ಒಂದೇ ದಿನ ಸತತ 12 ಗಂಟೆ ನಡೆದು 80 ಕಿ.ಮೀ.ದೂರ ಕ್ರಮಿಸಿ ಮದುವೆಯಾದ ಗೋಲ್ಡಿ
ಕಾನ್ಪುರ : ಲಾಕ್ಡೌನ್ನಿಂದಾಗಿ ಭಾರತದಲ್ಲಿ ನಿಶ್ಚಯವಾಗಿದ್ದ ಹೆಚ್ಚಿನ ಮದುವೆ ಸಮಾರಂಭಗಳನ್ನು ಮುಂದೂಡಲಾಗಿದೆ. ಆಡಂಬರದ ಮದುವೆ ಅಲ್ಲದಿದ್ದರೂ ಒಂದಷ್ಟು ಜನ ಸೇರಿಸಿ, ಊಟ ಹಾಕಿಸಿ ಮದುವೆ ಮಾಡಿದರೆನೇ ಭಾರತೀಯರಿಗೆ ತೃಪ್ತಿ. ಆದಾಗ್ಯು ಅಲ್ಲಿಲ್ಲೊಂದು ಮದುವೆಗಳು ಸರಳವಾಗಿ ನಡೆಯುತ್ತಿವೆ. ಮತ್ತೆ ಕೆಲವು ಮದುವೆಗಳು ತಮ್ಮದೇ ಆದ ಕಾರಣಕ್ಕೆ ವಿಶೇಷ ಅನ್ನಿಸಿಕೊಳ್ಳುತ್ತವೆ.
ಆಕೆ ಕಾನ್ಪುರದ ದೇಹತ್ನ ಮಂಗಲ್ಪುರದ ನಿವಾಸಿ ಗೋಲ್ಡಿ ಎಂಬ19 ವರ್ಷದ ಯುವತಿ. ವರನ ಮನೆಗೆ ಆಕೆ 80 ಕಿಲೋ ಮೀಟರ್ ನಡೆದುಕೊಂಡು ಹೋಗಿ ವಿವಾಹವಾಗಿದ್ದಾಳೆ !
ಕನೌಜ್ನ ಬೈಸಾಪುರ ಗ್ರಾಮದ 23 ವರ್ಷದ ವೀರೇಂದ್ರ ಕುಮಾರ್ ರಾಥೋಡ್ ಜೊತೆ ಆಕೆಯ ವಿವಾಹ ನಿಶ್ಚಯವಾಗಿತ್ತು. ಮೊದಲೊಂದು ಬಾರಿ ಆಕೆಯ ವಿವಾಹ ಲಾಕ್ ಡೌನ್ ಘೋಷಣೆಯ ಕಾರಣದಿಂದ ಮುಂದಕ್ಕೆ ಹೋಗಿತ್ತು. ಎರಡನೆಯ ಬಾರಿ ಲಾಕ್ ಡೌನ್ ವಿಸ್ತರಣೆಯ ಕಾರಣದಿಂದ ಮದುವೆಯನ್ನು ಮತ್ತೆ ಪೋಷಕರು ಮುಂದಕ್ಕೆ ಹಾಕಿದರು. ವರನ ಮನೆಗೆ ಹೋಗಲು ವಾಹನ ಕಾರಣದಿಂದ ಮದುವೆ ಮತ್ತೆ ಮುಂದೂಡಲಾಗಿತ್ತು.
ಆದರೆ ಆಕೆ ಪೋಷಕರ ನಿರ್ಧಾರವನ್ನ ವಿರೋಧಿಸಿದ್ದಳು. ಅಲ್ಲದೇ ತನ್ನ ಊರಿನಿಂದ ವರನ ಊರಿಗೆ ನಡೆದುಕೊಂಡೇ ಹೋಗುವುದು ಎಂದು ಆಕೆ ತೀರ್ಮಾನಿಸಿದ್ದಳು.
ಅದರಂತೆ ಕಳೆದ ಬುಧವಾರ ಮುಂಜಾನೆಯೇ ತನ್ನ ಮನೆಯಿಂದ ಹೊರಟ ಗೋಲ್ಡಿ, ಸಣ್ಣ ಚೀಲವೊಂದರಲ್ಲಿ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನ ತೆಗೆದುಕೊಂಡು, ದಾರಿ ಮಧ್ಯೆ ಏನನ್ನೂ ಏನನ್ನೂ ಸೇವಿಸದ ಗೋಲ್ಡಿ, ಬರೀ ನೀರು ಕುಡಿದು ಸತತ 12 ಗಂಟೆಗಳ ಕಾಲ ಬಿರುಸಾಗಿ ನಡೆದಿದ್ದಾಳೆ.
ಸಂಜೆ ಹೊತ್ತಿಗೆ ವರನ ಮನೆ ತಲುಪಿದ್ದಳು. ಇದನ್ನು ನೋಡಿ ವರನ ಮನೆಯವರಿಗೆ ಮೊದಲು ಅಚ್ಚರಿ. ನಂತರ ತಮ್ಮ ಸೊಸೆಯ ಬಗ್ಗೆ ಹೆಮ್ಮೆ. ಆ ಕೂಡಲೇ ಮನೆಯವರು, ಬಳಿಕ ಗ್ರಾಮಸ್ಥರ ಬೆಂಬಲದೊಂದಿಗೆ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.
” ನಮ್ಮ ಮದುವೆ ಮೇ 4 ಕ್ಕೆ ನಿಶ್ಚಯವಾಗಿತ್ತು. ಆದರೆ ಲಾಕ್ಡೌನ್ನಿಂದಾಗಿ ನ್ನು ಮುಂದೂಡಲಾಗಿತ್ತು. ಮೇ 17 ರ ಎಲ್ಲವೂ ಸರಿಹೋಗುತ್ತೆ ಎಂದು ಅಂದುಕೊಂಡಿದ್ದೆವು. ಆದರೆ ದುರದೃಷ್ಟವಶಾತ್ ಲಾಕ್ಡೌನ್ ಈ ತಿಂಗಳ ಅಂತ್ಯದವರೆಗೂ ಮುಂದುವರೆದಿದೆ. ಹೀಗಾಗಿ ನಮ್ಮ ಪೋಷಕರು ಮತ್ತೊಮ್ಮೆ ಮದುವೆ ಮುಂದೂಡಲು ನಿರ್ಧರಿಸಿದ್ದರು. ಆದರೆ ನಾನು ಸಾಂಕ್ರಾಮಿಕ ಕ್ರಿಮಿಯೊಂದು ನಮ್ಮ ವಿವಾಹದ ಹಾದಿಯಲ್ಲಿ ಅಡ್ಡ ಬರಲು ಬಿಡಬಾರದು ಎಂದು ತೀರ್ಮಾನಿಸಿ ಮನೆಯಿಂದ ಹೊರಟೆ. ಹೀಗಾಗಿ ನಾನು ಯಾರಿಗೂ ತಿಳಿಸದೆ ಹುಡುಗನ ಮನೆಗೆ ಹೋದೆ ಎಂದಿದ್ದಾಳೆ ನವ ವಧು ಗೋಲ್ಡಿ.
80 ಕಿ.ಮೀ ದೂರವನ್ನು ನಡಿಗೆಯಲ್ಲೆ ನಡೆದು ಗಂಡನ ಮನೆಗೆ ತೆರಳಿದ ಈಕೆಯ ಧೈರ್ಯಕ್ಕೆ ಊರವರು ಮೆಚ್ಚುಗೆಯ ಮೇಲೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.