ಲವ್ ಬ್ರೇಕ್​ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು! ಹದಿಹರೆಯದಲ್ಲಾದ ಪ್ರೀತಿ ಮುದಿಪ್ರಾಯದಲ್ಲಿ ದಕ್ಕಿತು!!

ಪ್ರೀತಿ ಎಂಬುದು ಪ್ರತಿಯೊಬ್ಬರ ಮನದಲ್ಲಿ ಚಿಗುರೊಡೆಯುತ್ತದೆ. ಅದರಲ್ಲೂ ಹದಿಹರಯದ ವಯಸ್ಸಲ್ಲಂತೂ ಹೆಚ್ಚೆನ್ನಬಹುದು. ಪ್ರೀತಿ ಎಲ್ಲರಿಗೂ ಆಗಬಹುದು ಆದರೆ ಪ್ರೀತಿ ಮಾಡಿದವರು ಎಲ್ಲರಿಗೂ ಸಿಗುವುದಿಲ್ಲ. ಪ್ರೀತಿಸಿದವರನ್ನೇ ಮದುವೆಯಾಗುವ ಅದೃಷ್ಟ ಕೂಡ ಎಲ್ಲರದಾಗುವುದಿಲ್ಲ. ಎಲ್ಲೋ ನೂರಕ್ಕೆ ಒಬ್ಬರೊ, ಇಬ್ಬರೋ ಇಂತದರಲ್ಲಿ ಅದೃಷ್ಟ ಮಾಡಿ ತಮ್ಮ ಪ್ರೀತಿಯನ್ನು ಗೆಲ್ಲುತ್ತಾರೆ. ಆದರೆ ಇಲ್ಲೊಂದು ವಿಶಿಷ್ಟ ರೀತಿಯ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹರಯದಲ್ಲಿ ಪ್ರೀತಿಸಿ ಪ್ರಾಯವಾದ ಬಳಿಕ ಮದುವೆಯಾದ ಗಟನೆ ನಡೆದಿದೆ.

ಹೌದು, ಈ ಬಲು ಅಪರೂಪದ ದಂಪತಿಯ ಪ್ರೇಮಕಥೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 7 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ಅವರು 43ವರ್ಷಗಳ ಹಿಂದೆ ಬೇರ್ಪಟ್ಟಿದ್ದರು. ಇದೀಗ ಈಗ ನಾಲ್ಕು ದಶಕಗಳ ನಂತರ ಅವರು ವಿವಾಹವಾಗಿದ್ದಾರೆ. ಅವರ ಮೊದಲ ಭೇಟಿ 1971 ರಲ್ಲಿ ಆಗಿತ್ತು.ಏನಿದು ಈ ವಿಚಿತ್ರ ಹಾಗೂ ವಿಶಿಷ್ಟ ಲವ್ ಸ್ಟೋರಿ ಗೊತ್ತ? ಅಮೆರಿಕನ್ ಮ್ಯಾಗಜೀನ್ ಪೀಪಲ್ ಪ್ರಕಾರ, ಈ ನವ ದಂಪತಿಗಳ ಹೆಸರು ಸ್ಟೀಫನ್ ವಾಟ್ಸ್ ಮತ್ತು ಜೀನ್ ವಾಟ್ಸ್. ಅವರು ಅಮೆರಿಕದ ನಿವಾಸಿಗಳು. ಜೀನ್ ಈಗಷ್ಟೇ 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಸ್ಟೀಫನ್ 73 ವರ್ಷ ವಯಸ್ಸಿನವರಾಗಿದ್ದಾರೆ. ಕಾಲೇಜು ದಿನಗಳಲ್ಲಿ ಜೀನ್ ಸ್ಟೀಫನ್ ಅವರನ್ನು ಭೇಟಿಯಾಗಿದ್ದರು. ನಂತರ ಅವರು ಸ್ನೇಹಿತರಾಗಿ ಸ್ನೇಹವು ಪ್ರೀತಿಗೆ ತಿರುಗಿತ್ತು.

