‘ರಾತ್ರಿ ಹೊತ್ತು ಉಗುರು ಕತ್ತರಿಸಬಾರದು’ ಎಂಬ ಮಾತಿನ ಹಿಂದಿರುವ ಕಾರಣ ಏನು ಗೊತ್ತೇ?
ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ದಿನನಿತ್ಯದ ಕಾರ್ಯಗಳನ್ನು ಇಂತಹ ಸಂದರ್ಭದಲ್ಲಿ ಮಾಡಬಾರದು ಎಂಬುದಾಗಿ ಕಟ್ಟುಪಾಡು ಮಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬದವರು ಯಾರೂ ಇಲ್ಲದಿದ್ದರೂ ಕೆಲವೊಂದು ಆಚಾರಗಳನ್ನು ಪಾಲಿಸುವುದರ ಹಿಂದೆ ಕೆಲವೊಂದು ರಹಸ್ಯಗಳಿವೆ ಮತ್ತು ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದೂ ಆಗಿದೆ. ಅದರಲ್ಲಿ ಒಂದು ರಾತ್ರಿ ಹೊತ್ತು ಉಗುರು ಕತ್ತರಿಸುವುದಾಗಿದೆ.
ಪ್ರಾಚೀನ ಕಾಲದಿಂದಲೂ ರಾತ್ರಿ ಉಗುರು ಕತ್ತರಿಸಬಾರದು ಎಂಬ ಪದ್ಧತಿಯೊಂದಿದೆ. ಈಗ್ಲೂ ಅನೇಕರು ಆ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಸ್ವಚ್ಛತೆಗಾಗಿ ಉಗುರು ಕತ್ತರಿಸಿಕೊಳ್ಳಬೇಕು. ಉಗುರುಗಳನ್ನು ಕತ್ತರಿಸುವುದು ಆರೋಗ್ಯಕರ ಅಭ್ಯಾಸ. ಇದು ಉಗುರುಗಳು ಮತ್ತು ಬೆರಳುಗಳ ನಡುವಿನ ಜಾಗದಲ್ಲಿ ಕೊಳಕು ಮತ್ತು ಸೂಕ್ಷ್ಮಜೀವಿಗಳ ಶೇಖರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅನಾರೋಗ್ಯದಿಂದ ನಮ್ಮನ್ನು ದೂರವಿಡುತ್ತದೆ. ಕೆಲವರು ಉಗುರು ಕತ್ತರಿಸಲು ಸಮಯ ಬೇಕಿಲ್ಲವೆನ್ನುತ್ತಾರೆ. ಆದ್ರೆ ಪ್ರಾಚೀನ ಕಾಲದಲ್ಲಿ ರಾತ್ರಿ ಹೊತ್ತು ಉಗುರು ಕತ್ತರಿಸದಿರಲು ಅನೇಕ ಕಾರಣಗಳಿದ್ದವು.
ಆದರೆ, ರಾತ್ರಿ ಹೊತ್ತು ಉಗುರು ಕತ್ತರಿಸದೆ ಇರಲು ಹಲವು ಕಾರಣಗಳಿದೆ. ಅವುಗಳಲ್ಲಿ ಕೆಲವೊಂದನ್ನು ನಾವು ತಿಳಿಸುತ್ತೇವೆ. ಪ್ರಾಚೀನ ಕಾಲದಲ್ಲಿ ವಿದ್ಯುತ್ ಬೆಳಕಿರಲಿಲ್ಲ. ಚಿಮ್ಮಣಿ ದೀಪಗಳಲ್ಲಿ ರಾತ್ರಿ ಕಳೆಯುತ್ತಿದ್ದರು. ವಸ್ತುಗಳು ಸ್ಪಷ್ಟವಾಗಿ ಕಾಣ್ತಿರಲಿಲ್ಲ. ಹಾಗಾಗಿ ಬ್ಲೇಡಿನಂತಹ ಅಪಾಯಕಾರಿ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ನೇಲ್ ಕಟರ್ ಕೂಡ ಅವರ ಬಳಿ ಇರಲಿಲ್ಲ. ಚಾಕು ಅಥವಾ ಕತ್ತಿಯನ್ನು ಉಗುರು ಕತ್ತರಿಸಲು ಅವ್ರು ಬಳಸುತ್ತಿದ್ದರು. ಕತ್ತಲಲ್ಲಿ ಉಗುರಿನ ಬದಲು ಕೈ ಕತ್ತರಿಸಿಕೊಳ್ಳುವ ಅಪಾಯವಿತ್ತು. ಹಾಗಾಗಿ ಅಪಾಯವನ್ನು ತಡೆಯಲು ಈ ರೀತಿಯ ನಂಬಿಕೆ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಅಲ್ಲದೆ, ಆಹಾರಕ್ಕೆ ಸೇರಿ ಹೊಟ್ಟೆಯೊಳಗೆ ಹೋಗುವ ಅಪಾಯವಿತ್ತು. ಇದನ್ನು ಗಮನದಲ್ಲಿಟ್ಟುಕೊಂಡ ಜನರು ರಾತ್ರಿ ಉಗುರು ಕತ್ತರಿಸಬಾರದು ಎಂಬ ನಿಯಮ ಜಾರಿಗೆ ತಂದರು. ಕತ್ತರಿಸಿದ ಉಗುರನ್ನು ಮಾಟ, ಮಂತ್ರಕ್ಕೆ ಬಳಸಲಾಗುತ್ತದೆ ಎಂಬ ಇನ್ನೊಂದು ನಂಬಿಕೆಯಿದೆ. ರಾತ್ರಿ ಕತ್ತರಿಸಿದ ಉಗುರು ಶತ್ರುಗಳ ಕೈಗೆ ಸಿಕ್ಕಿ ಮಾಟ, ಮಂತ್ರಕ್ಕೆ ಬಳಕೆಯಾದ್ರೆ ನಷ್ಟ ನಮಗೆ ಎನ್ನುವ ಕಾರಣಕ್ಕೆ ಪ್ರಾಚೀನ ಕಾಲದ ಜನರು ರಾತ್ರಿ ಉಗುರು ಕತ್ತರಿಸಿಕೊಳ್ಳುತ್ತಿರಲಿಲ್ಲ
ಇದರ ಹಿಂದೆ ಧಾರ್ಮಿಕ ಕಾರಣವೂ ಇರುವಂತಿದೆ. ಸಂಜೆ ಸಮಯದಲ್ಲಿ ಲಕ್ಷ್ಮಿ ಮನೆಗೆ ಪ್ರವೇಶಿಸುತ್ತಾಳೆಂಬ ನಂಬಿಕೆಯಿದೆ. ಸಮೃದ್ಧಿ ಮತ್ತು ಸಂಪತ್ತನ್ನು ನೀಡಲು ರಾತ್ರಿ ಮನೆಯಲ್ಲಿಯೇ ಇರುತ್ತಾಳೆ ಎಂದು ನಂಬಲಾಗಿದೆ. ಉಗುರು ಕತ್ತರಿಸುವುದು ಲಕ್ಷ್ಮಿ ದೇವಿಗೆ ಅಗೌರವ ತೋರಿದಂತೆ. ಹಾಗಾಗಿ ರಾತ್ರಿ ಉಗುರನ್ನು ಕತ್ತರಿಸಬಾರದು. ಹಾಗಿದ್ರೆ ಉಗುರು ಕತ್ತರಿಸುವಾಗ ಗಮನಹರಿಸಬೇಕಾದ ವಿಷಯಗಳನ್ನು ತಿಳಿಯೋಣ ಬನ್ನಿ..
*ಉಗುರನ್ನು ಕತ್ತರಿಸುವಾಗ ಸದಾ ದೊಡ್ಡ ಬೆಳಕಿಗೆ ಆದ್ಯತೆ ನೀಡಿ. ಎಲ್ಲೆಂದರಲ್ಲಿ ಕತ್ತರಿಸಿದ ಉಗುರನ್ನು ಎಸೆಯಬೇಡಿ. ಕತ್ತರಿಸಿದ ಉಗುರನ್ನು ಕಸಕ್ಕೆ ಹಾಕಿ.
*ಉಗುರನ್ನು ಬಾಯಿಂದ ಕಚ್ಚುವುದು, ಬ್ಲೇಡ್ ಅಥವಾ ಕತ್ತರಿಯಿಂದ ಕತ್ತರಿಸದಾಗಲಿ ಮಾಡಬಾರದು. ನೇಲ್ ಕಟರ್ ಬಳಸಿ ಕತ್ತರಿಸಬೇಕು.
*ಉಗುರಿನಲ್ಲಿ ತೇವ ಇರುವಾಗ ಕತ್ತರಿಸಬಾರದು. ಉಗುರಿನಲ್ಲಿ ತೇವವಿದ್ದರೆ ಉಗುರು ಕತ್ತರಿಸುವಾಗ ನೇಲ್ ಕಟರ್ ಜಾರಿದರೆ ಅಂದದ ಶೇಪ್ ಕೊಡಲು ಸಾಧ್ಯವಿಲ್ಲ.
*ಉಗುರನ್ನು ಕತ್ತರಿಸುವಾಗ ತುಂಬಾ ಚಿಕ್ಕದಾಗಿ ಕತ್ತರಿಸುವ ಅಭ್ಯಾಸವಿದ್ದರೆ ಅದನ್ನು ಬಿಡುವುದು ಒಳ್ಳೆಯದು. ಈ ರೀತಿ ಉಗುರು ಕತ್ತರಿಸಿದರೆ ಬೆರಳು ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ ಉಗುರನ್ನು ಕತ್ತರಿಸುವಾಗ ಸ್ವಲ್ಪ ಉದ್ದವಾಗಿ ಬಿಟ್ಟು ಕತ್ತರಿಸುವುದು ಒಳ್ಳೆಯದು. ಈ ರೀತಿ ಕತ್ತರಿಸಿದರೆ ಬೆರಳಿಗೆ ಗಾಯವಾಗುವುದಿಲ್ಲ, ನೋಡಲೂ ಆಕರ್ಷಕವಾಗಿ ಕಾಣುತ್ತದೆ.
*ಉಗುರನ್ನು ಕತ್ತರಿಸಿದ ನಂತರ ನೇಲ್ ಕಟರ್ ನಲ್ಲಿರುವ ಶೇಪರ್ ಬಳಸಿ ಕತ್ತರಿಸಿದ ಭಾಗವನ್ನು ಉಜ್ಜಬೇಕು. ಹೀಗೆ ಉಜ್ಜುವಾಗ ಮೊಟ್ಟೆಯಾಕಾರದಲ್ಲಿ ಉಜ್ಜಿದರೆ ಉಗುರು ಆಕರ್ಷಕವಾದ ಆಕಾರದಲ್ಲಿ ಕಾಣುತ್ತದೆ.