Home latest ವಿದ್ಯಾಭ್ಯಾಸ ಮುಂದುವರೆಸಲು ಆಸಕ್ತಿಯಿದ್ದ ಮಗಳಿಗೆ ಮದುವೆಯಾಗಲು ಒತ್ತಾಯ | ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ನೀಡುವಂತೆ ನ್ಯಾಯಾಲಯ...

ವಿದ್ಯಾಭ್ಯಾಸ ಮುಂದುವರೆಸಲು ಆಸಕ್ತಿಯಿದ್ದ ಮಗಳಿಗೆ ಮದುವೆಯಾಗಲು ಒತ್ತಾಯ | ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ನೀಡುವಂತೆ ನ್ಯಾಯಾಲಯ ಆದೇಶ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ವಿದ್ಯಾಭ್ಯಾಸ ಮುಂದುವರೆಸಲು ಆಸಕ್ತಿಯಿದ್ದ ಮಗಳನ್ನು ಪೋಷಕರು ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಆಕೆ ಮನೆ ಬಿಟ್ಟು ಹೋಗಿದ್ದಳು. ಬಾಲಕಿ ಮನವಿ ಆಲಿಸಿದ ಹೈಕೋರ್ಟ್, ಆಕೆಗೆ ಬಾಲಮಂದಿರದಲ್ಲಿ 3 ಇದ್ದು ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಿಕೊಟ್ಟಿದೆ.

ಶಿಕ್ಷಣ ಮೊಟಕುಗೊಳಿಸಿ ಮದುವೆಯಾಗುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ ಎಂಬ ಕಾರಣಕ್ಕೆ ಹದಿನೇಳುವರೆ ವರ್ಷದ ಅಪ್ರಾಪ್ತಯೊಬ್ಬಳು ಮನೆಬಿಟ್ಟು ಗೋವಾದಲ್ಲಿರುವ ಸಹೋದರನ ಮನೆಗೆ ಹೋಗಿದ್ದಳು. ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯನ್ನು ಯಾರೋ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದ ಪೋಷಕರು, ಹುಡುಕಿಕೊಡುವಂತೆ ಪೊಲೀಸರಿಗೆ ನಿರ್ದೇಶನ ಕೋರಿ ತಾಯಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ನಿರ್ದೇಶನದ ಮೇರೆಗೆ ಗದಗದ ಲಕ್ಷೇಶ್ವರ ಠಾಣೆ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿ ಶುಕ್ರವಾರ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ, ಬಾಲಕಿಗೆ ಪೋಷಕರೊಟ್ಟಿಗೆ ಹೋಗಲು ಸೂಚಿಸಿತು.

ಈ ವೇಳೆ ಬಾಲಕಿ ನಿರಾಕರಿಸಿದಳು. ಜತೆಗೆ ಸರಕಾರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪೋಷಕರು ಶಿಕ್ಷಣ ಮೊಟಕುಗೊಳಿಸಿ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ, ಬಾಲಕಿ ಮನೆ ಬಿಟ್ಟು ಹೋಗಿದ್ದಳು ಎಂದರು.

ಇದೇ ವೇಳೆ ಬಾಲಕಿ ಕೂಡ ಪೋಷಕರೊಂದಿಗೆ ಮನೆಗೆ ಹೋಗುವುದಿಲ್ಲ ಎಂದು ತಿಳಿಸಿದಳಲ್ಲದೇ, ಬೇರೆಡೆ ಉಳಿಯಲು ಅವಕಾಶ ಕೋರಿದಳು. ತಾಯಿ ಪರ ವಕೀಲರು, ಅಪ್ರಾಪ್ತಳನ್ನು ಅಪಹರಿಸಲಾಗಿದೆ. ಈ ವಿಚಾರವನ್ನು ಪೊಲೀಸರು ಮರೆಮಾಚಿದ್ದಾರೆ. ಪೋಷಕರು ಆಕೆಗೆ ಮದುವೆಯಾಗುವಂತೆ ಅಥವಾ ಶಿಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿಲ್ಲ. ಹೀಗಾಗಿ, ಬಾಲಕಿಯನ್ನು ಪೋಷಕರಜತೆ ಕಳುಹಿಸಿಕೊಡಬೇಕು ಎಂದು ಕೋರಿದರು.

ನ್ಯಾಯಮೂರ್ತಿಗಳು ಮತ್ತೆ ವಿಚಾರಿಸಿದಾಗ ಬಾಲಕಿ ತಾನು ಪೋಷಕರೊಂದಿಗೆ ಹೋಗಲು ಸಿದ್ಧವಿಲ್ಲ. ಬಾಲಮಂದಿರಕ್ಕೆ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದಳು. ಬಾಲಕಿಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ನ್ಯಾಯಾಲಯಕ್ಕೆ ಮಗುವಿನ ಕಲ್ಯಾಣವೇ ಮುಖ್ಯವಾಗಿದೆ. ಹೀಗಾಗಿ ಆಕೆಯನ್ನು ಸುರಕ್ಷತೆ ದೃಷ್ಟಿಯಿಂದ ಗದಗದ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ಬಾಲಕಿಯರ ಮಂದಿರಕ್ಕೆ ಬಿಡುವಂತೆ ಲಕ್ಷೇಶ್ವರ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಗೆ ಸೂಚಿಸಿತು. ಅಲ್ಲದೇ, ಆಕೆ ವಯಸ್ಕಳಾಗುವರೆಗೆ ಅಥವಾ ಪೋಷಕರಜತೆ ಹೋಗಲು ಮನಸ್ಸು ಬದಲಾಯಿಸುವವರೆಗೆ ಬಾಲಕಿಯರ ಮಂದಿರದಲ್ಲಿ ಇರಿಸಬೇಕು. ಆಕೆ ವ್ಯಾಸಂಗ ಮುಂದುವರಿಸುವುದನ್ನು ಬಾಲಕಿಯರ ಮಂದಿರ ಖಾತರಿಪಡಿಸಬೇಕು. ಒಂದು ವೇಳೆ ಪೋಷಕರಜತೆ ಹೋಗಲು ಬಯಸಿದರೆ, ಆಕೆಯ ಸುರಕ್ಷತೆ ಮತ್ತು ಭವಿಷ್ಯಕ್ಕೆ ತೊಂದರೆ ಉಂಟು ಮಾಡುವುದಿಲ್ಲ ಎಂದು ಮುಚ್ಚಳಿಕೆ ಪಡೆದು ಪೋಷಕರೊಂದಿಗೆ ಕಳುಹಿಸಬೇಕು. ಬಾಲಕಿಯರ ಮಂದಿರದಲ್ಲಿ ಇರುವ ವೇಳೆ ಆಕೆ ಪೋಷಕರನ್ನು ಕಾಣಲು ಬಯಸಿದರೆ, ಅದಕ್ಕೆ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.