ವಿದ್ಯಾರ್ಥಿಗಳಿಗೆ ಅಂಚೆ ಕಚೇರಿಯಲ್ಲಿ ಶೂನ್ಯ ಶಿಲ್ಕು ಖಾತೆ ತೆರೆಯಲು ವ್ಯವಸ್ಥೆ
ಮಂಗಳೂರು: ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಸಿಗಲಿರುವ ನೇರ ನಗದು ವರ್ಗಾವಣೆಯನ್ನು ವಿದ್ಯಾರ್ಥಿಗಳು ಪಡೆಯಲು ಅನುಕೂಲವಾಗುವಂತೆ ಅಂಚೆ ಕಚೇರಿಗಳಲ್ಲಿ ಶೂನ್ಯ ಶಿಲ್ಕು ಖಾತೆಯನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಯ ಹಾಗೂ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಪ್ರತಿ, ಫೋಟೋ ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದ ದೃಢೀಕರಣ ಪತ್ರ ಹಾಗೂ ಆಧಾರ್ ಅನ್ನು ಖಾತೆಗೆ ಜೋಡಿಸಲು ಅಧಿಕೃತ ನಮೂನೆಯಲ್ಲಿ ಅರ್ಜಿ ನೀಡಿ ,ಈ ಖಾತೆಯನ್ನು ಯಾವುದೇ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ.
ಮನೆಯ ಸಮೀಪದ ಅಂಚೆ ಕಚೇರಿಯಲ್ಲಿಯೇ ಖಾತೆ ತೆರೆಯಬಹುದು. ಈ ಯೋಜನೆ ಮಾತ್ರವಲ್ಲದೇ, ಇನ್ನಿತರ ಯೋಜನೆಗಳಲ್ಲಿ ಪಾವತಿಯಾಗುವ ನೇರ ನಗದು ವರ್ಗಾವಣೆಯ ಮೊತ್ತವನ್ನು ಈ ಖಾತೆಯ ಮೂಲಕ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಕಾರಣದಿಂದ ಆಧಾರ್ ಈಗಾಗಲೇ ನೋಂದಣಿ ಆಗಿರದಿದ್ದರೆ ಅಥವಾ ನೋಂದಣಿ ಆಗಿದ್ದು ಅದರಲ್ಲಿ ಯಾವುದೇ ಪರಿಷ್ಕರಣೆ ಇದ್ದಲ್ಲಿ, ಅಂಚೆ ಕಚೇರಿಯಲ್ಲಿಯೇ ನೋಂದಣಿ ಮಾಡಲು ಅವಕಾಶವಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.