Mangalore: ‘ಧರ್ಮಸ್ಥಳ ಬುರುಡೆ’ ಬಿಚ್ಚಿಟ್ಟ ನಗ್ನ ಸತ್ಯ: ನಕಲಿ ಹಿಂದುತ್ವವಾದಿಗಳ ಬಣ್ಣ ಬಯಲು! ಎಚ್ಚರ ಹಿಂದೂ ಎಚ್ಚರ!!

Mangalore: ಧರ್ಮಸ್ಥಳ: ಕರಾವಳಿಯಲ್ಲಿ ಹಿಂದುತ್ವಕ್ಕೆ ಸೋಲಾಗಿದೆ!! ಎಸ್, ಹಿಂದುತ್ವದ ಭದ್ರ ಕೋಟೆ, ತುಳುನಾಡಿನಲ್ಲಿ ಹಿಂದುತ್ವಕ್ಕೆ (ನಕಲಿ ಹಿಂದುತ್ವಕ್ಕೆ) ಭೀಕರವಾದ, ಎಂದೂ ಆಗದೆ ಇದ್ದ ದಾರುಣ ಸೋಲಾಗಿದೆ!! ಲೇಖನ ತುಸು ಉದ್ದವೇ, ಇದೆ, ಆದ್ರೆ ನೀವದನ್ನು ಓದಲೇ ಬೇಕು!!

2012ರಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಘನಘೋರ ದುರಂತ ನಡೆದು ಹೋಗಿ, ಅದಕ್ಕೆ ಕಾರಣಕರ್ತರಾರು ಅನ್ನೋದಕ್ಕೆ ಇನ್ನು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಮಗಳನ್ನು ಕಳೆದುಕೊಂಡ ಕುಟುಂಬ, ಸಂಬಂಧಿಕರು, ಅವರ ಹಿತೈಷಿಗಳು, ಅನೇಕ ಹೋರಾಟಗಾರರು ಅಂದಿನಿಂದ ಇಂದಿನವರೆಗೆ ಆಕೆಯ ಸಾವಿಗೆ ನ್ಯಾಯ ಒದಗಿಸಬೇಕು ಅಂತ ನಿರಂತರ ಹೋರಾಟಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ನಡೆದ ಸಂಘರ್ಷಗಳು, ಪ್ರಯತ್ನಗಳು, ಪ್ರತಿಭಟನೆಗಳು ಅದೆಷ್ಟೋ.
ಇನ್ನೇನು ಸೌಜನ್ಯ ಕೇಸ್ಗೆ ನ್ಯಾಯ ಮರೀಚಿಕೆಯಾಗುತ್ತಿದೆ ಎನ್ನುವ ನಿಟ್ಟುಸಿರು ಮೂಡುತ್ತಿರುವಾಗಲೇ, ಕಳೆದ ತಿಂಗಳು ‘ಭೀಮ’ ಎದ್ದು ನಿಂತು ಹೋರಾಟದ ಕೂಗು ಹಾಕಿದ್ದ. ಈ ಅನಾಮಧೇಯ ವ್ಯಕ್ತಿ ಮುಂದೆ ಬಂದು, ತನ್ನ ಪಾಪಪ್ರಜ್ಞೆ ತೊಳೆದುಕೊಳ್ಳಲು ಬಯಸುತ್ತಿದ್ದೇನೆ ಎಂದಿದ್ದು, ತಾನು ನೂರಾರು ಶವಗಳನ್ನು ಧರ್ಮಸ್ಥಳದ ಸುತ್ತಮುತ್ತ ಬೇರೆಯವರ ಒತ್ತಾಯಕ್ಕೆ ಹೂಳಿದ್ದೇನೆ. ಅದನ್ನು ಈಗಲೇ ನಾನು ತೋರಿಸಬಲ್ಲೆ, ‘ಬನ್ನಿ’ ಎಂದು ದಾಪುಗಾಲು ಹಾಕಿಕೊಂಡು ಮುಂದೆ ಬಂದಿದ್ದ. ಆದರೆ ತನಿಖೆ ನಡೆಸಬೇಕಾದ ಜನರಿಗೆ ಅದ್ಯಾವುದೋ ಅಳುಕು. ಎಫೈಆರ್ ಆಗಿ 15 ದಿನ ಕಳೆದರೂ ಯಾವುದೇ ಕ್ರಮ ಮುಂದಕ್ಕೆ ಸಾಗಲಿಲ್ಲ. ಇದರ ತನಿಖೆಯೂ ಇನ್ನೇನು ಹಳ್ಳ ಹಿಡಿಯುತ್ತೆ ಅನ್ನುವಾಗಲೇ ಅನೇಕ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ಐಟಿ ತಂಡ ರಚನೆ ಮಾಡಿ ತನಿಖೆಗೆ ವಹಿಸಿದೆ.
