ಬಸ್ ಚಾಲಕನ ಏಕಾಏಕಿ ಬ್ರೇಕ್ | ಬಸ್ಸಿನ ಮುಂಭಾಗ ಕುಳಿತಿದ್ದ ಬಾಲಕಿ ಗಾಜಿನ ಮೂಲಕ ಹೊರಬಂದು ಟೈರ್ ನ ಅಡಿಗೆ ಬಿದ್ದು ಸಾವು
ಖಾಸಗಿ ಬಸ್ ಚಾಲಕನೊಬ್ಬನ ನಿರ್ಲಕ್ಷ್ಯದಿಂದಾಗಿ 6 ವರ್ಷದ ಬಾಲಕಿ ಬಸ್ ಹರಿದು ಮೃತಪಟ್ಟಿರುವ ಭಯಾನಕ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೊನ್ನಾಪುರದ ಬಳಿ ನಡೆದಿದೆ.
ಜೀವಿಕಾ (6) ಮೃತಪಟ್ಟ ಬಾಲಕಿ ಎಂದು ತಿಳಿದುಬಂದಿದೆ. ಕುಮಾರ್ ಹಾಗೂ ಜ್ಯೋತಿ ಎಂಬ ದಂಪತಿಯ ಏಕೈಕ ಪುತ್ರಿಯಾಗಿದ್ದ ಜೀವಿಕಾ ಬೆಂಗಳೂರಿನಿಂದ ತನ್ನ ಅಜ್ಜಿ ಗೌರಮ್ಮ ಹಾಗೂ ಚಿಕ್ಕಪ್ಪ ಯೋಗೇಶ್ ಎಂಬವರ ಜೊತೆ ಮಂಡ್ಯ ಜಿಲ್ಲೆ ಮದ್ದೂರಿಗೆ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಳು.
ಬೆಳಿಗ್ಗೆ ಸುಂಕದಕಟ್ಟೆಯಲ್ಲಿ ಈ ಮೂವರು ಖಾಸಗಿ ಬಸ್ ಹತ್ತಿದ್ದರು. ಬಾಲಕಿ ಬಸ್ ಇಂಜಿನ್ ಇದ್ದ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದಳು. ಬೆಳಿಗ್ಗೆ 11.30 ರ ಸುಮಾರಿಗೆ ಬೆಂಗಳೂರು-ಮಾಗಡಿ ರಸ್ತೆಯ ಕಸಬಾ ಹೋಬಳಿಯ ಹೊನ್ನಾಪುರ ಗ್ರಾಮದ ಬಳಿ ಬಸ್ ತೆರಳುತ್ತಿದ್ದಂತೆಯೇ ಚಾಲಕ ಇದ್ದಕ್ಕಿದ್ದಂತೆಯ ಬ್ರೇಕ್ ಹಾಕಿದ್ದಾನೆ. ಪರಿಣಾಮ ಮುಂದೆ ಕುಳಿತಿದ್ದ ಬಾಲಕಿ ಬಸ್ ಮುಂದಿನ ಗಾಜಿನಿಂದ ಹೊರಬಿದ್ದು, ಬಸ್ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಬಸ್ ಬಾಲಕಿ ಮೇಲೆಯೇ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಘಟನೆ ಬಳಿಕ ಸಾರಿಗೆ ಬಸ್ ಗಳಲ್ಲೂ ಸೀಟ್ ಬೆಲ್ಟ್ ಅಳವಡಿಸಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಸೀಟ್ ಬೆಲ್ಟ್ ಧರಿಸುವುದು ಸೂಕ್ತ ರೀತಿಯ ಪರಿಹಾರವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಬಸ್ ನಲ್ಲಿ ಕರೆದುಕೊಂಡು ಹೋಗುವಾಗ ಪೋಷಕರು ಹಾಗೂ ಸಂಬಂಧಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ದೊಡ್ಡವರ ಮಧ್ಯೆ ಮಕ್ಕಳು ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಯಾವುದೇ ಅಪಘಾತಗಳು ಎದುರಾದರೂ ಮಕ್ಕಳನ್ನು ರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದೀಗ ಬಾಲಕಿಯ ಚಿಕ್ಕಪ್ಪ ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.