ದಿನವಿಡೀ ಉಪವಾಸವಿದ್ದು ಇಫ್ತಾರ್ ಸಿದ್ದತೆಯಲ್ಲಿದ್ದಾಗ ಹುತಾತ್ಮರಾದ ಬಿ.ಎಸ್.ಎಫ್. ಯೋಧರು
ಶ್ರೀನಗರ: ಪವಿತ್ರ ರಂಝಾನ್ ಉಪವಾಸ ತೊರೆಯುವುದಕ್ಕಾಗಿ ಬ್ರೆಡ್ ಖರೀದಿಸಲು ಬೇಕರಿಯೊಂದಕ್ಕೆ ತೆರಳಿದ್ದಾಗ ಬೈಕ್ ನಲ್ಲಿ ಬಂದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದಾರೆ.
ಯೋಧರನ್ನು ಝಿಯವುಲ್ ಹಕ್ ಮತ್ತು ರಾಣಾ ಮೊಂಡಲ್ ಎಂದು ಗುರುತಿಸಲಾಗಿದೆ.
ಕಳೆದ ಬುಧವಾರ ಸಂಜೆ ಘಟನೆ ನಡೆದಿದೆ. ಶ್ರೀನಗರದ ಹೊರವಲಯದಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾದ ಮತ್ತೊಂದು ಸಂಘಟನೆಯಾದ ದ ರೆಸಿಸ್ಟಂಟ್ ಫ್ರಂಟ್ ಹೊತ್ತುಕೊಂಡಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನವರಾದ ಹಕ್ (34) ಮತ್ತು ಮೊಂಡಾಲ್ (29) ಇಬ್ಬರ ತಲೆಗೆ ದಾಳಿಯಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ಯೋಧರ ಹುಟ್ಟೂರು ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಪರಿಣಾಮ ಹೆಚ್ಚಿರುವುದರಿಂದ ಇಬ್ಬರು ಯೋಧರ ಮೃತದೇಹಗಳನ್ನು ಮನೆಗಳಿಗೆ ಕಳುಹಿಸಲು ಸಾಧ್ಯವಾಗಲಿಲ್ಲ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಸ್ನೇಹಿತರಾಗಿದ್ದ ಈ ಇಬ್ಬರು ಯೋಧರನ್ನು ಬಿಎಸ್ ಎಫ್ ನ 37ನೆ ಬೆಟಾಲಿಯನಲ್ಲಿ ಪಂದಚ್ ಕ್ಯಾಂಪ್ ಗೆ ನಿಯೋಜಿಸಲಾಗಿತ್ತು.
ಇಡೀ ದಿನ ಉಪವಾಸವಿದ್ದು ಒಂದು ಹನಿ ನೀರು ಕುಡಿಯದೆ ಅವರು ದೇಶಕ್ಕಾಗಿ ಕೊನೆಯುಸಿರೆಳೆದರು ಎಂದು ಬಿಎಸ್ ಎಫ್ ನ ಅಧಿಕಾರಿಗಳು ಹಾಗು ಸಹೋದ್ಯೋಗಿಗಳು ದುಃಖ ವ್ಯಕ್ತಪಡಿಸುತ್ತಾರೆ.
2009ರಲ್ಲಿ ಬಿಎಸ್ ಎಫ್ ಸೇರಿದ ಹಕ್ ಅವರಿಗೆ ತಂದೆ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅದರಲ್ಲಿ ಒಬ್ಬ ಪುತ್ರಿಗೆ 4 ವರ್ಷವಾಗಿದ್ದರೆ, ಮತ್ತೊಬ್ಬ ಪುತ್ರಿಗೆ 6 ತಿಂಗಳು. ರಾಣಾ ಮೊಂಡಾಲ್ ಕೂಡ ಹೆತ್ತವರು, ಪತ್ನಿ ಮತ್ತು 6 ತಿಂಗಳ ಪುತ್ರಿಯನ್ನು ಅಗಲಿದ್ದಾರೆ.