ಕರಾವಳಿಗರ ಹೋರಾಟದ ಬೆಂಬಲಕ್ಕೆ ಕಾಂಗ್ರೆಸ್ ಸರ್ಕಾರ ನಿಂತು ಬಿಟ್ಟಿದೆ ಅನ್ನುವ ಮಾತುಗಳು ಅಲ್ಲಲ್ಲಿ ನಡೆಯುತ್ತಿದೆ. ಈ ಹಿಂದೆ ಕರ್ನಾಟಕ ಕಂಡ ಸ್ಟಾರ್ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಕೂಡ ಇಂತಹದೊಂದು ತನಿಖೆಗೆ ಒತ್ತಡ ಕೇಳಿ ಬಂದಿತ್ತು. ರಾಮಕೃಷ್ಣ ಹೆಗ್ಗಡೆಯವರು ತೆಗೆದುಕೊಳ್ಳದ ದಿಟ್ಟ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯನವರು ತೆಗೆದುಕೊಂಡಿದ್ದಾರೆ. ಅಷ್ಟಕ್ಕೆ ಸಿದ್ದರಾಮಯ್ಯನವರಿಗೆ ಮತ್ತು ಅವರ ಕಾಂಗ್ರೆಸ್ ಪಕ್ಷಕ್ಕೆ ಕರಾವಳಿಗರು ಮನಸ್ಸಿನಲ್ಲಿ ಧನ್ಯರಾಗಿದ್ದಾರೆ. ಅಸಲಿಗೆ ವಿಷಯ ಅದಲ್ಲವೆ ಅಲ್ಲ. ಸತ್ಯಗಳು ಬೇರೆಯೇ ಇವೆ.
ನಗ್ನಸತ್ಯಗಳ ಅನಾವರಣ
ತನಿಖೆ ನಡೆದು ಅಲ್ಲಿ ಘೋರ ಸತ್ಯಗಳ ಅನಾವರಣ ಆಗುತ್ತೋ ಇಲ್ಲವೋ ಅನ್ನೋದನ್ನು ಕಾಲವೇ ನಿರ್ಧರಿಸಬೇಕು. ಆದರೆ, ಇವತ್ತು ಒಂದು ದೊಡ್ಡ ನಗ್ನ ಸತ್ಯದ ಅನಾವರಣವಾಗಿದೆ. ಮುಖ್ಯವಾಗಿ ಕರಾವಳಿಯಲ್ಲಿ ಬಹು ದೊಡ್ಡ ಸತ್ಯವೊಂದರ ದಿವ್ಯವಲ್ಲದ ಅಸಹ್ಯ ದರ್ಶನವಾಗಿದೆ. ಅದು ಮುಂದಿನ ರಾಜಕೀಯ ಬದಲಾವಣೆಗೆ, ಪಲ್ಲಟಕ್ಕೆ ಕಾರಣ ಆಗುತ್ತೆ, ಆಗಲೇಬೇಕು ಅನ್ನುತ್ತಾ ಈ ಬಗ್ಗೆ ಒಂದು ವಿಸ್ತೃತ ಚರ್ಚೆ ನಿಮಗಾಗಿ.
ಕರಾವಳಿಯ ಪ್ರಮುಖ ಜಿಲ್ಲೆಗಳು ದಕ್ಷಿಣ ಕನ್ನಡ ಮತ್ತು ಉಡುಪಿ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಉಳಿದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಚಿಕ್ಕಮಗಳೂರು ಉಡುಪಿ ಲೋಕಸಭಾ ವ್ಯಾಪ್ತಿಯಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮನಾಗಿ ಹಂಚಿಕೊಂಡಿವೆ. ಅಂದ್ರೆ ಕರಾವಳಿಯಲ್ಲಿ 10 ಜನ ಬಿಜೆಪಿ ಶಾಸಕರು ಇದ್ದಾರೆ. ಎಲ್ಲಾದರೂ ಒಂದು ಶವ ಸಿಕ್ಕರೆ, ಒಂದು ಕೊಲೆ ನಡೆದರೆ, ಹಸಿದ ಡೇಗೆಗಳಂತೆ ಸುತ್ತು ಹಾಕಿ ಎಲ್ಲರನ್ನೂ ಕುಟುಕಲು ಬರುವ ರಾಜಕೀಯ ಮುಖಂಡರು, ಇದೀಗ ಧರ್ಮಸ್ಥಳ ಪ್ರಕರಣದಲ್ಲಿ ಮುಖ್ಯವಾಗಿ ಕರಾವಳಿಯ ಬಿಜೆಪಿ ನಾಯಕರು ಒತ್ತಾಯಕ್ಕೆ ಹೇರಿಕೊಂಡ ಮೌನಕ್ಕೆ ಶರಣಾಗಿದ್ದಾರೆ.
