ರೂಪೇಶ್ ರಾಜಣ್ಣ ಮತ್ತೆ ಬಕ್ರಾ ಆದ್ರು | ಈ ಪಾಡು ಯಾರಿಗೂ ಬೇಡ!!!
ಕನ್ನಡದ ಮನರಂಜನೆಯನ್ನು ಉಣಬಡಿಸುವ ರಿಯಾಲಿಟಿ ಶೋನಲ್ಲಿ ಜನಪ್ರಿಯವಾಗಿರುವ ಬಿಗ್ ಬಾಸ್ ಮನೆಯಲ್ಲಿ ತಮಾಷೆ, ಜಗಳ , ಲವ್ ಕಹಾನಿ ನಡೆಯುವುದು ಸಾಮಾನ್ಯ. ಪ್ರತಿ ದಿನ ಒಂದಲ್ಲ ಒಂದು ಕಾಮಿಡಿ ವಿಚಾರಗಳು ನಡೆಯುತ್ತಲೆ ಇರುತ್ತವೆ. ಒಬ್ಬರನೊಬ್ಬರು ಕಾಲೆಳೆಯುವ ಪ್ರಸಂಗಗಳು ಕೂಡ ಸಹಜವಾಗಿ ನಡೆಯುತ್ತಿರುತ್ತದೆ.
ಹಾ!! ಅಂದ ಹಾಗೇ ಈ ವಾರದ ಹೊಸ ವಿಚಾರ ನಿಮಗೂ ನಗೆ ತರಸದೆ ಇರಲಿಕ್ಕೆ ಸಾಧ್ಯವೇ ಇಲ್ಲ!! .
ಹೌದು..ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣರವರ ಪಾಡು ಪಾಪ ಯಾರಿಗೂ ಬೇಡ ಎಂದೆನಿಸುತ್ತದೆ.ರೂಪೇಶ ರಾಜಣ್ಣ (Roopesh Rajanna) ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೆಲ ವಾರಗಳ ಹಿಂದೆ ರೂಪೇಶ್ ರಾಜಣ್ಣ ಅವರನ್ನು ಸಾನ್ಯ ಐಯ್ಯರ್ ಮಾತಿಗೆ ಬಕ್ರಾ ಆಗಿ, ಆ ಎಪಿಸೋಡ್ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿ ನಗೆ ಗಡಲಲ್ಲಿ ತೇಲಿಸಿತ್ತು . ಅವರು ಕೆಲವೊಮ್ಮೆ ಮುಗ್ಧರಂತೆ ನಡೆದುಕೊಳ್ಳುವುದು ಅನೇಕರಿಗೆ ಇಷ್ಟವಾಗುತ್ತದೆ. ಈಗ ಬಕ್ರಾ ಪ್ರೋಗ್ರಾಂ ಮತ್ತೆ ಮುಂದುವರಿದಿದ್ದು, ಮತ್ತೊಮ್ಮೆ ರೂಪೇಶ್ ರಾಜಣ್ಣ ಬಕ್ರಾ ಆಗುವ ಮೂಲಕ ಉಳಿದವರಿಗೆ ಮನರಂಜನೆ ನೀಡುತ್ತಿದ್ದಾರೆ..
ಅಷ್ಟಕ್ಕೂ ವಿಷಯ ಏನಪ್ಪಾ ಅಂದರೆ, ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಆಡುವ ವೇಳೆ ರೂಪೇಶ್ ರಾಜಣ್ಣ ಅವರು ಚಿನ್ನದ ಉಂಗುರ ಹಾಗೂ ಬ್ರೆಸ್ಲೆಟ್ ಅನ್ನು ಕಳೆದುಕೊಂಡಿದ್ದಾರೆ. ಇದು ರೂಪೇಶ್ ಶೆಟ್ಟಿಗೆ ಸಿಕ್ಕಿದೆ. ಅಮೂಲ್ಯ ವಸ್ತು ಕಳೆದುಕೊಂಡಿದ್ದರಿಂದ ರೂಪೇಶ್ ರಾಜಣ್ಣ ಅವರಿಗೆ ಬೇಸರವಾಗಿ ಸಾಕಷ್ಟು ತಡಕಾಡಿದ್ದಾರೆ .
ಮನೆಯಲ್ಲಿ ಅವರು ಎಲ್ಲ ಕಡೆಗಳಲ್ಲಿ ಹುಡುಕಿದ್ದು ಎಲ್ಲಿಯೂ ಸಿಗದೇ ಇದ್ದಾಗ ಆತಂಕಗೊಂಡಿದ್ದಾರೆ. ಈ ಸಂದರ್ಭಕ್ಕೆ ಸರಿಯಾಗಿ ರೂಪೇಶ್ ಶೆಟ್ಟಿ ಬಂದು ರೂಪೇಶ್ ರಾಜಣ್ಣ ಕಿವಿಯಲ್ಲಿ ಕೆಲ ಗುಟ್ಟಿನ ವಿಚಾರಗಳನ್ನು ಹೇಳಿದ್ದಾರೆ. ‘ರೂಪೇಶ್ ರಾಜಣ್ಣ ಅವರೇ ಹೀಗೆಲ್ಲ ಮಾಡಿದ್ರೆ ಸಿಗಲ್ಲ. ಬಿಗ್ ಬಾಸ್ ಎಲ್ಲವನ್ನೂ ನೋಡ್ತಾ ಇರ್ತಾರೆ. ಅವರಿಗೆ ಉಂಗುರ ಎಲ್ಲಿದೆ ಅನ್ನೋದು ಗೊತ್ತಿರುತ್ತದೆ. ಅವರ ಬಳಿ ಗಂಭೀರವಾಗಿ ಬೇಡಿಕೊಳ್ಳಲು ಸಲಹೆ ನೀಡಿದ್ದಾರೆ.
