ಕೊರೋನಾ ಕೊಡುಗೆ ನೀಡಿದ ಚೀನಾದಿಂದ ಜಗತ್ತಿಗೆ ಮತ್ತೊಂದು ರೋಗ ‘ ಹಂಟಾ’ !
ಚೀನಾ, ಯುನ್ನಾನ್ : ಕೊರೋನಾ ವೈರಸ್ ನಿಂದ ಜಗತ್ತು ತತ್ತರಗೊಂಡು ತಲ್ಲಣಿಸಿರುವಾಗಲೇ ಇದೀಗ ಚೀನಾದಲ್ಲಿ ಮತ್ತೊಂದು ವೈರಾಣು ಉದ್ಭವವಾಗಿದೆ. ಕೊರೋನಾವನ್ನು ಕೊಡುಗೆ ನೀಡಿದ ಚೀನಾದಿಂದ ಜಗತ್ತಿಗೆ ಮತ್ತೊಂದು ಹೊಸ ರೋಗ ಜಗತ್ತಿಗೆ ಪರಿಚಯವಾಗುತ್ತಿದೆ, ‘ Made in Chaina ‘ ಲೇಬಲ್ಲಿನೊಂದಿಗೆ !
ಈಗ ಹುಟ್ಟಿದ ಹೊಸ ವೈರಸ್ ನ ಹೆಸರೇ ಹಂಟಾ.
ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಹಂಟಾ ಎಂಬ ಹೊಸ ವೈರಸ್ ಪ್ರಕರಣ ಪತ್ತೆಯಾಗಿದ್ದು, ಯುನ್ನಾನ್ ನಲ್ಲಿ ಈಗಾಗಲೇ ಓರ್ವ ವ್ಯಕ್ತಿ ಆ ವೈರಸ್ ಗೆ ಬಲಿಯಾಗಿದ್ದಾನೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಅಧಿಕೃತ ಟ್ವೀಟ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಗ್ಲೋಬಲ್ ಟೈಮ್ಸ್ ನ ಟ್ವೀಟ್ ಪ್ರಕಾರ ಶಾಂಡೊಂಗ್ ಪ್ರಾಂತ್ಯದ ಯುನ್ನಾನ್ ಪ್ರದೇಶದಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದ ಓರ್ವ ವ್ಯಕ್ತಿ, ಹಂಟಾ ವೈರಸ್ ಗೆ ತುತ್ತಾಗಿ ಬಸ್ ನಲ್ಲೇ ಸಾವನ್ನಪ್ಪಿದ್ದಾನೆ.
ಜ್ವರ, ತಲೆನೋವು, ಸುಸ್ತು, ಮೈ ಕೈ ನೋವು, ತಲೆ ತಿರುಗುವುದು, ಹೊಟ್ಟೆನೋವು ಮುಂತಾದ ಲಕ್ಷಣಗಳನ್ನು ತೋರ್ಪಡಿಸುವ ರೋಗವು ಕೊನೆಯ ಹಂತದಲ್ಲಿ ಉಸಿರಾಟದ ಸಮಸ್ಯೆಯನ್ನು ತಂದೊಡ್ಡುತ್ತದೆ. ಸೋಂಕಿತ ವ್ಯಕ್ತಿಗೆ ಕಿಡ್ನಿ ಫೇಲ್ಯೂರ್ ಕೂಡಾ ಆಗುತ್ತದೆ. ಹಂಟ ವ್ಯಾಧಿಯಲ್ಲಿ ಸಾಯುವ ಸಾಧ್ಯತೆ 38 % ಇದೆ ಎನ್ನಲಾಗಿದೆ.
ಇದ್ದುದರಲ್ಲೇ ಇರುವ ಒಂದು ಸಮಾಧಾನಕರ ಸಂಗತಿ ಎಂದರೆ ಈ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಧ್ಯತೆ ತುಂಬಾ ಕಡಿಮೆ ಅಂತೆ. ಹಂಟಾ ಇಲಿಗಳ ಮಲ ಮೂತ್ರದಿಂದ ಹರಡುತ್ತದೆ. ಅಲ್ಲದೆ ಇಲಿಗಳನ್ನು ತಿನ್ನುವುದರಿಂದಲೂ ಹರಡುತ್ತದೆ ಎನ್ನಲಾಗಿದೆ. ಈಗಾಗಲೇ ಈ ವೈರಾಣು ಚೀನಾ ಬಿಟ್ಟರೆ ಅರ್ಜೆಂಟೀನಾದಲ್ಲಿ ಪತ್ತೆ ಆಗಿದೆ. ಆ ದಿನ ಅಂತ ವೈರಸ್ ನಿಂದಾಗಿ ತೀರಿಕೊಂಡ ವ್ಯಕ್ತಿಯ ಜತೆ ಪ್ರಯಾಣಿಸಿದ್ದ ಎಲ್ಲಾ 32 ಸಹ ಪ್ರಯಾಣಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ಲ್ಯಾಬ್ ರಿಪೋರ್ಟ್ ಇನ್ನೂ ಕೈ ಸೇರಬೇಕಿದೆ.
ಇಲಿಗಳಿಂದ ಮನುಷ್ಯನಿಗೆ ಹರಡುವ ವೈರಾಣು ಇದಾಗಿದ್ದು, ಈ ಭಯಾನಕ ವೈರಸ್ ಬಗ್ಗೆ ಈಗಾಗಲೇ ಭಯ ಶುರುವಾಗಿದೆ. ಕೋರೋನಾ ಮನುಷ್ಯನನ್ನು ಕೊಲ್ಲುತ್ತಾ ಹೊರಟಿದ್ದಾಗ, ಇನ್ನೆಲ್ಲಿ ಈ ಹೊಸ ಹಂಟಾ ಮನುಷ್ಯರ ಹಂಟಿಂಗ್ ಮಾಡುತ್ತಾ ಎಂಬ ಆತಂಕ ಸೃಷ್ಟಿಯಾಗಿದೆ.