಾಪಾಲಾಗಿ ಓಡಿ ಕೆಳಗೆ ಕಟ್ಟಿದ್ದ ಬಲೆಗೆ ಬೀಳುತ್ತವೆ. ಜಾಸ್ತಿ ಮೀನು ಹಿಡಿಯಬೇಕೆಂದು ಜನ ಈ ವಿಷ ವಸ್ತು ಬಳಸುತ್ತಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಸುತ್ತ ಮುತ್ತಲ ಅಣಿಯೂರು, ಪಿಲಿಕಳ, ನೆರಿಯಾ, ಉಂಬಾಜೆ ಮುಂತಾದ ಊರಿನವರು ತಮ್ಮ ಜೀವನಾವಶ್ಯಕತೆಗಾಗಿ ಇದೇ ನೀರನ್ನು ಅವಲಂಬಿಸಿದ್ದಾರೆ. ಈ ನದೀ ನೀರು ಮಲಿನತೆ ಮತ್ತು ಮೀನು ಮರಣದ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಆರೋಪಿಗಳ ಪತ್ತೆಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave A Reply

Your email address will not be published.