ಜೀನ್ ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳುತ್ತಾರೆ. ಆದರೆ ಸ್ಟೀಫನ್ ಕಪ್ಪಗಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅವರ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಇದು ಇಬ್ಬರಿಗೂ ತೀವ್ರ ಆಘಾತವನ್ನು ಉಂಟು ಮಾಡಿತ್ತು. ಆದರೂ ಅವರು ತಮ್ಮ ಪ್ರೀತಿಯನ್ನು ಬಿಟ್ಟಿರಲಿಲ್ಲ. ಸತತ 7 ವರ್ಷಗಳ ಕಾಲ ಡೇಟಿಂಗ್ ಕೂಡ ಮಾಡಿದ್ದರು. ಒಂದು ದಿನ ಜೀನ್ ಕರೆ ಮಾಡಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಆದರೆ ಅಪ್ಪ ಅಮ್ಮನ ನಿರ್ಧಾರದ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದರು, ಆಗ ಸ್ಟೀಫನ್ ಒಲ್ಲದ ಮನಸ್ಸಿನಿಂದಲೇ ಆಕೆಯಿಂದ ಬೇರೆಯಾಗುವ ನಿರ್ಧಾರ ಮಾಡಿದ್ದರು. ಹೀಗಾಗಿ ಕೆಲಸಕ್ಕೆಂದು ಬೇರೆ ಊರುಗಳಿಗೆ ತೆರಳಿ ಸಂಬಂಧವನ್ನು ಮೊಟಕುಗೊಳಿಸಿದ್ದರು.

ನಂತರ ಇಬ್ಬರೂ ಬೇರೆ ಬೇರೆ ಮದುವೆಯಾಗಿ ಪ್ರತ್ಯೇಕವಾಗಿ ನಾಲ್ಕು ದಶಕಗಳ ಕಾಲ ಪ್ರತ್ಯೇಕವಾಗಿಯೇ ಜೀವನ ನಡೆಸುತ್ತಿದ್ದರು. 2021ರಲ್ಲಿ ಅವರ ಜೀವನದಲ್ಲಿ ಮಹತ್ವದ ತಿರುವು ಸಂಭವಿಸಿತ್ತು, ಆಗ ಜೀನ್ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದರು. ಒಂಟಿಯಾಗಿ ವಾಸಿಸುತ್ತಿದ್ದರು. ಅಷ್ಟರಲ್ಲಿ ಸ್ಟೀಫನ್ ವಿಳಾಸ ಸಿಕ್ಕಿತ್ತು, ಸ್ಟೀಫನ್ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಮಾಹಿತಿ ದೊರೆತಿತ್ತು. ಬಳಿಕ ಅಲ್ಲಿಗೆ ತೆರಳಿದ ಜೀನ್​ನನ್ನು ಕಂಡು ಸ್ಟೀಫನ್ ಭಾವುಕರಾಗಿ ಅಳಲು ಶುರು ಮಾಡಿದ್ದರು.

ಸ್ಟೀಫನ್​ಗೆ ಬ್ರೇಕ್​ ಸ್ಟ್ರೋಕ್ ಆಗಿ, ಗಾಲಿ ಕುರ್ಚಿಯಲ್ಲೇ ಇರುವ ಪರಿಸ್ಥಿತಿ ಇತ್ತು. ನಂತರ ಜೀನ್​ ಸ್ಟೀಫನ್​ನನ್ನು ತನ್ನ ಮನೆಗೆ ಕರೆದೊಯ್ದರು. ಬಳಿಕ ಇಬ್ಬರೂ ವಿವಾಹವಾದರು. ಅಲ್ಲದೆ ಕೊನೆಯ ಉಸಿರಿರುವವರೆಗೂ ಒಟ್ಟಿಗೆ ಜೀವಿಸುತ್ತೇವೆ ಎಂದು ಪ್ರಮಾಣ ಕೂಡ ಮಾಡಿದರು. ಒಟ್ಟಿನಲ್ಲಿ ಸುಮಾರು 43ವರ್ಷಗಳ ನಂತರ ಪ್ರೇಮದ ಜೋಡಿಗಳು ಒಂದಾಗಿದ್ದಾರೆ. ಇದರ ಮೂಲಕ ನಿಜವಾದ ಪ್ರೀತಿಗೆ ಸಾವಿಲ್ಲ ಎಂಬುದನ್ನು ತೋರಿಸಿದ್ದಾರೆ.

Leave A Reply

Your email address will not be published.