‘ಅಮುಲ್’ ಜೊತೆ ‘ನಂದಿನಿ’ ವಿಲೀನ | ಅಮಿತ್ ಶಾ ಪ್ರಸ್ತಾಪಕ್ಕೆ ಕನ್ನಡಿಗರಿಂದ ಭಾರೀ ಆಕ್ರೋಶ!
ಕರ್ನಾಟಕ ಹಾಲು ಒಕ್ಕೂಟವು (KMF) ‘ನಂದಿನಿ’ ಹೆಸರಿನಲ್ಲಿ ವ್ಯಾಪಾರ ಮಾಡುವ ಎಲ್ಲಾ ಹಾಲಿನ ಉತ್ಪನ್ನಗಳು ಇಡೀ ಭಾರತದಲ್ಲಿಯೇ ತನ್ನ ಗುಣಮಟ್ಟದಿಂದ ಪ್ರಸಿದ್ಧಿಯನ್ನು ಪಡೆದಿವೆ. ಕರ್ನಾಟಕ ಹಾಲು ಒಕ್ಕೂಟ ಎಂದರೆ ಹಾಗೆಂದರೇನು? ಅದೆಲ್ಲಿದೆ? ಎಂದು ಪ್ರಶ್ನೆ ಮಾಡುವ ಕೆಲವರು ‘ನಂದಿನಿ’ ಎಂದ ತಕ್ಷಣ ಹೋ ಇದು ನಮ್ಮ ಕರ್ನಾಟಕದ್ದೇ, ನಮ್ಮದೇ ಬ್ರ್ಯಾಂಡ್ ಎಂದು ಹೇಳುತ್ತಾರೆ. ಯಾಕೆಂದರೆ ನಂದಿನಿ ಎಂಬ ಹೆಸರಿನಲ್ಲಿ ವ್ಯಾಪಾರವಾಗುವ ಎಲ್ಲಾ ಹಾಲು ಉತ್ಪನ್ನಗಳಿಗೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಅಷ್ಟು ಬೇಡಿಕೆ ಇದೆ. ಆದರೆ ಇದೀಗ ಈ ನಂದಿನಿ ಬ್ರ್ಯಾಂಡ್ ಅನ್ನು ಗುಜರಾತಿನ ಹಾಲು ಒಕ್ಕೂಟವಾದ ಅಮುಲ್ ಜೊತೆ ವಿಲೀನ ಮಾಡುವ ವಿಚಾರವನ್ನು ಅಮಿತ್ ಶಾ ಪ್ರಸ್ಥಾಪಿಸಿದ್ದು, ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು!! ಇತ್ತೀಚೆಗಷ್ಟೆ ಚುನಾವಣಾ ಪ್ರಚಾರದ ಸಲುವಾಗಿ ಮಂಡ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೈರಿಗೆ ಚಾಲನೆ ನೀಡಿ ಅಮುಲ್ ಮತ್ತು ನಂದಿನಿಯನ್ನು ವಿಲೀನಗೊಳಿಸುವ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.
ಇತ್ತೀಚೆಗಷ್ಟೆ ಚುನಾವಣಾ ಪ್ರಚಾರದ ಸಲುವಾಗಿ ಮಂಡ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೈರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ‘ಕರ್ನಾಟಕ ಮತ್ತು ಗುಜರಾತಿನ ಹಾಲು ಒಕ್ಕೂಟಗಳು ಆರಂಭದಿಂದಲೂ ಪ್ರಗತಿಯ ಹಾದಿಯಲ್ಲಿದ್ದು, ಅಭಿವೃದ್ಧಿಯನ್ನು ಹೊಂದುತ್ತಿವೆ. ಈ ಹಿನ್ನೆಲೆಯಲ್ಲಿ ಅಮುಲ್ ಮತ್ತು ನಂದಿನಿಯನ್ನು ವಿಲೀನಗೊಳಿಸಿದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಹೇಳಿದರು.
