ತಂದೆ ಫೋನ್ ನಿಂದ ಬರೋಬ್ಬರಿ 100 ಬೌಲ್ಸ್ ನೂಡಲ್ಸ್ ಆರ್ಡರ್ ಮಾಡಿದ ಮೂರರ ಪೋರಿ
ಬೀಜಿಂಗ್: ಈಗೆಲ್ಲ ಟೆಕ್ನಿಕಲ್ ಯುಗ, ಈಗಿನ ಮಕ್ಕಳಂತೂ ಹುಟ್ಟುತ್ತಲೇ ಮೊಬೈಲ್ ಬಳಕೆ ಕಲಿತು ಬಂದಿರುತ್ತವೆಯೇನೋ ಎನ್ನುವಂತೆ ವರ್ತಿಸುತ್ತಾರೆ. ಅದೇ ರೀತಿ ಮೂರು ವರ್ಷದ ಪುಟಾಣಿಯೊಬ್ಬಳು ತಂದೆಯ ಮೊಬೈಲ್ನಿಂದ ನೂಡಲ್ಸ್ ಆರ್ಡರ್ ಮಾಡಿ ಅಪ್ಪ ಅಮ್ಮನನ್ನೇ ಪೇಚಿಗೆ ಸಿಲುಕಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಜಿಲಿನ್ ಹೆಸರಿನ ನಗರದಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಹೊಟ್ಟೆ ಹಸಿವು ಎಂದು ಆನ್ಲೈನ್ನಲ್ಲಿ ನೂಡಲ್ಸ್ ಆರ್ಡರ್ ಮಾಡಿದ್ದಾಳೆ. ಅಪ್ಪನ ಮೊಬೈಲ್ನಲ್ಲಿದ್ದ ಆ್ಯಪ್ ಮೂಲಕ ಆರ್ಡರ್ ಮಾಡಿದ್ದಾಳೆ. ಸ್ವಲ್ಪ ಸಮಯದಲ್ಲಿ ಡೆಲಿವರಿ ಬಾಯ್ ಮನೆ ಅಪಾರ್ಟ್ಮೆಂಟ್ ಬಳಿ ಬಂದಿದ್ದು, ಬರೋಬ್ಬರಿ ಏಳು ಬಾರಿ 13ನೇ ಫ್ಲೋರ್ನ ಮನೆವರೆಗೆ ಹತ್ತಿಳಿದು ನೂಡಲ್ಸ್ ಕೊಟ್ಟಿದ್ದಾನೆ. ಏಕೆಂದರೆ ಆಕೆ ಆರ್ಡರ್ ಮಾಡಿದ್ದು ಬರೋಬ್ಬರಿ 100 ಬೌಲ್ಸ್ ನೂಡಲ್ಸ್.
ಮೊದಲಿಗೆ ಅದನ್ನು ಯಾವುದೋ ಆಫರ್ ಇರಬೇಕು ಎಂದು ಭಾವಿಸಿದ ಬಾಲಕಿಯ ತಂದೆಗೆ ಆಮೇಲೆ ಮಗಳು ಮಾಡಿದ ಕಿತಾಪತಿ ಗೊತ್ತಾಗಿದೆ. ಏಕಾಗಿ ಮಾಡಿದೆ ಎಂದು ಕೇಳಿದಾಗ ನನಗೆ ಹಸಿವಾಗಿತ್ತು ಎಂದು ಹೇಳುವ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಆ ನೂಡಲ್ಸ್ ಬೌಲ್ಸ್ಗಳನ್ನು ಇಟ್ಟುಕೊಳ್ಳಲು ಪೂರ್ತಿ ಕೋಣೆಯೇ ಬೇಕಾಗಿದ್ದಾಗಿ ಬಾಲಕಿಯ ತಂದೆ ತಿಳಿಸಿದ್ದಾರೆ. ನಂತರ ಕೇವಲ 8 ಬೌಲ್ಗಳನ್ನು ಮನೆಯಲ್ಲಿಟ್ಟುಕೊಂಡು ಉಳಿದದ್ದನ್ನು ಬಡವರಿಗೆ ಹಂಚಿರುವುದಾಗಿ ಹೇಳಲಾಗಿದೆ.
ಅಂತೂ ಇಂತೂ ಮಗಳು ಮಾಡಿದ ಕಿತಾಪತಿ ತಂದೆ-ತಾಯಿಯನ್ನು ಪೇಚಿಗೆ ಸಿಲುಕಿಸಿದ್ದಂತೂ ನಿಜ.