‘ಅಲ್ರಪ್ಪಾ, ಅನಾಮಿಕ ಮಹಿಳೆಯರು, ಮಕ್ಕಳು ಮತ್ತು ನೂರಾರು ಶವಗಳು ಹೂತು ಹಾಕಲ್ಪಟ್ಟಿವೆ ಎನ್ನುತ್ತಿರುವ ಜಾಗ ನಿಮ್ಮ ಆಡಳಿತವಿರುವ ಸ್ಥಳದಲ್ಲಿ. ಅದು ನಿಮ್ಮ ಹಿಂದೂ ಮನೆತನದ ಹುಡುಗಿಯರು, ಮಹಿಳೆಯರು, ಕೆಲವರು ವಿದ್ಯಾರ್ಥಿನಿಯರು ಕೂಡಾ. ಭೀಮನೆಂಬ ಅನಾಮಧೇಯ ಅದೆಲ್ಲಿಂದಲೋ ಎದ್ದು ಬಂದು, ನಾನೇ ಖುದ್ದಾಗಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದಾಗ ಬಿಜೆಪಿ ಶಾಸಕರುಗಳ ರೆಸ್ಪಾನ್ಸ್ ಹೇಗಿರಬೇಕಿತ್ತು? ಭೀಮನ ಬೆನ್ನಿಗೆ ಬಲವಾಗಿ ನಿಂತು, ‘ ಆಯ್ತಪ್ಪಾ, ಎಲ್ಲಿ ಹೆಣ ಹೂತಿದ್ದೀಯ ತೋರಿಸು’ ಎಂದು ನಿಜಕ್ಕೂ ಅಲ್ಲಿ ಹೆಣ ಉಂಟಾ ಇಲ್ಲವೋ ಎಂಬ ಅನುಮಾನವನ್ನಾದರೂ ಪರಿಹರಿಸಿಕೊಳ್ಳೋಣ ಅನ್ನುವ ಮಾತಾಡಬೇಕಿತ್ತು. ಕನಿಷ್ಠ ಕುತೂಹಲ ಆದ್ರೂ ನಿಮ್ಮಲ್ಲಿರಬೇಕಿತ್ತು.
ಇಂಥ ಸಂದರ್ಭದಲ್ಲಿ ಹರೀಶ್ ಪೂಂಜಾರ ಲೌಡ್ ಸ್ಪೀಕರ್, ವೇದವ್ಯಾಸ ಕಾಮತರ ಮಾತಿನ ಚಾತುರ್ಯ, ಭರತ ಶೆಟ್ಟರ ಅಬ್ಬರ, ಯಷ್ಪಾಲ್ ಸುವರ್ಣರ ರುತ್ ಲೆಸ್ ನಡೆಗಳು ಕಂಡು ಬರಬೇಕಿತ್ತು. ಕರಾವಳಿಯ ಬಿಜೆಪಿ ಶಾಸಕರುಗಳು ಧರ್ಮಸ್ಥಳದಲ್ಲಿ ನಿಂತು, ಶವ ಅಗೆದು ಹೆಣ ಟೇಬಲ್ಲಿಗೆ ಮಡಗಿ, ಸರ್ಜಿಕಲ್ ಸ್ಯಾಂಪಲ್ ತೆಗೆದುಕೊಳ್ಳುವ ತನಕವಾದರೂ ಪ್ರಕರಣದ ಬಗ್ಗೆ ಕನಿಷ್ಠ ಉತ್ಸುಕತೆ ತೊರಬೇಕಿತ್ತು. ಅದಾಯ್ತಾ?
