Pink Tax : ಪಿಂಕ್ ಟ್ಯಾಕ್ಸ್ ಎಂದರೇನು?ಮಹಿಳೆಯರು ಮಾತ್ರ ನೀಡಬೇಕಾದ ಈ ಟ್ಯಾಕ್ಸ್ ಕುರಿತು ಮಹತ್ವದ ಮಾಹಿತಿ!!!

ಸೌಂದರ್ಯದ ವಿಷಯಗಳ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಕಾಳಜಿ, ಅದರಲ್ಲೂ ಕೂಡ ಸುಂದರವಾಗಿ ಕಾಣಬೇಕೆಂದು ಮಾಡುವ ಹರಸಾಹಸಗಳು ಅಷ್ಟಿಷ್ಟಲ್ಲ!! ಅದರಲ್ಲೂ ಮಹಿಳೆಯರ ಮುಕ್ಕಾಲು ಪಾಲು ಖರ್ಚು ಅವರ ಸೌಂದರ್ಯ ವರ್ಧಗಳಿಗೆ ವ್ಯಯವಾಗುತ್ತದೆ ಎಂದರೆ ತಪ್ಪಾಗಲಾರದು.

ಬೆಲೆ ಎಷ್ಟಾದರು ಚಿಂತೆಯಿಲ್ಲ .. ಒಳ್ಳೆ ಲಿಪ್ಸ್ಟಿಕ್ ಬೇಕು ಅನ್ನುವ ಮನೋಭಾವ ಹೆಚ್ಚಿನ ಮಹಿಳೆಯರದ್ದು!! ಬ್ಯೂಟಿಪಾರ್ಲರ್ ಗೆ ಕಾಲಿಟ್ಟಾಗ ಬೇಕಾಬಿಟ್ಟಿ ಸಾವಿರಾರು ರೂಪಾಯಿ ನೀಡುವ ಹುಡುಗಿಯರಿಗೆ ಯಾಕೆ ಇಷ್ಟೆಲ್ಲ ಹಣ ಖರ್ಚು ಮಾಡಬೇಕು ಎಂಬ ಪ್ರಶ್ನೆ ಕೂಡ ಉದ್ಭವಿಸದು.

ಕೆಲವೊಂದು ಟ್ಯಾಕ್ಸ್ ಬಗ್ಗೆ ಅವರು ತಿಳಿದುಕೊಳ್ಳುವ ಗೋಜಿಗೂ ಕೂಡ ಹೋಗೋದಿಲ್ಲ. ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯ ಬಗ್ಗೆ ಎಲ್ಲರಿಗೂ ತಿಳಿದಿರುವಂತದ್ದೇ!!. ಆದರೆ, ಪಿಂಕ್ ಟ್ಯಾಕ್ಸ್ ಹೆಸರು ಕೇಳಿರೋದು ಅಪರೂಪ.

ಪಿಂಕ್ ಟ್ಯಾಕ್ಸ್ ಮಹಿಳೆಗೆ ಸಂಬಂಧಿಸಿದ್ದಾಗಿದ್ದು, ಈ ತೆರಿಗೆಯು ಮಹಿಳೆಯರ ಜೇಬಿಗೆ ಕತ್ತರಿ ಹಾಕುತ್ತದೆ ಎಂಬ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಗುಣಮಟ್ಟದಲ್ಲಿ ರಾಜಿಯಾಗದ ಮಹಿಳೆಯರು ದುಬಾರಿ ಬೆಲೆಗೆ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಆದರೆ, ಯಾಕೆ ಈ ವಸ್ತುವಿಗೆ ಇಷ್ಟೊಂದು ಬೆಲೆ ಎಂಬುದನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ.

ಹಾಗೆ ಈ ವಸ್ತುಗಳಿಗೆ ನಾವು ಪಿಂಕ್ಸ್ ಟ್ಯಾಕ್ಸ್ ಪಾವತಿ ಮಾಡಿದ್ದೇವೆ ಎಂಬುದು ಕೂಡ ಅವರಿಗೆ ತಿಳಿದಿರೋದಿಲ್ಲ.ಪಿಂಕ್ ಟ್ಯಾಕ್ಸ್ ಅನ್ನು ಸರ್ಕಾರ (Govt) ವಿಧಿಸುವುದಿಲ್ಲ ಜೊತೆಗೆ ಸರ್ಕಾರದ ಯಾವುದೇ ತೆರಿಗೆ ಅಡಿಯಲ್ಲಿಯೂ ಕೂಡ ಬರುವುದಿಲ್ಲ . ಬದಲಿಗೆ, ಪಿಂಕ್ ಟ್ಯಾಕ್ಸ್, ಕಂಪನಿಗಳಿಗೆ ಸಂಬಂಧಿಸಿದ್ದಾಗಿದೆ.

