ಸೊಸೆಯಿಂದ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ | ಕಬ್ಬಿಣದ ಪೈಪ್ ನಿಂದ ಮನಸೋ ಇಚ್ಛೆ ಥಳಿಸಿದ ಪಾಪಿ ಸೊಸೆ!!!
ಈ ಹಿಂದೆ ಅತ್ತೆಯ ದಬ್ಬಾಳಿಕೆಗೆ ಬೇಸತ್ತು ಸೊಸೆ ಮನೆ ಬಿಟ್ಟು ಹೋಗುವ ಪ್ರಕರಣಗಳು ಕೇಳಿ ಬರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಅತ್ತೆಗೊಂದು ಕಾಲವಾದರೆ, ಸೊಸೆಗೊಂದು ಕಾಲ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಹೌದು… ಇದಕ್ಕೆ ನಿದರ್ಶನ ಎಂಬಂತೆ ಒಂದು ಘಟನೆ ಮುನ್ನೆಲೆಗೆ ಬಂದಿದೆ.
ಮನೆ ಬಿಟ್ಟು ಹೊಗದ ಅತ್ತೆಯ ಮೇಲೆ ಸೊಸೆ ಕಬ್ಬಿಣ ಪೈಪ್ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಕೆಆರ್ಎಸ್ ಆಗ್ರಹಾರದಲ್ಲಿ ನಡೆದಿದೆ.
ಮೂಲತಃ ಅಮೃತೂರು ಹೋಬಳಿ, ಗಜನಪಾಳ್ಯ ಗ್ರಾಮದ ನಿವಾಸಿ ಯಾಗಿರುವ ಹಾಲಿ ಕುಣಿಗಲ್ ಪಟ್ಟಣದ ಕೆಆರ್ಎಸ್ ಆಗ್ರಹಾರದ ಚಿಕ್ಕತಾಯಮ್ಮ ಎಂಬವರ ಸೊಸೆ ಸೌಮ್ಯ ತನ್ನ ಅತ್ತೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಚಿಕ್ಕತಾಯಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಶಿವಕುಮಾರ್ ಬೆಂಗಳೂರಿನಲ್ಲಿ ವಾಸವಾಗಿದ್ದರೆ, ಮಗದೊಬ್ಬ ಮಗ ಎನ್.ಶಂಕರ್ ಅವರೊಂದಿಗೆ ಚಿಕ್ಕತಾಯಮ್ಮ ಕೆ.ಆರ್.ಎಸ್ ಆಗ್ರಹಾರದ ರೇವಣ್ಣ ಎಂಬುವರ ಮನೆಯಲ್ಲಿ ಕಳೆದ ಒಂದು ವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಎನ್.ಶಂಕರ್ ಅವರ ಪತ್ನಿ ಸೌಮ್ಯಳೊಂದಿಗೆ ವಾಸವಾಗಿದ್ದು, ಈ ಜೋಡಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ. ವಯಸ್ಸಾದಂತೆ ಮಕ್ಕಳಿಗೆ ನಾವು ಬೇಡವಾಗುತ್ತೇವೆ ಎಂದು ಪೋಷಕರು ಸಾಮಾನ್ಯವಾಗಿ ಹೇಳುವ ಮಾತನ್ನು ನಾವು ಕೇಳಿರುತ್ತೇವೆ. ಅಂತೆಯೇ, ಇದಕ್ಕೆ ಸಾಕ್ಷಿ ಎಂಬಂತೆ, ತನ್ನ ತಾಯಿ ಸಮಾನವಾಗಿರುವ ಅತ್ತೆಯನ್ನು ಮನೆಯಿಂದ ಹೊರ ಹಾಕಲು ಸೊಸೆ ಸೌಮ್ಯ ಶತ ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇರುವ ಶಿವಕುಮಾರ್ ಅವರ ಮನೆಗೆ ಹೋಗು ಎಂದು ಸೊಸೆ ಸೌಮ್ಯಳು ತನ್ನ ಅತ್ತೆ ಚಿಕ್ಕತಾಯಮ್ಮನಿಗೆ ಒತ್ತಾಯ ಮಾಡುತ್ತಾ ನಿರಂತರ ಮಾನಸಿಕ ಹಾಗೂ ದೈಹಿಕವಾಗಿ ನೀಡುತ್ತಿದ್ದರು ಎನ್ನಲಾಗಿದ್ದು, ಈ ಸಂಬಂಧ ಹಲವಾರು ಬಾರಿ ಸೌಮ್ಯಳಿಗೆ ಮನೆಯ ಅಕ್ಕಪಕ್ಕದವರು ಬುದ್ದಿವಾದ ಹೇಳಿದ್ದಾರೆ.