ಉತ್ತರ ಎಲ್ಲರಿಗೂ ತಿಳಿದಿದೆ. ಯಾವುದೇ ಲೌಡ್ ಸ್ಪೀಕರ್ ವರ್ಕ್ ಆಗಲಿಲ್ಲ. ಹಿಂದೂ ಕುಟುಂಬಗಳ ಸಹಾಯಕ್ಕೆ ಯಾರೊಬ್ಬ ಬಿಜೆಪಿ ನಾಯಕ ಮುಂದೆ ಬರಲಿಲ್ಲ. ಹಿಂದುತ್ವದ ಹೆಸರಿನಲ್ಲಿ ಓಡಾಡುವ ಬೇರೆ ಯಾವುದೇ ಘನ ನಾಯಕ ಅಥವಾ ಪುಟಗೋಸಿ ಪುಡಾರಿ ಕೂಡಾ ಕೊನೆ ಪಕ್ಷ ಕೆಮ್ಮಲೂ ಇಲ್ಲ. ಯಾಕೆಂದರೆ ಎದುರು ಇದ್ದವನು ಅವನು!!! ಆತನನ್ನು ಎದುರು ಹಾಕಿಕೊಂಡರೆ ಈ ಸಲ ಅಧಿಕಾರದಲ್ಲಿರುವಾಗ ಬೇಕಾದ ಡೊನೇಶನ್ ಅಥವಾ ಫಂಡ್ ಸಿಗಲಿಕ್ಕಿಲ್ಲ, ಮುಂದಿನ ಸಲ ಪಕ್ಷದ ಟಿಕೆಟ್ ಕೂಡಾ ದೊರೆಯಲಿಕ್ಕಿಲ್ಲ, ಪಕ್ಷದಲ್ಲಿ ಮುಂದೆ ಯಾವುದೇ ಪೋಸ್ಟ್ ಆಗಲಿಕ್ಕಿಲ್ಲ…! ಇದು ಕರಾವಳಿ ರಾಜಕೀಯದ ಇವತ್ತಿನ ಕಥೆ!!
ನರಮೇಧಕ್ಕೂ ಸ್ಪಂದಿಸದ ನಕಲಿ ಹಿಂದುತ್ವ!
ಒಟ್ಟಾರೆಯಾಗಿ, ‘ಹಿಂದುತ್ವ’ ವು (ನಕಲಿ ಹಿಂದುತ್ರವು) ಕಟ್ಟರ್ ಹಿಂದುತ್ವದ ಪ್ರದೇಶವಾದ ಕರಾವಳಿಯಲ್ಲಿಯೇ ಹಿಂದೂಗಳಿಗೆ ಸಹಾಯ ಮಾಡದೆ ಹೋಯ್ತು. ಇದರ ಅರ್ಥವೇನು? ಹಿಂದೂ ಯುವಕರ ಭಾವನೆಗಳಿಗೆ ಬಿಜೆಪಿ ಮತ್ತು ಸಂಘ ಪರಿವಾರ ಸ್ಪಂದಿಸುತ್ತಿಲ್ಲ ಅಂತ ತಾನೇ?! ಕಣ್ಣೆದುರು ರಾಚುವಂತೆ ಕಾಣುತ್ತಿರುವ ನರಮೇಧಕ್ಕೂ, ಆ ಸಂಬಂಧ ಹೋರಾಟಕ್ಕೂ ಸಣ್ಣ ಗುಟುರು ಕೂಡಾ ಹಾಕಲಾಗದ ವ್ಯಕ್ತಿಯನ್ನು/ ಸಂಸ್ಥೆಗಳನ್ನು ಏನೆಂದು ಜರಿಯೋಣ?
