ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆಗಿಳಿದ ಶಾಸಕ ಸಂಜೀವ ಮಠಂದೂರು | ನೇಗಿಲು ಹಿಡಿದು ಉಳುಮೆ ಮಾಡಿ ಗಮನ ಸೆಳೆದ ಶಾಸಕರು
ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಉಳುಮೆ ಮಾಡಿ ಗಮನ ಸೆಳೆದಿದ್ದಾರೆ. ಪಂಚೆ ಕಟ್ಟಿಕೊಂಡು ಪರಾಂಪರಾಗತವಾಗಿ ನಡೆಯುತ್ತಿದ್ದ ಭತ್ತದ ಗದ್ದೆಯಲ್ಲಿ ನೇಗಿಲು ಹಿಡಿದು ಉಳುಮೆಮಾಡಿದ್ದಾರೆ.
ಇಂತಹ ಸನ್ನಿವೇಶಕ್ಕೆ ಆರ್ಯಾಪು ಗ್ರಾಮದ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಂಪ್ಯ ನವಚೇತನಾ ಯುವಕ ಮಂಡಲದ ಸಹಭಾಗಿತ್ವದಲ್ಲಿ ದಿ. ಉಗ್ಗಪ್ಪ ಗೌಡ ಅವರ ಹಡೀಲು ಬಿದ್ದ ಗದ್ದೆಯಲ್ಲಿ ‘ಗದ್ದೆಗೆ ಇಳಿಯೋಣ-ಬೇಸಾಯ ಮಾಡೋಣ’ ಅಭಿಯಾನ ಸಾಕ್ಷಿಯಾಯಿತು.
ಸ್ವತಃ ಗುಡ್ಡ ಅಗೆದು ತನ್ನೂರಿನಲ್ಲಿ ಗದ್ದೆ ನಿರ್ಮಿಸಿ ಇತ್ತು ಕಟ್ಟಿ ಬೇಸಾಯ ಮಾಡಿದ ಅನುಭವವಿರುವ ಶಾಸಕ ಮಠಂದೂರು ಅವರು, ಸಂಪ್ಯ ದೇವಸ್ಥಾನದ ಗದ್ದೆಗೆ ತಾವೇ ಇಳಿದು, ನೇಗಿಲ ಹಿಡಿದು ಸಾಂಪ್ರದಾಯಿಕ ಶೈಲಿಯಲ್ಲಿ ಉಳುಮೆ ಮಾಡುವ ಮೂಲಕ ಚಾಲನೆ ನೀಡಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯರವರೂ ನೇಗಿಲ ಹಿಡಿದು ಸಾಂಪ್ರಾದಾಯಿಕ ಉಳುಮೆ ಮಾಡಿದರು.
ಈ ಸಂಧರ್ಭ ಕಳೆದ 40 ವರ್ಷಗಳಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಉಳುಮೆ ಮಾಡಿ ಬೇಸಾಯ ಮಾಡುತ್ತಿರುವ 70 ವರ್ಷದ ಬಾರಿಕೆ ಪರಮೇಶ್ವರ ನಾಯ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಜಯಕುಮಾರ್ ನಾಯರ್, ಪ್ರೇಮಾ ಸಪಲ್ಯ, ವಿನ್ಯಾಸ್ ಗೌಡ, ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.