ಆದರೂ ಕೂಡ, ಶುಕ್ರವಾರ ಬೆಳಗ್ಗೆ ಚಿಕ್ಕತಾಯಮ್ಮ ಅವರ ಮನೆಯಲ್ಲಿ ಗಲಾಟೆ ನಡೆದಿದ್ದು, ಸೌಮ್ಯ ಅತ್ತೆಗೆ ಹೊಡೆಯುವುದನ್ನು ಸೌಮ್ಯ ಅವರ ಮಕ್ಕಳು ನೋಡಿ ಅಕ್ಕ ಪಕ್ಕದವರಿಗೆ ಅಮ್ಮ ಅಜ್ಜಿಗೆ ಹೊಡೆಯುತ್ತಿದ್ದಾರೆ ಎಂದು ಹೇಳಿ ಅತ್ತಿದ್ದಾರೆ.
ಮನೆಯ ಪಕ್ಕದ ನಾಗೇಂದ್ರ ಹಾಗೂ ಹೆಚ್.ವಿ.ಲಕ್ಷ್ಮಣ್ಗೌಡ ಅವರು ಚಿಕ್ಕತಾಯಮ್ಮ ಅವರ ಮನೆ ಒಳಗೆ ಹೋಗಿ ನೋಡಿದಾಗ ಸೊಸೆ ಸೌಮ್ಯ ಅವರು ಕೈಯಲ್ಲಿ ಅತ್ತೆ ಜುಟ್ಟನ್ನು ಹಿಡಿದು ಎಳೆದಾಡುತ್ತಾ ಕಬ್ಬಿಣದ ಪೈಪ್ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನ್ನು ಗಮನಿಸಿದ್ದಾರೆ. ತೀವ್ರತರಹದ ಗಾಯ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನು ಕೊಲೆ ಮಾಡಿಯೇ ತೀರುತ್ತೇನೆ ಎಂದು ಹೇಳಿರುವುದು ಈ ಸಂದರ್ಭ ವರದಿಯಾಗಿದೆ.
ಎಚ್.ವಿ.ಲಕ್ಷ್ಮಣ್ಗೌಡ ಹಾಗೂ ನಾಗೇಂದ್ರ ಅವರು ಸೌಮ್ಯ ಅವರ ಕೈಯಲ್ಲಿ ಇದ್ದ ಕಬ್ಬಿಣದ ಪೈಪ್ ಅನ್ನು ಕಿತ್ತುಕೊಂಡು ತೀವ್ರವಾಗಿ ಗಾಯಗೊಂಡಿದ ಚಿಕ್ಕತಾಯಮ್ಮ ಅವರನ್ನು ಅಂಬ್ಯೂಲೆನ್ಸ್ನಲ್ಲಿ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಂದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಚಿಕ್ಕತಾಯಮ್ಮನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದ್ದು ಈ ಸಂಬಂಧ ಹೆಚ್.ವಿ.ಲಕ್ಷ್ಮಣಗೌಡ ಕುಣಿಗಲ್ ಠಾಣೆಗೆ ದೂರು ನೀಡಿದ್ದಾರೆ.