ಈ ಸಲ, ಒಂದೇ ಒಂದು ಹಿಂದೂ ಸಂಘಟನೆ ಕೂಡಾ ಹಿಂದೂಗಳ ಪರವಾಗಿ ನಿಲ್ಲಲಿಲ್ಲ. ಮೊನ್ನೆ ವಿಶ್ವ ಹಿಂದೂ ಪರಿಷತ್ ಒಂದು ಪ್ರಕಟಣೆ ಹೊರಡಿಸಿ, ‘SIT ತನಿಖೆಯನ್ನು ನಾವು ಸ್ವಾಗತಿಸುತ್ತೇವೆ’ ಎನ್ನುವ ನಾಮಕೆವಾಸ್ತೆ ಪೇಲವ ಹೇಳಿಕೆಯನ್ನು ಬಿಟ್ಟರೆ ಎಲ್ಲರೂ ಮೌನ ಮುನಿಗಳು. ಎಲ್ಲ ಸರ್ಕಾರಿ ಸಂಸ್ಥೆಗಳು ವ್ಯವಸ್ಥೆಗಳನ್ನು ಏಕಾಏಕಿ ಆಪೋಷಣ ತೆಗೆದುಕೊಳ್ಳಬಲ್ಲಂತಹ ಬಲಿಷ್ಠ ಸಾಮ್ರಾಜ್ಯದ ಎದುರು ನಿಂತವರು ಎಡ ಪಕ್ಷದವರು, ಕಮ್ಯೂನಿಸ್ಟರು ಎಂದು ನಾವು ಪದೇ ಪದೇ ಗೇಲಿ ಮಾಡುತ್ತಿದ್ದ ಅದೇ ಜನ! ಅದೇ ರೀತಿ, ಎಸ್ ಡಿಪಿಐನವರು, ನಾವು ಸದಾ ದ್ವೇಷಿಸುವ(?!) ಪ್ರಕಾಶ್ ರಾಜ್, ನಮಗೆ ಇಷ್ಟ ಆಗದ ಚೇತನ್ ಅಹಿಂಸಾ, ನಮಗೆ ಸಂಬಂಧವೇ ಇಲ್ಲದ ದೂರದ ಊರಿನ ಪ್ರಗತಿಪರ ಚಿಂತಕರು, ವಕೀಲರು, ಮಾಜಿ ನ್ಯಾಯಾಧೀಶರು, ದೂರದ ಕೇರಳದ ಮತ್ತೆ ಕೆಲವರು. ಹಿಂದೂ ಕುಟುಂಬಗಳ ನೋವಿಗೆ ಹಿಂದುತ್ವ ಸ್ಪಂದಿಸದೆ ಹೋದಾಗ ಸಹಾಯಕ್ಕೆ ಬಂದವರು ಇವರೇ. ಇಂಥಹಾ ಹೊತ್ತಿನಲ್ಲಿ, ಕಳೆದುಕೊಂಡ ಜೀವಗಳಿಗೆ ಬೆಲೆ ಕೊಡದ ಈ ನಾಯಕರು ಕರಾವಳಿಯಲ್ಲಿ ಹಿಂದುತ್ವವನ್ನು ಈ ನಾಲಾಯಕ್ ಲೀಡರ್ ಗಳು ಉಳಿಸಿ ಬೆಳೆಸುತ್ತಾರೆಯೇ?! ಇದು ನಿಧಾನಕ್ಕೆ ತಾಳ್ಮೆಯಿಂದ ಅಳೆದು ತೂಗಿ ಯೋಚಿಸುವ ಸಮಯ.
ಅಷ್ಟೇ ಅಲ್ಲ: ಇಷ್ಟೆಲ್ಲಾ ನಡೆದರೂ ಯಾವುದೇ ಪಕ್ಷದ ಶಾಸಕರಾಗಲಿ, ಮಂತ್ರಿಗಳಾಗಲಿ, ಸಂಸದರಾಗಲಿ ಈ ಬಗ್ಗೆ ತುಟಿ ಬಿಚ್ಚಿಲ್ಲ. ಇದೀಗ ಸಾರ್ವಜನಿಕರ ಬೇಡಿಕೆಯಂತೆ ಎಸ್ಐಟಿ ತಂಡ ರಚನೆ ಆದ ಮೇಲೆ ಮಾಧ್ಯಮದವರ ಪ್ರಶ್ನೆಗಳಿಗೆ ಅಲ್ಲೊಂದು ಇಲ್ಲೊಂದು ನಾಯಕರು ಮೆಲ್ಲಗೆ ಬೇರೆ ದಾರಿ ಕಾಣದೆ ಏನೇನೋ ಬಡ ಬಡಾಯಿಸ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಎದ್ದು ಕಾಣೋದು, ಹಿಂದೂ ನಾಯಕರೆಂದು ಫೋಸ್ ನೀಡಿ ರಾಜಕೀಯ ಪಟ್ಟಗಳಿಸಿಕೊಂಡು ಇವತ್ತು ಶಾಸಕರಾಗಿ ಮೆರೆಯುತ್ತಿರುವ ಬಿಜೆಪಿ ಶಾಸಕರುಗಳ ಅಸಹನೀಯ ಮೌನ!
ಯಾವ ಬಿಜೆಪಿ ನಾಯಕ ಏನೇನು ಅಂದರು?!