ಕಂಪನಿಗಳು ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸ್ ವಿಧಿಸಿ ಈ ಮೂಲಕ ಲಾಭ ಪಡೆಯುತ್ತವೆ. ಈ ಪಿಂಕ್ ಟ್ಯಾಕ್ಸನ್ನು ಮಹಿಳೆಯರು ತಮ್ಮ ಸರಕು ಮತ್ತು ಸೇವೆಗಳಿಗೆ ಪಾವತಿಸಬೇಕಾಗುತ್ತದೆ. ಆದರೆ, ಪಿಂಕ್ ಟ್ಯಾಕ್ಸ್ ಕೇವಲ ಮಹಿಳೆಯರ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅನೇಕ ಬಹುರಾಷ್ಟ್ರೀಯ ಕಂಪನಿ (Company) ಗಳು ಮಹಿಳೆಯರ ಅಗತ್ಯತೆಗಳ ಉತ್ಪನ್ನಗಳ ಮೇಲೆ ತೆರಿಗೆ (Tax) ವಿಧಿಸುತ್ತವೆ.

ಆದರೆ ಪುರುಷರ ಉತ್ಪನ್ನಗಳ ಮೇಲೆ ಈ ತೆರಿಗೆಯನ್ನು ಕಂಪನಿಗಳು ವಿಧಿಸುವುದಿಲ್ಲ. ಕಂಪನಿಗಳು ಮಹಿಳೆಯರ ಸೌಂದರ್ಯ ಉತ್ಪನ್ನ ಗಳಿಗೆ, ಸುಗಂಧ ದ್ರವ್ಯ, ಹೇರ್ ಆಯಿಲ್ (Hair Oil), ಚಪ್ಪಲಿ, ಬ್ಯಾಮ್ ಮತ್ತು ಬಟ್ಟೆ ಸೇರಿದಂತೆ ಅನೇಕ ವಸ್ತುಗಳನ್ನು ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸುತ್ತದೆ. ಮಹಿಳೆಯರಿಗಾಗಿ ವಿನ್ಯಾಸಗೊಳಿಸಿದ ಆ ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸ್ ವಿಧಿಸಲಾಗುತ್ತದೆ.

ಮಹಿಳೆಯರ ವೈಯಕ್ತಿಕ ಆರೈಕೆಗೆ ಸಂಬಂಧಿಸಿದ ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸನ್ನು ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತದೆ. ಮಹಿಳೆಯರ ಉತ್ಪನ್ನಗಳ ಮೇಲೆ ಶೇಕಡಾ 7ರಷ್ಟು ಪಿಂಕ್ ಟ್ಯಾಕ್ಸ್ ವಸೂಲಿ ಮಾಡಲಾಗುತ್ತದೆ.

ಅದೇ ವೈಯಕ್ತಿಕ ಆರೈಕೆ ಉತ್ಪನ್ನಗಳ ವಿಷ್ಯ ಬಂದಾಗ ಇದು ಶೇಕಡಾ 13ರಷ್ಟಿರುತ್ತದೆ. ಉದಾಹರಣೆಗೆ, ಸಲೂನ್‌ (Salon) ಗಳಂತಹ ಅನೇಕ ಸ್ಥಳಗಳಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಶುಲ್ಕ (Fee) ವಿಧಿಸಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಬಾಡಿ ವಾಶ್, ಸೋಪ್, ಕ್ರೀಮ್ ಬೆಲೆಗಳು ದುಬಾರಿಯಾಗಿರುತ್ತದೆ.

ಸಾಮಾನ್ಯವಾಗಿ ಮಹಿಳೆಯರು ಪ್ರೈಸ್ ಸೆನ್ಸಿಟಿವ್ ಆಗಿರದೆ, ಬೆಲೆ ಬಗ್ಗೆ ಹೆಚ್ಚು ಗಮನವಹಿಸದೆ ಸೌಂದರ್ಯ ಉತ್ಪನ್ನ ಗಳಿಗೆ ಇಷ್ಟವಾಗುವ ಉತ್ಪನ್ನಗಳನ್ನು ದುಬಾರಿ ಬೆಲೆಗೆ ಖರೀದಿಸಲು ತಯಾರಾಗಿರುತ್ತಾರೆ. ಮಹಿಳೆಯರು ಬೆಲೆಗೆ ಅಂಟಿಕೊಳ್ಳದ ಕಾರಣ , ಕಂಪನಿಗಳು ಪುರುಷರಿಗಿಂತ ಮಹಿಳೆಯರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿರುತ್ತದೆ.

ಯಾವಾಗಲೂ ಮಹಿಳೆಯರ ಉತ್ಪನ್ನಗಳು ದುಬಾರಿಯಾಗಿರುತ್ತವೆ. ಕಂಪನಿಗಳು ಆರಂಭದಲ್ಲಿಯೇ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿರುತ್ತದೆ. ಮಹಿಳೆಯರ ಉತ್ಪನ್ನದ ಮೇಲೆ ಕಂಪನಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಹೀಗಾಗಿ, ಇನ್ನೂ ಮುಂದೆ ದುಬಾರಿ ಬೆಲೆಯ ಸೌಂದರ್ಯ ಉತ್ಪನ್ನ ಖರೀದಿಸುವಾಗ ಈ ಅಂಶವನ್ನು ಮಹಿಳೆಯರು ಗಮನಿಸುವುದು ಸೂಕ್ತ.

Leave A Reply

Your email address will not be published.