ಬೆಕ್ಕನ್ನು ಕದ್ದಿದ್ದಾರೆಂದು ನೆರೆಮನೆಯವರ ಮೇಲೆ ಸಂಶಯ ಪಟ್ಟ ಆಸಾಮಿ! ಕೋಪಗೊಂಡ ಈತ ಅವರು ಸಾಕಿದ ಪಾರಿವಾಳಿಗೆ ವಿಷ ಉಣಿಸಿಬಿಟ್ಟ!
ಸಾಮಾನ್ಯವಾಗಿ ಹೆಚ್ಚಿನವರು ಮನೆಗಳಲ್ಲಿ ನಾಯಿ, ಬೆಕ್ಕು ಗಳನ್ನು ಸಾಕಿರುತ್ತಾರೆ. ಇನ್ನೂ ಕೆಲವರು ಇವುಗಳೊಂದಿಗೆ ಪಾರಿವಾಳ, ಗಿಳಿ, ಕೋಳಿ, ಬಾತುಕೋಳಿಗಳಂತಹ ಕೆಲವು ಪಕ್ಷಿಗಳನ್ನು ಸಾಕಿರುತ್ತಾರೆ. ನಾವು ಪ್ರೀತಿಯಿಂದ ಸಾಕಿದಂತಹ ಈ ಪ್ರಾಣಿ, ಪಕ್ಷಿಗಳು ಕಾಣೆಯಾದಾಗ ಅಥವಾ ಅವುಗಳಿಗೇನಾದರೂ ತೊಂದರೆಯಾದಾಗ ನಮಗೆ ತುಂಬಾ ನೋವಾಗುತ್ತದೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಹುಡುಕುವ ಪ್ರಯತ್ನವನ್ನ ನಾವು ಮಾಡುತ್ತೇವೆ. ಆದರೆ ಇಲ್ಲೊಬ್ಬ ಆಸಾಮಿ ಬೆಕ್ಕನ್ನು ಕಳೆದು ಕೊಂಡು, ಹುಡುಕಿ ಹುಡುಕಿ ಸುಸ್ತಾಗಿ, ಕೊನೆಗೆ ಏನು ಮಾಡಿದ್ದಾನೆ ಗೊತ್ತಾ ?
ಘಟನೆ ಉತ್ತರ ಪ್ರದೇಶದ ಷಹಜಹಾನ್‌ಪುರದ ಠಾಣಾ ಸದರ್ ಬಜಾರ್‌ನ ಮೊಹಲ್ಲಾ ಅಮಾಂಜೈ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಬೆಕ್ಕನ್ನು ಕದ್ದೊಯ್ದಿದ್ದಾರೆ ಎಂದು ಶಂಕಿಸಿ ಕೋಪದಿಂದ ನೆರೆಮನೆಯವರ ಪಾರಿವಾಳಗಳಿಗೆ ವಿಷ ನೀಡಿ, ಅಷ್ಟೂ ಪಾರಿವಾರಗಳನ್ನು ಕೊಂದಿದ್ದಾನೆ. ಆರೋಪಿ ಈ ಕೃತ್ಯವನ್ನು ಎಸಗಿದ್ದಾನೆ.
ಆರೋಪಿ ಅಬಿದ್ ತುಂಬಾ ಪ್ರೀತಿಯಿಂದ ಸಾಕಿದ ಬೆಕ್ಕು ಇತ್ತೀಚೆಗೆ ಕಣ್ಮರೆಯಾಗಿತ್ತು. ಅಬಿದ್ ಕೂಡ ತುಂಬಾ ಕಡೆ ಹುಡುಕಿ ಹುಡುಕಿ ಸೋತು ಸುಣ್ಣವಾಗಿದ್ದಾನೆ. ಕೊನೆಗೆ ಆತ ನೆರೆಮನೆಯವರ ಮೇಲೆ ಸಂಶಯಪಟ್ಟಿದ್ದಾನೆ. ತನ್ನ ಬೆಕ್ಕನ್ನು ಇವರೇ ಕದ್ದಿದ್ದಾರೆ ಎಂದು ಭಾವಿಸಿ ಕೋಪಗೊಂಡಿದ್ದಾನೆ.
ಕೊನೆಗೆ ನೆರೆಮನೆಯವರೇ ಕಳ್ಳರೆಂದು ನಿರ್ಧಾರ ಮಾಡಿ ಸೇಡುತೀರಿಸಲು ಮುಂದಾಗಿದ್ದಾನೆ. ಹಿಂದು ಮುಂದು ನೋಡದ ಈತ, ಪಾಪ ಆ ಪಕ್ಕದ ಮನೆಯವನು ವರ್ಷಗಳಿಂದ ಸಾಕಿದ್ದ ಪಾರಿವಾಳಗಳಿಗೆ ವಿಷ ಉಣಿಸಿದ್ದಾನೆ. ನೆರೆಮನೆಯವರು ಸಾಕಿದ್ದ 78 ಪಾರಿವಾಳಗಳಲ್ಲಿ ವಿಷ ತಿಂದು ಸುಮಾರು 30 ಪಾರಿವಾಳಗಳು ಸಾವನ್ನಪ್ಪಿದ್ದು ಸದ್ಯ ಇದರ ಕುರಿತು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.