ಸಂಸದ ಬಿ ವೈ ರಾಘವೇಂದ್ರ
ತನಿಖೆಯನ್ನು ನಾನು ಸ್ವಾಗತ ಮಾಡ್ತೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದರ ಚರ್ಚೆ ಆಗ್ತಿತ್ತು(ಯಾವುದರ ಅಂಥ ಅವರಿಗೆ ಕ್ಲಾರಿಟಿ ಇಲ್ಲ ಅನ್ನಿಸುತ್ತದೆ) ತನಿಖೆ ಆಗಲಿ, ತನಿಖೆ ಆದ ನಂತರ ಸತ್ಯ ಗೊತ್ತಾಗುತ್ತೆ. ಆದಷ್ಟು ಬೇಗ ಈ ವಿಚಾರ ಕೊನೆಯಾಗಬೇಕು. ಬೇಗ ತನಿಖೆಯಾಗಿ ಸತ್ಯಾಸತ್ಯತೆಯನ್ನು ರಾಜ್ಯದ ಜನತೆಗೆ ತಿಳಿಯುವಂತಾಗಲಿ ಅಂಥ ಹೇಳಿದ್ದಾರೆ, ಅದು ಅರೆ ಮನಸ್ಸಿನಿಂದ. ಯಾವುದೇ ರೀತಿಯಲ್ಲಿ ಧರ್ಮಸ್ಥಳ ಕೇಂದ್ರದಿಂದ ಆ ರೀತಿಯ ತಪ್ಪುಗಳು ಆಗಿಲ್ಲ ಅನ್ನೋ ವಿಶ್ವಾಸ ಇದೆ. ಧರ್ಮದರ್ಶಿಗಳ ನೇತೃತ್ವದಲ್ಲಿ ಎಷ್ಟೋ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ. ಇಂಥ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರ ಇಟ್ಕೊಂಡು ಈ ತರದ ಚರ್ಚೆಗಳು ನಡೀತಿದ್ವು ಅಂದಿದ್ದಾರೆ. (ಹಾಗಾದರೆ ಸಂಸದ ಬಿ ವೈ ರಾಘವೇಂದ್ರರೇ ನಿಮ್ಮಂಥ ರಾಜಕಾರಣಿಗಳಿಗೆ ಸೌಜನ್ಯ ಅತ್ಯಾಚಾರ ಮತ್ತು ನೂರಾರು ಕೊಲೆಗಳು ಕ್ಷುಲ್ಲಕ ವಿಚಾರವೇ?)
ಯಡಿಯೂರಪ್ಪ ಉವಾಚ
“ಧರ್ಮಸ್ಥಳ ಪ್ರಕರಣಗಳ ತನಿಖೆಗೆ ಎಸ್ಐಟಿ ರಚನೆ ಮಾಡಿಕೊಳ್ಳಲಿ, ಏನೂ ತೊಂದರೆ ಇಲ್ಲ. ಯಾವುದೇ ತಪ್ಪಾಗಿಲ್ಲ. ಅವರು ತನಿಖೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ, ಅದಕ್ಕೇನೂ ಸಮಸ್ಯೆ ಇಲ್ಲ ಅಂತ ಹೇಳಿದ್ದಾರೆ. ಅಂದರೆ ತೊಂದರೆ ಅನುಭವಿಸುವವರು ತೊಂದರೆ ಅನುಭವಿಸಿ. ನಾವು ನಮ್ಮ ಕುಟುಂಬದವರು ರಾಜಕಾರಣ ಮಾಡಿಕೊಂಡು ನಮಗೆ ಬೇಕಾದ್ದನ್ನು ಮಾಡಿಕೊಂಡು ಆರಾಮ ಇರ್ತೇವೆ. ಹಿಂದೂ ಹುಡುಗಿಯರು, ಅವರ ಕುಟುಂಬದವರು ಸಾಯಲಿ, ಇದಕ್ಕೂ ನಮಿಗೂ ಸಂಬಂಧ ಇಲ್ಲ ಅನ್ನುವ ರೀತಿ ಇತ್ತು ಯಡಿಯೂರಪ್ಪನವರ ಮಾತು.