ಇವರ ಮಾತನ್ನು ನಂಬಿದಷ್ಟೇ ಅಲ್ಲದೆ, ರೂಪೇಶ್ ರಾಜಣ್ಣ ಅವರು ತುಂಬಾನೇ ಗಂಭೀರವಾಗಿ ಕುಳಿತು, ಕೈ ಮುಗಿದು ಬೇಡಿಕೊಂಡಿದ್ದಾರೆ. ಇಷ್ಟೇ ಏಕೆ!! ಬಿಗ್ ಬಾಸ್ ಅನ್ನು ಖುಷಿಪಡಿಸಲು ಉರುಳುಸೇವೆಯನ್ನು ಸಹ ಮಾಡಿದ್ದರೂ ಕೂಡ ಪ್ರಯೋಜನವಾಗದೆ ಬಿಗ್ ಬಾಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಕೂಡ ಸಿಗಲಿಲ್ಲ.
ಈ ಸಂದರ್ಭ ಬಳಸಿಕೊಂಡ ಆರ್ಯವರ್ಧನ್ ಗುರೂಜಿ ಸಿಕ್ಕಿದ್ದೇ ಚಾನ್ಸ್ ಎಂದು ರೂಪೇಶ್ ರಾಜಣ್ಣ ಅವರನ್ನು ಮಂಗ ಮಾಡಲು ಮುಂದಾಗಿದ್ದಾರೆ. ಅವರು ಕೂಡ ಸೇರಿಕೊಂಡು ತಮ್ಮ ದಿವ್ಯ ಶಕ್ತಿಯಿಂದ ಉಂಗುರ ಹಾಗೂ ಬ್ರೆಸ್ಲೆಟ್ ಎಲ್ಲಿದೆ ಎಂಬುದನ್ನು ಕಂಡು ಹಿಡಿಯುತ್ತೇನೆ ಎಂದು ಹೇಳಿದ ಆರ್ಯವರ್ಧನ್ ಅಡುಗೆ ಮನೆಯಿಂದ ಮೆಣಸಿನ ಕಾಯಿ, ಆಲೂಗಡ್ಡೆ ಮತ್ತಿತರ ತರಕಾರಿ ತಂದು ಮಂತ್ರ ಮಾಡುವ ರೀತಿ ಮಾಡಿದ್ದಾರೆ. ಇದೇ ಸಂದರ್ಭಕ್ಕೆ ಸರಿಯಾಗಿ ರೂಪೇಶ್ ಶೆಟ್ಟಿ ಗಾರ್ಡನ್ ಏರಿಯಾದಲ್ಲಿ ಉಂಗುರ ಹಾಗೂ ಬ್ರೆಸ್ಲೆಟ್ ಅನ್ನು ಅಡಗಿಸಿಟ್ಟು ಬಂದಿದ್ದು , ಗುರೂಜಿ ಅದೇ ಜಾಗವನ್ನು ಸರಿಯಾಗಿ ನೋಡಿ ಆಲೂಗಡ್ಡೆ ಎಸೆದಿದ್ದಾರೆ.
ಗುರೂಜಿ ಅವರ ಅದೃಷ್ಟಕ್ಕೆ ಸರಿಯಾಗಿ ಉಂಗುರ ಹಾಗೂ ಬ್ರೆಸ್ಲೆಟ್ ಇದ್ದ ಜಾಗಕ್ಕೆ ಆಲೂಗಡ್ಡೆ ಹೋಗಿ ನಿಂತಿದ್ದು, ಅಲ್ಲಿ ಹುಡುಕಿ ಎಂದು ಗುರೂಜಿ ಸಲಹೆ ನೀಡಿದ್ದಾರೆ. ಹಾಗೆ ಹೋಗಿ ಹುಡುಕಿದಾಗ ರೂಪೇಶ್ ರಾಜಣ್ಣ ಕಳೆದುಕೊಂಡ ವಸ್ತುಗಳು ಸಿಕ್ಕಿದೆ. ಹಾಗಾಗಿ, ಇದೊಂದು ಪವಾಡ ಎಂದೇ ರೂಪೇಶ್ ರಾಜಣ್ಣ ಭಾವಿಸಿದ್ದು, ಪಾಪ ಇವರ ಮುಗ್ಧತೆ ಉಳಿದವರ ಪಾಲಿಗೆ ಆಟವಾಡಿಸುವ ರೀತಿಯಾಗಿದ್ದು, ಈ ಮೂಲಕ ಮತ್ತೆ ರೂಪೇಶ್ ರಾಜಣ್ಣ ಕುರಿ ಆಗಿದ್ದಾರೆ .