ಬೇವಿನ ಎಲೆಗಳ ಉಪಯೋಗವೇನು? ಇಲ್ಲಿದೆ ಕಂಪ್ಲೀಟ್ ವಿವರ!
ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಎದ್ದು ಬೇವಿನ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರವುದಿಲ್ಲ ಎಂಬುದು ಹಿರಿಯರ ಮಾತು. ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು ಎಂದರೆ ತಪ್ಪಾಗಲಾರದು. ಇಷ್ಟೊಂದು ಪವರ್ ಫುಲ್ ಆಗಿರುವ ಬೇವಿನ ಎಲೆಯು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಚರ್ಮದಲ್ಲಿ ಉಂಟಾಗುವ ಚರ್ಮದ ಗುಳ್ಳೆಗಳಿಂದ ಹಿಡಿದು ದೊಡ್ಡವರಿಗೆ ತಲೆ ಕೂದಲು ಉದುರುವ ಮತ್ತು ಗಂಟಲು ನೋವಿನ ಸಮಸ್ಯೆಯವರೆಗೆ ಇದರ ಪ್ರಯೋಜನ ಉಂಟು. ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ಕಲೆ ಹಾಕೋಣ ಬನ್ನಿ….
ಬೇವಿನ ಎಲೆಯಲ್ಲಿ ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಪ್ರಮಾಣವು ತುಂಬಾ ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಇದಕ್ಕಿದೆ.
ಸಕ್ಕರೆ ಕಾಯಿಲೆ:- ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲಿ ಬೇವಿನ ಎಲೆಗಳ ಪಾತ್ರ ಮಹತ್ವವಾದದ್ದು. ಸಕ್ಕರೆ ಕಾಯಿಲೆ ಇರುವವರಿಗೆ ನೈಸರ್ಗಿಕ ಪರಿಹಾರವಾಗಿ ಇವುಗಳು ಕೆಲಸ ಮಾಡುತ್ತವೆ. ಇದಕ್ಕಾಗಿ ಒಂದು ಟೇಬಲ್ ಚಮಚ ಹಸಿ ಬೇವಿನ ಎಲೆಗಳ ರಸ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಬೇಕು. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಉತ್ತಮ.
ಮುಟ್ಟಿನ ಸಮಸ್ಯೆ:- ಬೇವಿನ ಎಲೆಗಳು ದೇಹದ ದುರ್ವಾಸನೆಯನ್ನು ದೂರ ಇರಿಸುತ್ತವೆ. ಇದಕ್ಕಾಗಿ ಕೆಲವು ಬೇವಿನ ಎಲೆ ಗಳನ್ನು ಒಂದು ಬಕೆಟ್ ಉಗುರು ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆ ಹಾಕಿ ಅದರಿಂದ ಸ್ನಾನ ಮಾಡುವುದರಿಂದ ಅದ್ಭುತ ಪರಿಹಾರ ಒದಗಿಸುತ್ತವೆ. ದೇಹದ ದುರ್ವಾಸನೆ ಜೊತೆಗೆ ಸೋಂಕುಗಳನ್ನು ಸಹ ಇದು ಹೋಗಲಾಡಿಸುತ್ತದೆ.
ತಲೆಹೊಟ್ಟು:- ಬೇವಿನ ಎಲೆಗಳು ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತವೆ. ಕೆಲವು ಹಚ್ಚಹಸಿರಾದ ಬೇವಿನ ಎಲೆಗಳನ್ನು ತೆಗೆದುಕೊಂಡು ತೆಂಗಿನ ಎಣ್ಣೆಯಲ್ಲಿ ನುಣ್ಣಗೆ ರುಬ್ಬಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ತಲೆಗೆ ಹಚ್ಚಿಕೊಂಡು 15 ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಆನಂತರ ತಲೆ ಸ್ವಚ್ಛ ಮಾಡಿಕೊಳ್ಳುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ ಮತ್ತು ತಲೆ ಕೂದಲು ಉದುರುವ ಸಾಧ್ಯತೆ ಕೂಡ ತಪ್ಪುತ್ತದೆ.
ಫಂಗಸ್:- ಬೇವಿನ ಎಲೆಗಳು ಫಂಗಸ್ ಸಮಸ್ಯೆಗೆ ರಾಮಬಾಣವೆಂದೆ ಹೇಳಬಹುದು. ಬೇವಿನ ಎಲೆಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಶ್ರೀಗಂಧದ ಪುಡಿ ಮತ್ತು ರೋಜ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ನಿಮ್ಮ ತಲೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ನೆತ್ತಿಯ ಭಾಗದಲ್ಲಿ ಕಂಡುಬರುವ ಫಂಗಲ್ ಸೋಂಕು ದೂರವಾಗುತ್ತದೆ ಮತ್ತು ಚರ್ಮದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.
ಕೆಮ್ಮಿನ ಸಮಸ್ಯೆ:- ಒಂದು ಲೋಟ ನೀರಿನಲ್ಲಿ ಮೂರು ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಆನಂತರ ತಣ್ಣಗೆ ಮಾಡಿ. ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಗಂಟಲು ನೋವಿನ ಪರಿಹಾರಕ್ಕಾಗಿ ಬಾಯಿ ಮುಕ್ಕಳಿಸಬಹುದಾಗಿದೆ. ಪ್ರತಿದಿನ ಹೀಗೆ ಮಾಡುತ್ತ ಬಂದರೆ ಕೆಮ್ಮು ಮತ್ತು ಗಂಟಲು ನೋವು ವಾಸಿ ಆಗುತ್ತದೆ.