ಮಂಗಳೂರಿನಲ್ಲಿ ರಾಗಿಂಗ್ ಇನ್ನೂ ಜೀವಂತ | ಅರೆ ನಗ್ನಗೊಳಿಸಿ ಕೊಲೆ ಬೆದರಿಕೆ ಹಾಕಿ ರಾಗಿಂಗ್ ನಡೆಸಿದ 6 ನರ್ಸಿಂಗ್ ವಿದ್ಯಾರ್ಥಿಗಳ ಬಂಧನ

Share the Article

ಜ್ಯೂನಿಯರ್ ವಿದ್ಯಾರ್ಥಿಯೊರ್ವನ ಮೇಲೆ ರಾಗಿಂಗ್ ನಡೆಸಿದ ಆರೋಪದ ಮೇಲೆ ಶುಕ್ರವಾರ ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶ್ರೀಲಾಲ್ (20), ಶಾಹಿದ್ (20), ಅಮ್ಹಾದ್ (20), ಜುರೈಜ್ (20), ಹುಸೈನ್ (20) ಮತ್ತು ಲಿಮ್ಸ್ (20) ಬಂಧಿತ ಆರೋಪಿಗಳು.

ದೂರದಾರ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಜು.14 ರ ರಾತ್ರಿ 8 ಗಂಟೆಗೆ ಊಟಕ್ಕೆಂದು ಹೋಟೆಲ್ ಗೆ ತೆರಳಿದ್ದಾಗ, ಅಲ್ಲಿ ವಿದ್ಯಾರ್ಥಿಯ ಸೀನಿಯರ್ ಗಳಾಗಿದ್ದ ಶ್ರೀಲಾಲ್, ಜುರೈಜ್, ಹಾಗೂ ರಸೆಲ್ ಇದ್ದರು. ಈ ವೇಳೆ ಶ್ರೀಲಾಲ್, ಜೂನಿಯರ್ ಆದ ನೀವು ಸೀನಿಯರ್ ಆದ ನಮಗೆ ರೆಸ್ಪೆಕ್ಟ್ ಕೊಡಬೇಕೆಂದು, ಅಸಭ್ಯ ಭಾಷೆ ಬಳಸಿ ಗದರಿಸಿದ್ದಾನೆ. ಆದರೆ ಇದಕ್ಕೆ ದೂರುದಾರ ವಿದ್ಯಾರ್ಥಿ ಮತ್ತವನ ಸ್ನೇಹಿತರು ಒಪ್ಪಿರಲಿಲ್ಲ.

ಇದರಿಂದ ಸಿಟ್ಟುಗೊಂಡ 6 ಜನರ ಸೀನಿಯರ್ ತಂಡ, ರಾತ್ರಿ 10.30 ಕ್ಕೆ ವಿದ್ಯಾರ್ಥಿ ಉಳಿದುಕೊಂಡಿದ್ದ ಅತ್ತಾವರದ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ಗೆ ಮಾರಕಾಯುಧಗಳೊಂದಿಗೆ‌ ವಿಲನ್ ಗಳ ರೀತಿಯಲ್ಲಿ ಅಕ್ರಮ ಪ್ರವೇಶ ಮಾಡಿ, ಗದರಿಸಿ ಅರೆನಗ್ನಗೊಳಿಸಿ ಅವಾಚ್ಯ ಶಬ್ದಗಳಿಂದ ಬೈದು ರಾಗಿಂಗ್ ಮಾಡಿ ಹಲ್ಲೆ ನಡೆಸಿದ್ದಾರೆ.

ಇದಲ್ಲದೆ ಲಿಮ್ಸ್ ಎಂಬಾತ ಕಾಲೇಜಿನಲ್ಲಿ ನಮ್ಮನ್ನು ಕಂಡ ಕೂಡಲೇ ತಲೆ ಬಗ್ಗಿಸಬೇಕು. ಇಲ್ಲವಾದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾನೆ.

ಐಪಿಸಿ ಸೆಕ್ಷನ್ 143, 147, 148, 448, 323, 324, 504, 506 ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 116 ರ ಅಡಿಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಲೇಜುಗಳಲ್ಲಿ ರಾಗಿಂಗ್ ಈಗಾಗಲೇ ಬ್ಯಾನ್ ಆಗಿದ್ದು, ವಿದ್ಯಾರ್ಥಿಗಳು ಈ ರೀತಿಯಾಗಿ ನಡೆದುಕೊಂಡದ್ದು ಕಾಲೇಜಿಗೆ ಕೆಟ್ಟ ಹೆಸರು ತಂದಿದೆ.

Leave A Reply

Your email address will not be published.