ಅಮಿತ್ ಶಾ ಅವರ ಹೇಳಿಕೆಗೆ ಎಲ್ಲೆಡೆ ತೀವ್ರವಾದ ವಿರೋಧ ವ್ಯಕ್ತವಾಗುತ್ತಿದ್ದು, ದಯವಿಟ್ಟು ನಮ್ಮ ಕರ್ನಾಟಕದ ನಂದಿನಿ ಬ್ರ್ಯಾಂಡ್ ವಿಷಯಕ್ಕೆ ಬರಬೇಡಿ, ಅದರಿಂದ ದೂರವಿರಿ. ನಂದಿನಿ ಎಂಬುದು ಕೇವಲ ಹೆಸರಲ್ಲ ಅದು ಕರ್ನಾಟಕದ ಹೆಗ್ಗುರುತು, ಇಂದು ನಂದಿನಿ ಪ್ರತಿ ಹಳ್ಳಿ ಹಳ್ಳಿಗೆ ತಲುಪಿದೆ, ನಂದಿನಿ ಈಗಾಗಲೇ ಅಭಿವೃದ್ದಿಯ ತುತ್ತ ತುದಿಯನ್ನು ತಲುಪಿಯಾಗಿದೆ, ಅದು ಯಾರ ಸಹಾಯದಿಂದಲೂ ಅಭಿವೃದ್ಧಿಯಾಗುವ ಅಗತ್ಯವಿಲ್ಲ ಎಂಬಂತಹ ಅನೇಕ ಮನವಿಗಳು ಕೂಡ ಕೇಳಿಬರುತ್ತಿವೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಟ್ವೀಟ್ ಮಾಡಿ ‘ಕರ್ನಾಟಕದ ಪ್ರತೀ ಹಳ್ಳಿ ಹಳ್ಳಿಗಳಲ್ಲಿಯೂ ನಂದಿನಿ ಇರುವುದು ನಿಮಗೆ ತಿಳಿದಿಲ್ಲವೆ, ರಾಷ್ಟ್ರ ಆಳುವ ನಿಮಗೆ ಮತ್ತಿನ್ನೇನು ತಿಳಿದಿದೆ? ಮೊದಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರಗಳ ಹಳ್ಳಿಗಳಲ್ಲಿ ಉತ್ತಮ ಡೈರಿಗಳನ್ನು ಸ್ಥಾಪಿಸಿ. ನಂತರ ನಂದಿನಿ ಬಗ್ಗೆ ಚಿಂತಿಸಿ. ನಂದಿನಿ ಮತ್ತು ಅಮುಲ್ ಗಳನ್ನು ಕೂಡ ರಿಲಯನ್ಸ್ ಆದಾನಿಗೆ ಮಾರುವ ಹುನ್ನಾರವೇ?’ ಎಂದು ಖಾರವಾಗಿಯೇ ಹೇಳಿದೆ. ಇನ್ನು ಕಾಂಗ್ರೆಸ್ ನಾಯಕಿ ಲಾವಣ್ಯ ಎಂಬುವರು ಟ್ವೀಟ್ ಮಾಡಿ ‘ಅಮುಲ್ ಅನ್ನು ಸ್ಥಾಪನೆ ಮಾಡಿದ ಡಾ. ಕುರಿಯನ್ ಅವರನ್ನು ಹೊರದಬ್ಬಿದ ಗುಜರಾತಿಗಳು ಇದೀಗ ನಂದಿನಿಯನ್ನು ಮಾರಾಟ ಮಾಡಲು ಬಂದಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಇದೇ ರೀತಿ ಹತ್ತು ಹಲವು ಟ್ವೀಟ್ ಮಾಡಿ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಕೋಟಿ ಆದಾಯ ಗಳಿಸುವ ಕೆ ಎಂ ಎಫ್ ಸಂಸ್ಥೆಯಲ್ಲಿ ನಂದಿನಿ ಬ್ರಾಂಡ್ ಮೂಲಕ ಸಂಸ್ಕರಿಸಿದ ಹಾಲು, ಮೊಸರು, ಪೇಡಾ, ಪನ್ನೀರ್, ಮೈಸೂರ್ ಪಾಕ್, ಬರ್ಫಿ, ಸುವಾಸಿತ ಹಾಲು, ಐಸ್ ಕ್ರೀಮ್,ಹಾಲಿನ ಪುಡಿ ಮತ್ತು ಹಾಲಿನ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳಿಗೆ ಭಾರತದ್ಯಂತ ಭಾರಿ ಬೇಡಿಕೆ ಇದೆ. ಭಾರತದಲ್ಲಿರುವ ಡೈರಿ ಸಹಕಾರ ಸಂಘಗಳಲ್ಲಿ ಇದು ಎರಡನೇ ದೊಡ್ಡ ಡೈರಿ ಸಹಕಾರಿಯಾಗಿದೆ. ದಕ್ಷಿಣ ಭಾರತದಲ್ಲಿ ಇದು ಸಂಗ್ರಹಣೆ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಸರ್ಕಾರದ ಸಹಕಾರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಲಕ್ಷಾಂತರ ಹಾಲು ಉತ್ಪಾದಕ ರೈತರಿಗೆ ಜೀವನದ ಆಧಾರವಾಗಿದೆ.