ಆ ಸಾವು ಕಂಡು ಕ್ರೋಧಗೊಂಡ ಸ್ಥಳೀಯರು, ಉದ್ವಿಗ್ನ ರಾಮಕುಂಜ !! | ಪಾದರಾಯನಪುರದ ಘಟನೆ ನೆನಪಿಸಿದ ರಾಮಕುಂಜದ ಗಲಭೆ !
ಕಳೆದ ಬಾರಿ ಪಾದರಾಯನಪುರದಲ್ಲಿ ನಡೆದ ಗಲಭೆಯ ಚಿತ್ರಣಗಳು ಮಾಸುವ ಮುನ್ನವೇ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದಲ್ಲಿ ಇಂದು ಮಧ್ಯಾಹ್ನ ನೋಡ ನೋಡುತ್ತಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.ಪೊಲೀಸರಿಗೆಂದು ನಿರ್ಮಿಸಲಾಗಿದ್ದ ಶೆಡ್ ಹಾಗೂ ಬಾರಿಕೆಡ್ ಗಳನ್ನು ಮಗುಚಿ ಹಾಕಲಾಗಿತ್ತು, ಇಷ್ಟಕ್ಕೂ ಸುಮ್ಮನಾಗದ ಉದ್ರಿಕ್ತರ ಗುಂಪು ಸ್ಥಳದಲ್ಲಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಯಿತು.ಇಷ್ಟಕ್ಕೂ ಅಲ್ಲಿ ನಡೆದಿದ್ದು ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಓರ್ವ ವ್ಯಕ್ತಿಯ ಸಾವು.
ಎಂದಿನಂತೆ ಇಂದು ಕೂಡಾ ಕಡಬ ಪೊಲೀಸರು ರಾಮಕುಂಜ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ಬೈಕ್ ಸವಾರನೊಬ್ಬನನ್ನು ಪೊಲೀಸರು ತಡೆದಿದ್ದು, ಆತ ತನ್ನ ವಾಹನ ದಾಖಲೆಯನ್ನು ಪೊಲೀಸರಿಗೆ ತೋರಿಸಿ, ಮರಳಿ ತನ್ನ ಬೈಕ್ ಇರಲು ರಸ್ತೆ ದಾಟುತ್ತಿರುವಾಗ ಯಮನಂತೆ ಆತನನ್ನು ಕಾಡಿದ್ದು ಗೂಡ್ಸ್ ವಾಹನ. ತನ್ನ ಬೈಕ್ ಬಳಿ ನಿಂತಿದ್ದ ತಾಯಿಯ ಕಣ್ಣೆದುರೇ ಆತ ಗೂಡ್ಸ್ ಟೆಂಪೋ ದಡಿಗೆ ಬಿದ್ದು ಮೃತಪಟ್ಟಿದ್ದ.
ಘಟನೆ ನಡೆದು ಕೆಲವೇ ಹೊತ್ತಿನಲ್ಲಿ ಜನರ ಗುಂಪೊಂದು ಅಲ್ಲಿಗೆ ಜಮಾಯಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರಿಗೆಂದು ಊರವರು ನಿರ್ಮಿಸಿದ್ದ ಶೆಡ್ ಒಂದನ್ನು ಉದ್ರಿಕ್ತರು ನೆಲಸಮಮಾಡಿದ್ದು, ಪೊಲೀಸ್ ಬಾರಿಕೆಡ್ ಗಳನ್ನು ಕೂಡಾ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಉದ್ರಿಕ್ತರು, ಪೊಲೀಸರಿಂದಾಗಿಯೇ ವ್ಯಕ್ತಿಯ ಸಾವು ಸಂಭವಿಸಿದೆ, ಎಲ್ಲಾ ಬೆಳವಣಿಗೆಗೂ ಪೊಲೀಸರೇ ಕಾರಣವೆಂದು ಕರ್ತವ್ಯ ನಿರತ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಹಲ್ಲೆಗೂ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಪತ್ರಕರ್ತರೊಂದಿಗೂ ವಾಗ್ವಾದಕ್ಕಿಳಿದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ಮಿತಿ ಮಿರುತ್ತಿದ್ದಂತೆ ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲಾಗಿದ್ದು, ಉನ್ನತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಪ್ರತಿಭಟನಾ ನಿರತರನ್ನು ಮನವೊಲಿಸುವಲ್ಲಿ ಪ್ರಯತ್ನಿಸಿದ್ದಾರೆ.
ಅದೇನೇ ಇರಲಿ. ಕಾನೂನು ಪಾಲಿಸಬೇಕಾದವರ ತಪ್ಪಿದ್ದರೆ, ಕಾನೂನಿನಡಿಯಲ್ಲಿ ಶಿಕ್ಷೆಯಾಗುತ್ತದೆ ಎಂದು ಅರಿವಿದ್ದರೂ ಸುಖಾಸುಮ್ಮನೆ ದೊಂಭಿ ಗಲಭೆ ಎಬ್ಬಿಸಿ ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಇಲಾಖೆ ಕೈಗೊಳ್ಳಲಿ,ಶಾಂತಿ ಪ್ರಿಯರ ನಾಡಿನಲ್ಲಿ ಮಹಾಮಾರಿಯ ಸಮಯದಲ್ಲಾದರೂ ಅಶಾಂತಿ ನಿರ್ಮಾಣವಾಗದಿರಲಿ, ಸಾವಿಗೆ ಪೊಲೀಸರೇ ಕಾರಣವಾಗಿದ್ದರೆ ಸಾವಿಗೆ ನ್ಯಾಯ ದೊರಕಲಿ,ಕಣ್ಣೆದುರಲ್ಲೇ ತನ್ನ ಮಗ ಕಣ್ಣುಮುಚ್ಚುತ್ತಿರುವ ದೃಶ್ಯ ಕಂಡ ಹೆತ್ತಬ್ಬೆಗೆ ಆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂಬುವುದೇ ಆಶಯ.