ಜೈಲ್ ರೆಡ್ಡಿ ಭವಿಷ್ಯ
ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ. ಇವತ್ತಿನ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನ ಅನುಸರಿಸುತ್ತಿದೆ. ಈ ವಿಷಯವನ್ನ ಬಹಳಷ್ಟು ವರ್ಷಗಳ ನಂತರ ಅನಗತ್ಯವಾಗಿ ಎಳೆಯುವಂತ ಕೆಲಸ ಯಾರು ಮಾಡ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಒಂದು ಸಮುದಾಯವನ್ನ ಒಲೈಸುವ ಸಲುವಾಗಿ ವಿಶ್ವದೆಲ್ಲೆಡೆ ಹೆಸರುವಾಸಿಯಾದ ಮಂಜುನಾಥನ ಸನ್ನಿದಿಗೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ನಡಕೊಳ್ಳುತ್ತಿದ್ದಾರೆ. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಸಂಪೂರ್ಣವಾಗಿ ಹಿಂದೂ ವಿರೋಧಿ ನಡೆ. ಮಂಜುನಾಥನ ಶಾಪದಿಂದ ಈ ಸರ್ಕಾರ ಸರ್ವನಾಶ ಅನ್ನೋದು ಜೈಲ್ ರೆಡ್ಡಿಯ ಕೂಗು.
ಸಿ.ಟಿ. ರವಿ ಬಿಗಿಲ್!
ಎಂಎಲ್‌ಸಿ ಸಿ.ಟಿ. ರವಿ ಪ್ರಸ್ತುತ ಪ್ರಕರಣವು ಧರ್ಮಸ್ಥಳದ ಪ್ರತಿಷ್ಠೆ ಹಾಳು ಮಾಡಲು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದೀಗ ಮತ್ತೊಮ್ಮೆ ಸೀಟಿ ಬಿಗಿಲ್ ಊದಿದ್ದು,
ಧರ್ಮಸ್ಥಳ ಘಟನೆ ಸಂಬಂಧಿಸಿದಂತೆ ಸರ್ಕಾರ SIT ತನಿಖೆಗೆ ವಹಿಸಿದೆ. ಅದನ್ನ ನಾವು ಸ್ವಾಗತ ಮಾಡ್ತೇವೆ. ತನಿಖೆ ಪಾರದರ್ಶಕವಾಗಿ ನಡೆಯಲಿ. ನಾವು ಮಧ್ಯಪ್ರವೇಶ ಮಾಡಲ್ಲ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ 500 ಕೆರೆ ಜೀರ್ಣೋದ್ಧಾರ ಮಾಡಿದ್ದಾರೆ. ಸಾವಿರಾರು ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿದ್ದಾರೆ. ಧರ್ಮಸ್ಥಳ ಸರ್ಕಾರ ಅಲ್ಲ. ಜನ ಕೊಟ್ಟಿರೋ ಹಣದಲ್ಲಿ ಅನೇಕ ಸಾರ್ವಜನಿಕ ಕಾರ್ಯಕ್ರಮ ನಡೆದಿದೆ. ಹಾಗಾಗಿ ನಾನು ಯಾವತ್ತು ಧರ್ಮಸ್ಥಳದ ಪರವಾಗಿ ನಿಲ್ತೇನೆ.(ನೂರಾರು ಹೂತು ಹಾಕಿದ ಪ್ರಕರಣದ ಬಗ್ಗೆ ಮಾತಾಡೋದು ಬಿಟ್ಟು ಗ್ರಾಮಾಭಿವೃದ್ದಿ, ಕೆರೆ ಬಾವಿ ಬಗ್ಗೆ ಬಡಾಯಿ)
ಅರವಿಂದ್ ಬೆಲ್ಲದ್ ಕಹಿ ಮಾತು
ಶಾಸಕ ಅರವಿಂದ್ ಬೆಲ್ಲದ್ ರವರು ನೂರಾರು ಶವ ಹೂತ ದೂರು ಆಧಾರರಹಿತ ಎಂದು ಟೀಕಿಸಿದ್ದಾರೆ.
ಆರ್. ಅಶೋಕ್ ಅಮೃತ ನುಡಿ!!
ನನಗೆ ಒಂದು ಅನುಮಾನ: ಒಬ್ಬ ಮುಸ್ಲಿಂ ಹುಡುಗ ಪ್ರತಿದಿನ ಧರ್ಮಸ್ಥಳ ಬಗ್ಗೆ ಅಪ್ಲೋಡ್ ಮಾಡ್ತಿದ್ದಾನೆ – ಈ ವಿಚಾರದಲ್ಲಿ ಕೇರಳಕ್ಕೆ ಯಾಕೆ ಇಷ್ಟೊಂದು ಮುತುವರ್ಜಿ – ಇಂಥ ಮಾತು ಆರ್. ಅಶೋಕ್ ಬಿಟ್ಟು ಬೇರೆ ಯಾರ್ ತಾನೇ ಹೇಳಬಹುದು?! ಈತನದು ನೇರ ಹಿಂದೂ ಮುಸ್ಲಿಂ ಜಗಳ ತಂದಿಡುವ ಹುನ್ನಾರ.
ಮುಂದೇನು ಮಾಡೋಣ ?
ಸಂತ್ರಸ್ತ ಕರಾವಳಿಯ ಮತ್ತು ಒಟ್ಟು ರಾಜ್ಯದ ಜನ ನಿರ್ಧಾರ ಮಾಡಬೇಕು. ನಮಗೆ ಎಂಥ ನಾಯಕರು ಬೇಕು? ಕೇವಲ ತಮ್ಮ ಓಟಿಗಾಗಿ ಹಿಂದು ಮುಸ್ಲಿಂ ಗಲಾಟೆ ಎಬ್ಬಿಸಿ, ಅಮಾಯಕರ ಹೆಣ ಬಿದ್ದಾಗ ಬಂದು ಮಾತನಾಡಿ ನಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರು ಬೇಕಾ? ಕರಾವಳಿಯ ಮತ್ತು ರಾಜ್ಯದ ಬಿಜೆಪಿ ನಾಯಕರಿಂದ ಹೋರಾಟಕ್ಕೆ ಏನೂ ಗಿಟ್ಟಲಿಲ್ಲ, ಮುಂದೆ ಗಿಟ್ಟುವುದು ಕೂಡಾ ಇಲ್ಲ. ಎಸ್ಐಟಿ ತಂಡ ಇಂದು ರಚನೆ ಆಗಿದೆ ಅಂದರೆ ಅದ್ಯಾವುದೇ ರಾಜಕೀಯ ನಾಯಕರಿಂದ ಅಲ್ಲ. ಅದು ಕೇವಲ ನ್ಯಾಯಕ್ಕಾಗಿ ಬಡಿದಾಡಿದ ಹೋರಾಟಗಾರರಿಂದ, ವಕೀಲರಿಂದ ಮತ್ತು ಉಂಟಾದ ಸಾರ್ವಜನಿಕರ ಒತ್ತಡದಿಂದ. ಸಿದ್ದರಾಮಯ್ಯ ಸರ್ಕಾರ ಸ್ವ ಇಚ್ಛೆಯಿಂದ ಇದನ್ನೆಲ್ಲ ಮಾಡಿಲ್ಲ ಅನ್ನೋದು ರಾಜ್ಯದ ಜನತೆಗೆ ಗೊತ್ತಿರುವ ಇನ್ನೊಂದು ನಗ್ನ ಸತ್ಯ. ಇನ್ನು, ಉಳಿದ ಎಲ್ಲಾ ಪಕ್ಷದ ನಾಯಕರನ್ನು ಇದ್ದು ಸತ್ತಂಗೆ ಅನ್ನುವುದಕ್ಕಿಂತ, ಸತ್ತವರನ್ನು ಸಿಂಗರಿಸಿ ಕೂರಿಸಿದ ರೀತಿ ಎಂದು ಹೇಳಲು ಅಡ್ಡಿ ಇಲ್ಲ. ಹಿಂದುತ್ವ ಅಂದರೆ, ಅವರವರ ಆಚಾರ ವಿಚಾರಗಳ ಜತೆ ಬದುಕುತ್ತಾ, ಒಗ್ಗೂಡಿಸಿ ಎಲ್ಲರನ್ನೂ ತೆಗೆದುಕೊಂಡು ಹೋಗುವ ಸನಾತನ ಜೀವನ ಧರ್ಮ. ‘ನಕಲಿ ಹಿಂದುತ್ವ ‘ ನಮಗೆ ಬೇಕಿಲ್ಲ, ‘ ಅಸಲಿ ಹಿಂದುತ್ವ’ ಮತ್ತೆ ರಾರಾಜಿಸಬೇಕಿದೆ. ಅದಕ್ಕಾಗಿ ಕರಾವಳಿಯ ಯುವಕರು ಉದ್ವೇಗವನ್ನು ಕಳಚಿಟ್ಟು ಸಮಚಿತ್ತದಿಂದ ಯೋಚಿಸಿ ಹೆಜ್ಜೆ ಇಡಬೇಕಿದೆ.
ಶ್ರೀ ಉದಯ ಕುಮಾರ್, ಮುಖ್ಯ ಸಂಪಾದಕರು, ಹೊಸ ಕನ್ನಡ ಪತ್ರಿಕಾ ಸಮೂಹ
Comments are closed.