Home International UNESCO: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ‘ದೀಪಾವಳಿ’ ಹಬ್ಬ ಸೇರ್ಪಡೆ

UNESCO: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ‘ದೀಪಾವಳಿ’ ಹಬ್ಬ ಸೇರ್ಪಡೆ

Diwali holiday
image source: Daily Excelsior

Hindu neighbor gifts plot of land

Hindu neighbour gifts land to Muslim journalist

UNESCO: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರಿಸಲಾಗಿದೆ. ಇದು ಭಾರತದ ಸಂಸ್ಕೃತಿಗೆ ಸಿಕ್ಕ ಜಾಗತಿಕ ಮನ್ನಣೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿ ಭಾರತದ ಸಾಂಸ್ಕೃತಿಕ ಹಿರಿಮೆ ಮತ್ತು ಉದಾತ್ತತೆಯ ಪ್ರತೀಕ. ಸರ್ವಜನಾಂಗಗಳು ಕೂಡಿ ಆಚರಿಸುವ ವಿಶೇಷ ಹಬ್ಬವು ಯುನೆಸ್ಕೋದ (UNESCO) ‘ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿ’ಯಲ್ಲಿ ಸ್ಥಾನ ಪಡೆಯುವ ಮೂಲಕ ಜಾಗತಿಕ ಮನ್ನಣೆ ಪಡೆದಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆಚರಿಸುವ ಹಬ್ಬ, ಆಚರಣೆ ಮತ್ತು ವಿಶೇಷ ಸ್ಥಳಗಳನ್ನು ಗುರುತಿಸುತ್ತದೆ. ಅದರಂತೆ ಭಾರತದಲ್ಲಿ ಆಚರಿಸುವ ದೀಪಾವಳಿಯನ್ನು ತನ್ನ ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿಸಿ ಘೋಷಿಸಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಯುನೆಸ್ಕೋ, “ವಿಶಿಷ್ಟ ಹಬ್ಬವಾದ ದೀಪಾವಳಿಯನ್ನು ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಅಭಿನಂದನೆಗಳು ಭಾರತ” ಎಂದು ತಿಳಿಸಿದೆ.

ಭಾರತದಲ್ಲಿ ಯುನೆಸ್ಕೋ ಅಧಿವೇಶನ: ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಯುನೆಸ್ಕೋದ ಸಮಿತಿಯ ತನ್ನ 20ನೇ ಅಧಿವೇಶನವನ್ನು ಭಾರತದಲ್ಲಿ ನಡೆಸುತ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಡಿಸೆಂಬರ್​ 8 ರಿಂದ 13ರವರೆಗೆ ಇದನ್ನು ಆಯೋಜಿಸಲಾಗಿದೆ. ಭಾರತವು ಯುನೆಸ್ಕೋ ಅಧಿವೇಶನದ ನೇತೃತ್ವ ವಹಿಸಿದ್ದು ಇದೇ ಮೊದಲು.ಡಿಸೆಂಬರ್​ 8 ರಿಂದ ಆರಂಭವಾಗಿರುವ ಅಧಿವೇಶನದಲ್ಲಿ ಭಾರತದ ದೀಪಾವಳಿ ಹಬ್ಬ ಸೇರಿದಂತೆ ಸುಮಾರು ಒಟ್ಟು 67 ಹಬ್ಬಗಳನ್ನು 80 ದೇಶಗಳು ನಾಮನಿರ್ದೇಶನ ಮಾಡಿವೆ. ಅದರಲ್ಲಿ ಭಾರತದ ದೀಪಾವಳಿ ಹಬ್ಬವನ್ನು ಯುನೆಸ್ಕೋ ತಂಡವು ಆಯ್ಕೆ ಮಾಡಿದೆ.ದೀಪಾವಳಿಯ ಜೊತೆಗೆ ದೇಶದಲ್ಲಿ ಆಚರಿಸಲಾಗುವ ಛತ್​ ಪೂಜೆ, ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ಗುಜರಾತ್‌ನ ಗರ್ಭಾ, ಯೋಗ, ವೇದ ಪಠಣ, ರಾಮಲೀಲಾ, ರಾಮನ್ ಮತ್ತು ಕುಟಿಯಾಟ್ಟಂ ಸೇರಿದಂತೆ 15 ಆಚರಣೆಗಳನ್ನು ನಾಮನಿರ್ದೇಶನಕ್ಕೆ ಕಳುಹಿಸಲಾಗಿತ್ತು. ಯುನೆಸ್ಕೋ ಪಟ್ಟಿಯಲ್ಲಿ ದೀಪಾವಳಿ ಸೇರ್ಪಡೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಹಿರಿಮೆ ಮನ್ನಣೆ ಪಡೆದಿದೆ.ವಿಶ್ವಾದ್ಯಂತದ ವಿಶೇಷ ಸಾಂಸ್ಕೃತಿಕ ಆಚರಣೆಗಳು ಮತ್ತು ಅವುಗಳ ಮಹತ್ವದ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಯನ್ನು ಸ್ಥಾಪಿಸಿದೆ.

ಇದರಲ್ಲಿ ವಿಶೇಷ ಕೌಶಲ್ಯ, ಜ್ಞಾನ, ಅಭಿವ್ಯಕ್ತಿ, ಪ್ರಾತಿನಿಧ್ಯ ಮತ್ತು ಅಭ್ಯಾಸ ಸೇರಿದಂತೆ ಸಂಪ್ರದಾಯ, ಸಮುದಾಯ ಅಥವಾ ವ್ಯಕ್ತಿಗಳು ಆಚರಿಸುವ ಸಾಂಸ್ಕೃತಿಕ ಪರಂಪರೆಯ ಭಾಗವೆಂದು ಗುರುತಿಸುವ ಕಲಾಕೃತಿಗಳು, ವಸ್ತುಗಳು, ಉಪಕರಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಸ್ಥಳಗಳನ್ನು ಗುರುತಿಸಲಾಗುತ್ತದೆ. ಈವರೆಗೆ ಈ ಪಟ್ಟಿಯಲ್ಲಿ 150 ದೇಶಗಳ 788 ಆಚರಣೆಗಳು ಸ್ಥಾನ ಪಡೆದಿವೆ.