ಮಂಗಳೂರು, ಕುಲಶೇಖರ | ರೈಲು ಹಳಿಗಳ ಮೇಲೆ ಕುಸಿದು ಬಿದ್ದ ಕಲ್ಲು ಮಣ್ಣು, ಹಲವು ರೈಲು ಸೇವೆಗಳಲ್ಲಿ ವ್ಯತ್ಯಯ

ಮಂಗಳೂರು : ಇಲ್ಲಿನ ಕುಲಶೇಖರ ಸಮೀಪ ರೈಲ್ವೆ ಹಳಿಯ ಮೇಲೆ ಇಂದು ಮಧ್ಯಾಹ್ನ ಮಣ್ಣು ಸಹಿತ ತಡೆಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಪಾಲ್ಘಾಟ್ ವಿಭಾಗಕ್ಕೆ ಸೇರಿದ ಕುಲಶೇಖರ ಸುರಂಗ ಮಾರ್ಗ ಸಮೀಪ ಭಾರಿ ಮಳೆಯಾಗಿದ್ದು, ತಡೆಗೋಡೆ ಕುಸಿದು ಹಳಿಗೆ ಬಿದ್ದಿದೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಮಣ್ಣು ಕುಸಿದು ಹಳಿಗೆ ಬಿದ್ದ ಕಾರಣ ಎರಡು ದಿನಗಳ ಕಾಲ ರೈಲು ಸಂಚಾರ ಸ್ಥಗಿತ ಆಗಿತ್ತು.

ಆ ಬಳಿಕ ಮಣ್ಣು ಕುಸಿಯುವ ಜಾಗದಲ್ಲಿ ಬೃಹತ್ ತಡೆಗೋಡೆ ಕಟ್ಟಲಾಗಿತ್ತು. ಇದೀಗ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಕಾರಣ ತಡೆಗೋಡೆಯಲ್ಲಿ ಬಿರುಕು ಬಿಟ್ಟು ಹಳಿ ಮೇಲೆ ಬಿದ್ದಿದೆ.

ಮಂಗಳೂರು ಮೂಲಕ ಕೊಂಕಣ ರೈಲು ಸಂಪರ್ಕಿಸುವ ಈ ಹಳಿಯಲ್ಲಿ ಸಂಚರಿಸುವ ಎಲ್ಲ ರೈಲುಗಳನ್ನು ರದ್ದುಪಡಿಸಲಾಗಿದೆ. ಮುಂಬಯಿಯಿಂದ ಕೊಂಕಣ ರೈಲು ಮೂಲಕ ಮಂಗಳೂರಿಗೆ ಆಗಮಿಸುವ ರೈಲುಗಳನ್ನು ತೋಕೂರಿನಿಂದ ಮರಳಿ ಅದೇ ಮಾರ್ಗದಲ್ಲಿ ಹಿಂದಕ್ಕೆ ಕಳುಹಿಸುವ ವ್ಯವಸ್ಥೆ ಆಗುತ್ತಿದೆ.

ಮುಂಬಯಿಗೆ ತೆರಳುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಈಗಾಗಲೇ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಬಾಕಿ ಆಗಿದೆ. ಅದರಲ್ಲಿ ಇರುವ ನೂರಾರು ಪ್ರಯಾಣಿಕರು ಈಗ ಅತಂತ್ರರಾಗಿದ್ದಾರೆ.

ಸ್ಥಳಕ್ಕೆ ಪಾಲ್ಘಾಟ್ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಳಿಯಲ್ಲಿ ಬಿದ್ದಿರುವ ಕಲ್ಲು, ಮಣ್ಣುಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ ಇನ್ನಷ್ಟು ಕಡೆಗಳಲ್ಲಿ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಅದು ಹಳಿಗೆ ಬೀಳದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

Leave A Reply

Your email address will not be published.