Ration Card : ಕರಾವಳಿಯ ಮಂದಿಗೆ ಮರೀಚಿಕೆಯಾಗಿದೆಯೇ ರೇಷನ್ ಕಾರ್ಡ್? ಕಾಯುತ್ತಿದ್ದಾರೆ ಸಾವಿರಗಟ್ಟಲೇ ಜನ!!!

Share the Article

ರಾಜ್ಯ ಸರ್ಕಾರ ಜನರ ಏಳಿಗೆಯ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಆದರೆ, ಕೆಲ ಯೋಜನೆಗಳು ಜಾರಿಗೆ ಬಂದರೂ ಕೂಡ ಫಲಾನುಭವಿಗಳಿಗೆ ಅದರ ಪ್ರಯೋಜನ ತಲುಪುವುದು ಮರೀಚಿಕೆ ಎಂದರೂ ತಪ್ಪಾಗಲಾರದು.

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿಗೆ ಹೊಸ ರೇಷನ್‌ ಕಾರ್ಡ್‌ ಇನ್ನೂ ಲಭ್ಯವಾಗಿಲ್ಲ ಎಂಬುದು ಬೇಸರದ ಸಂಗತಿ.ದ.ಕ.ದಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ 5,978 ಮಂದಿ ಹಾಗೂ ಉಡುಪಿ ಯಲ್ಲಿ 6,612 ಮಂದಿ ಸಹಿತ ಒಟ್ಟು 12,590 ಮಂದಿ ರೇಷನ್‌ ಕಾರ್ಡ್‌ಗಾಗಿ ಕಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಅದರಲ್ಲಿ ಕೆಲವರ ಅರ್ಜಿಗಳನ್ನು ಈಗಾಗಲೇ, ಸರಕಾರ ಕಳೆದ ಡಿಸೆಂಬರ್‌ನಲ್ಲಿ ಅಂಗೀಕರಿಸಿ ಬಳಿಕ ಒಂದೆರಡು ತಿಂಗಳಲ್ಲಿ ಅವರಿಗೆ ಕಾರ್ಡ್‌ ವಿತರಿಸುವ ಕಾರ್ಯವನ್ನು ಆಹಾರ ಇಲಾಖೆ ನಡೆಸಿದೆ. ಈ ಬಳಿಕ ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಸರಬರಾಜು ಮಾತ್ರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ!!!

ಹೊಸ ಪಡಿತರ ಚೀಟಿಯಿಂದಾಗಿ ಸಾಮಾನ್ಯ ಜನತೆ ಮತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ಪತ್ರೆಯಿಂದ ಸರಕಾರಿ ಸೌಲಭ್ಯ ಪಡೆಯಲಾಗದೆ, ಆಧಾರ್‌/ಆರೋಗ್ಯ ಭಾರತ್‌ ಕಾರ್ಡ್‌ ಮಾಡಿಸಲು ಒದ್ದಾಡುವ ಜೊತೆಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಪಡಿತರ ಚೀಟಿ ಅತ್ಯವಶ್ಯವಾಗಿದೆ. ಆದರೆ ಪಡಿತರ ಚೀಟಿ ವಿತರಣೆ ಸಕಾಲದಲ್ಲಿ ಆಗದೇ ಇರುವುದರಿಂದ ಹಲವು ಸರಕಾರಿ ಸವಲತ್ತುಗಳನ್ನು ಪಡೆಯಲು ಕೂಡ ಸಾಧ್ಯವಾಗುತ್ತಿಲ್ಲ.

ಅಕ್ರಮ ಬಿಪಿಎಲ್‌ ಪತ್ತೆ ಹಚ್ಚಲು ಆಹಾರ ಇಲಾಖೆ ಮುಂದಾಗಿರುವ ಕಾರಣ ಹೊಸ ಕಾರ್ಡ್‌ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಮಾಹಿತಿಯಿದ್ದು, ಈ ಮಧ್ಯೆ ತುರ್ತು ಆರೋಗ್ಯ ಸಮಸ್ಯೆ ಇರುವವರಿಗೆ ತುರ್ತಾಗಿ ಕಾರ್ಡ್‌ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಉಳಿದಂತೆ ಅರ್ಜಿ ಹಾಕಿದವರು ಕಾರ್ಡ್‌ ಬರುವ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಸಮಸ್ಯೆಗಳ ಸುಳಿ ಮುಗಿಯುವುದೇ ಇಲ್ಲವೇನೋ ಎನ್ನುವಂತೆ, ಆಹಾರ ಇಲಾಖೆಯ ವೆಬ್‌ಸೈಟ್‌ಗೆ “ಸರ್ವರ್‌’ ಸಮಸ್ಯೆ ಕೂಡ ಹೆಚ್ಚಾಗಿ ಕಾಣಿಸಿಕೊಂಡು ಅಲ್ಲಿಯೂ ಜನರು ಅಲೆದಾಡುವ ತಾಪತ್ರಯ ಸೃಷ್ಟಿಯಾಗಿದೆ.

ಈ ಸಮಸ್ಯೆಗೆ ಪರಿಹಾರ ಎಂದು ಸಿಗುವುದೋ?? ಇನ್ನೂ ತಿಳಿಯದು… ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂಬ ಸೂಚನೆಯಿದ್ದರೂ ಕೆಲವೊಮ್ಮೆ ಈ ವೆಬ್‌ಸೈಟ್‌ ಹಠಾತ್‌ ಸ್ಥಗಿತಗೊಳ್ಳುತ್ತದೆ. ಇದರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು, ತಿದ್ದುಪಡಿ ಮಾಡಲು, ಅಳಿಸಿ ಹಾಕಲು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.

ಪಡಿತರ ಬಾಕಿ ಇರುವ ಸ್ಥಳಗಳ ಮಾಹಿತಿ ನೋಡುವುದಾದರೆ:

ಬೆಳ್ತಂಗಡಿ 940 ಪಡಿತರ ಚೀಟಿ, ಬಂಟ್ವಾಳ 1,333 , ಮಂಗಳೂರು 2,763 ಪುತ್ತೂರು 763, ಸುಳ್ಯ 179 ಒಟ್ಟು 5,978 ಪಡಿತರ ಚೀಟಿ ವಿತರಣೆಯಾಗಲೂ ಬಾಕಿ ಉಳಿದಿದೆ.

ಇದಲ್ಲದೆ, ಕಾರ್ಕಳ 1,028, ಕುಂದಾಪುರ 1,073, ಉಡುಪಿ 1,411, ಕಾಪು 789, ಬ್ರಹ್ಮಾವರ 1,001, ಬೈಂದೂರು 1,041, ಹೆಬ್ರಿ 269 ಒಟ್ಟು 6,612 ಹೊಸ ಪಡಿತರ ಚೀಟಿ ಲಭ್ಯವಾಗದೇ ಬಾಕಿ ಉಳಿದಿದೆ.

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಹಾಕಲು ಅವಕಾಶವಿದ್ದು,. ತುರ್ತು ಆರೋಗ್ಯ ಸೇವೆಗೆ ಅಗತ್ಯವಿದ್ದರೆ ಕೇಂದ್ರ ಕಚೇರಿಯ ಅನುಮತಿ ಪಡೆದು ಕಾರ್ಡ್‌ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.

ಉಳಿದಂತೆ ಬಾಕಿ ಇರುವ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಸರಕಾರದ ಅನುಮತಿ ದೊರೆತ ಬಳಿಕ ಕಾರ್ಡ್‌ ವಿತರಿಸಲಾಗುತ್ತದೆ ಎಂದು ದ.ಕ. ಹಾಗೂ ಉಡುಪಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

Leave A Reply