24 ಕೋವಿಡ್ ಸೋಂಕಿತರ ಸಾವಿಗೆ ನೈತಿಕ ಜವಾಬ್ದಾರರಾದ ಜಿಲ್ಲಾಧಿಕಾರಿಯ ತಲೆದಂಡ
ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರ ದಿಢೀರ್ ವರ್ಗಾವಣೆಗೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 24 ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣದ ಹಿನ್ನಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ಯಾವುದೇ ಹುದ್ದೆಯನ್ನು ನೀಡದೆ ಡಾ. ಎಂ. ಆರ್. ರವಿ ವರ್ಗಾವಣೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದು 24 ಕೋವಿಡ್ ಸೋಂಕಿತರ ಸಾವಿಗೆ ನೀಡಲಾದ ಶಿಕ್ಷೆ ಎಂದು ಪರಿಗಣಿಸಲಾಗಿದೆ. ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಬಿ. ಸಿ. ಸತೀಶ್ ನೇಮಕಗೊಂಡಿದ್ದಾರೆ. ಗುರುವಾರವೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 24 ಕೋವಿಡ್ ಸೋಂಕಿತರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆದಿತ್ತು. ಜಿಲ್ಲಾಧಿಕಾರಿಗಳು, ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಕರ್ನಾಟಕ ಹೈಕೋರ್ಟ್ಗೆ ವರದಿ ನೀಡಿತ್ತು.
ಬಿ. ಸಿ. ಸತೀಶ್ ಧಾರವಾಡ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆಯೇ ಅವರನ್ನು ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಡಾ. ಎಂ. ಆರ್. ರವಿ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು.
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೆ 3ರ ರಾತ್ರಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ರಾತ್ರಿ 10.30 ರಿಂದ ಸುಮಾರು 4 ಗಂಟೆಗಳ ಕಾಲ ಆಕ್ಸಿಜನ್ ಇರಲಿಲ್ಲ. ಈ ಘಟನೆಗೆ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಮತ್ತು ಜಿಲ್ಲಾಧಿಕಾರಿಗಳು ಹೊಣೆ ಎಂದು ವರದಿ ಬಂದಿತ್ತು. ಆಕ್ಸಿಜನ್ ಅವಘಡ ಸಂಭವಿಸಿದ ಕೂಡಲೇ ಚಾಮರಾಜನಗರ ಜಿಲ್ಲಾಧಿಕಾರಿ, ಮೈಸೂರಿನ ಡಿಸಿಯವರು ಆಮ್ಲಜನಕ ಸರಬರಾಜನ್ನು ನಿಲ್ಲಿಸಿದ ಕಾರಣ ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಾಗಿತ್ತು ಎಂದು ದೂರಿದ್ದರು. ಆದರೆ ತನಿಖೆ ನಡೆದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಪ್ಪಿತಸ್ಥರಲ್ಲ ಎಂದು ರುಜುವಾತಾಗಿದೆ.
ಈ ಪ್ರಕರಣಕ್ಕೆ ಈಗ ಜಿಲ್ಲಾಧಿಕಾರಿಯ ತಲೆದಂಡವಾಗಿದೆ.
ಈ ಪ್ರಕರಣಕ್ಕೆ ಈಗ ಜಿಲ್ಲಾಧಿಕಾರಿಯ ತಲೆದಂಡವಾಗಿದೆ. ಆದರೂ 24 ಜನರ ಸಾವಿಗೆ ವರ್ಗಾವಣೆಯಷ್ಟೆ ಶಿಕ್ಷೆಯೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ.