Home Education ರೈತರ ಮಕ್ಕಳೇ ನಿಮಗೊಂದು ಗುಡ್ ನ್ಯೂಸ್!

ರೈತರ ಮಕ್ಕಳೇ ನಿಮಗೊಂದು ಗುಡ್ ನ್ಯೂಸ್!

Hindu neighbor gifts plot of land

Hindu neighbour gifts land to Muslim journalist

ಸರ್ಕಾರ ವಿದ್ಯಾರ್ಥಿಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ನೆರವು, ಸ್ಕಾಲರ್ ಶಿಪ್ ಜೊತೆಗೆ ಶಿಕ್ಷಣ ಬೆಂಬಲಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಜಾರಿಗೆ ತಂದಿದೆ. ಇದೀಗ, ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಘೋಷಣೆ ಮಾಡಿದೆ. ರೈತ ವಿದ್ಯಾನಿಧಿ ವಿಸ್ತರಣೆ ಮಾಡಿರುವ ಕುರಿತು ಸರ್ಕಾರ ಮಾಹಿತಿ ನೀಡಿದೆ.

ರೈತ ವಿದ್ಯಾನಿಧಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯಾಗಿದ್ದು, ಇದನ್ನು ಮಾನ್ಯ ಮುಖ್ಯಮಂತ್ರಿಗಳು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಂದು ಘೋಷಣೆ ಮಾಡಿದ್ದಾರೆ. ಆದರೆ, ಇದೀಗ, ಈ ಯೋಜನೆಯ ರೈತರ ಮಕ್ಕಳಿಗೆ ಮಾತ್ರ ಅನ್ವಯವಾಗದೆ ಕೃಷಿಕಾರ್ಮಿಕರ ಮಕ್ಕಳ ಜೊತೆಗೆ ಮೀನುಗಾರರು,ನೇಕಾರರು,ಕಾರ್ಮಿಕರು ಮತ್ತು ಅಟೋ ಟ್ಯಾಕ್ಸಿ ಚಾಲಕರ ಮಕ್ಕಳಿಗೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತಿದ್ದು ಈ ಯೋಜನೆಯಿಂದ 14 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ ಲಭಿಸಲಿದೆ.

ಈ ವಿದ್ಯಾರ್ಥಿ ವೇತನ ಪಡೆಯಲು 8, 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಮತ್ತು ಎಸ್ ಎಸ್ ಎಲ್ ಸಿ /10 ನೇ ತರಗತಿಯನ್ನು ಪೂರೈಸಿರುವ ರೈತರ ಮಕ್ಕಳು ಅರ್ಹರಾಗಿದ್ದಾರೆ. ಇವರ ಜೊತೆಗೆ ಕರ್ನಾಟಕ ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆ/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳು ಕೂಡ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.

ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆಗಳು:

ಸ್ವಂತ ಹೆಸರಿನಲ್ಲಿ ಜಮೀನು ಹೊಂದಿರುವ ರೈತರ ಮಕ್ಕಳು ಅಲ್ಲದೆ, ರೈತ ಕುಟುಂಬದ ಎಲ್ಲ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗುತ್ತಾರೆ. ವಿದ್ಯಾರ್ಥಿಗಳು ಈಗಾಗಲೇ ಯಾವುದೇ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೂ ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ. ಆದರೆ, ಪುನರಾವರ್ತಿತ ವಿದ್ಯಾರ್ಥಿಗಳು ಮಾತ್ರ ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುವುದಿಲ್ಲ ಎಂಬುದನ್ನು ಗಮನಿಸಬೇಕು.

ಈ ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ವರ್ಗಾಯಿಸಲಾಗುತ್ತದೆ. ವಿದ್ಯಾರ್ಥಿ ವೇತನವನ್ನು ಅರ್ಹತೆ ಆಧಾರದ ಮೇಲೆ ಜೊತೆಗೆ ಸಲ್ಲಿಸಿದ ಅರ್ಜಿ ಎರಡರ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

ಇ -ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ(portal) ನಿಂದ ಕೃಷಿ ಇಲಾಖೆಗೆ ಅರ್ಹ ವಿದ್ಯಾರ್ಥಿಗಳ ದಾಖಲಾತಿಗಳನ್ನು ವಿದ್ಯಾರ್ಥಿ ವೇತನ ವರ್ಗಾವಣೆಗಾಗಿ ನೀಡಲಾಗುತ್ತಿದೆ.

ವಾರ್ಷಿಕ ಶಿಷ್ಯ ವೇತನದ ವಿವರ:

* ಪ್ರೌಢ ಶಿಕ್ಷಣ (8 ರಿಂದ 10ನೇ ತರಗತಿ) ವಿದ್ಯಾರ್ಥಿನಿಯರು ಅಥವಾ ಅನ್ಯಲಿಂಗದವರಿಗೆ-2000 ರೂ. ದೊರೆಯಲಿದೆ.

* ಪದವಿಯ ಮುಂಚೆ ಪಿಯುಸಿ/ ಐಟಿಐ /ಡಿಪ್ಲೋಮ ವಿದ್ಯಾರ್ಥಿಗಳು/ ಪುರುಷರು-ರೂ.2500 ಹಾಗೂ ವಿದ್ಯಾರ್ಥಿನಿಯರು/ ಅನ್ಯಲಿಂಗದವರು-ರೂ 3000ಪಡೆಯಬಹುದು.

* ಎಲ್ಲಾ ಬಿಎ ಬಿಎಸ್ಸಿ ಬಿಕಾಂ ಇತ್ಯಾದಿ (ಎಂಬಿಬಿಎಸ್, ಬಿಇ/ಬಿ ಟೆಕ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ)ವಿದ್ಯಾರ್ಥಿಗಳು/ ಪುರುಷರು -ರೂ 5000 ಹಾಗೂ ವಿದ್ಯಾರ್ಥಿನಿಯರು / ಅನ್ಯಲಿಂಗದವರು-ರೂ 5500 ಪಡೆಯಬಹುದು.

* ಎಲ್ ಎಲ್ ಬಿ, ಪ್ಯಾರಾಮೆಡಿಕಲ್, ಬಿ ಫಾರ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಗಳು ವಿದ್ಯಾರ್ಥಿಗಳು/ ಪುರುಷರು-ರೂ.7500 ವಿದ್ಯಾರ್ಥಿನಿಯರು / ಅನ್ಯಲಿಂಗದವರು-ರೂ 8000 ಪಡೆಯಬಹುದು.

* ಎಂಬಿಬಿಎಸ್, ಬಿ ಇ/ಬಿ ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳು ವಿದ್ಯಾರ್ಥಿಗಳು/ ಪುರುಷರು-ರೂ 10,000ವಿದ್ಯಾರ್ಥಿನಿಯರು/ ಅನ್ಯಲಿಂಗದವರು-ರೂ 11,000 ಪಡೆಯಬಹುದು.

ಈ ಯೋಜನೆಗೆ ಅರ್ಹರಾದ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.ಪುನರಾವರ್ತಿತ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯ ಪಡೆಯಲು (REPEATORS) ಅರ್ಹರಿರುವುದಿಲ್ಲ.