ಮೃತ ಮಾವುತನ ಅಂತಿಮ ದರ್ಶನ ಪಡೆದ ಆನೆ | ಜೀವಮಾನದ ಗೆಳೆಯನಿಗೆ ಕಣ್ಣೀರೇ ಇಲ್ಲಿ ವಿದಾಯ !
ಆನೆಗಳು ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತವೆ. ತಮ್ಮ ಬಳಗದೊಂದಿಗೆ ಇರುವ ಆನೆಗಳು ಪರಸ್ಪರ ಸಹಾಯ ಮಾಡುತ್ತಾ ಜೀವನ ನಡೆಸುತ್ತವೆ. ಆನೆಗಳ ಇಂತಹ ಜೀವನ ಕ್ರಮ, ಭಾವನಾತ್ಮಕ ಸಂಬಂಧ, ತುಂಟಾಟ, ಬುದ್ಧಿವಂತಿಕೆ, ಸಮಯಪ್ರಜ್ಞೆಗೆ ಸಾಕ್ಷಿಯಾದಂತಹ ಬೇಕಾದಷ್ಟು ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಎಲ್ಲಾ ದೃಶ್ಯಗಳನ್ನು ಕಂಡಾಗ ಮನಸ್ಸಿಗೆ ಹಿತವಾಗುತ್ತದೆ. ಹಾಗೆಯೇ ಇತ್ತೀಚೆಗೆ ಆನೆ ಮತ್ತು ಮಾವುತನ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮನುಷ್ಯ ಮತ್ತು ಆನೆಗಳ ಭಾವನಾತ್ಮಕ ಒಡನಾಟ ಹೀಗೂ ಇರುತ್ತಾ??? ಎಂದು ಯೋಚಿಸುವವರು ಇಲ್ಲೊಮ್ಮೆ ನೋಡಿ. ಕೇರಳದ ಕೊಟ್ಟಾಯಂನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮಾವುತ ಒಮಾನ್ ಚೆಟ್ಟನ್ ಅಂತಿಮ ದರ್ಶನಕ್ಕೆ ಆತ ಸಾಕಿ ಸಲುಹಿದ ಆನೆ ಬಂದಿದೆ.
24 ವರ್ಷಗಳ ಕಾಲ ತನ್ನನ್ನು ಸಲುಹಿದ ಮಾವುತನನ್ನು ನೋಡಲು ತಲಾಟು ಬ್ರಹ್ಮದಾತನ್ ಎಂಬ ಹೆಸರಿನ ಆನೆ ಬಂದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ತನ್ನ ಮಾವುತನ ಅಂತಿಮ ದರ್ಶನ ಪಡೆದು ತುಂಬಾ ದುಃಖದಿಂದ ಕಣ್ಣೀರಿಡುತ್ತಾ ಸ್ವಲ್ಪ ಹೊತ್ತು ನೋಡಿ ಮತ್ತೆ ವಾಪಸ್ಸು ಹೋಗಿರುವ ದೃಶ್ಯ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತೀರಿಕೊಂಡ ಮಾವುತನ ಪ್ರೀತಿಯ ಆನೆ ಅಲ್ಲಿಗೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನರ ಗೋಳಾಟ ಜೋರಾಯಿತು. ತನ್ನ ಮಾವುತನನ್ನು ಕಡೆಯ ಬಾರಿ ನೋಡಿ ತುಂಬಾ ದುಃಖತಪ್ತ ಮನಸ್ಸಿನಿಂದ ಭಾರವಾದ ಹೆಜ್ಜೆಗಳನ್ನು ಹಿಂದಕ್ಕೆ ಹಾಕಿ ಆನೆ ಅಲ್ಲಿಂದ ಹೊರಟುಹೋಯಿತು.
ಮಾನವೀಯತೆ ಮರೆಯಾಗುತ್ತಿರುವ ಈಗಿನ ಕಾಲದಲ್ಲಿ ಮನುಷ್ಯರಿಗೆ ಮಾನವೀಯತೆಯ ಪಾಠ ಪ್ರಾಣಿಗಳು ಕಲಿಸಲು ಹೊರಟಂತಿದೆ ಈ ಘಟನೆ.