Sinus Infection : ಸೈನಸ್ ತೊಂದರೆಗೆ ಇಲ್ಲಿದೆ ಸೂಪರ್ ಮನೆಮದ್ದು

ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಂದ ಸೈನಸ್ ಸಮಸ್ಯೆಗಳು ಉಂಟಾಗಿ ತಲೆನೋವಿನ ಜೊತೆಗೆ ವ್ಯಕ್ತಿಗೆ ಮೂಗು ಕಟ್ಟಿದ ಅನುಭವವಾಗುತ್ತದೆ. ಒಮ್ಮೆ ತಲೆ ನೋವು ಬಂದರೆ ಎರಡು ಮೂರು ದಿನ ತಲೆ ಎತ್ತಲು ಸಾಧ್ಯವಾಗದಷ್ಟು ನೋವು, ತಲೆಭಾರದಿಂದ ಏನೂ ಕೆಲಸ ಮಾಡಲು ಸಾಧ್ಯವಾಗದೆ,ನಿದ್ರೆ ಮಾಡಲು ಕೂಡ ತೊಂದರೆಯಾಗುತ್ತದೆ.
ಕೆಲವೊಮ್ಮೆ ವಿಪರೀತ ತಲೆನೋವು ಕಾಣಿಸಿಕೊಂಡು ಸ್ವಲ್ಪ ಹೊತ್ತು ಒಂದು ಕಡೆಯಲ್ಲಿ ನೋವಿದ್ದರೆ ಮತ್ತೆ ಸ್ವಲ್ಪ ಸಮಯದ ಬಳಿಕ ತಲೆಯ ಮತ್ತೊಂದು ಬದಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮುಖ ಹಾಗೂ ಹಣೆಯ ಭಾಗದಲ್ಲಿ ತಡೆದುಕೊಳ್ಳಲಾಗದ ಸಿಡಿತವನ್ನು ಕೂಡ ಉಂಟಾಗುತ್ತದೆ.
ಮೊದಲು ಶೀತದಿಂದ ಶುರುವಾಗಿ ನಂತರ ಉಸಿರಾಟದ ಸಮಸ್ಯೆಯು ಹೆಚ್ಚಾಗಲಿದೆ. ಸೈನಸ್ ಸಮಸ್ಯೆಯು ದೀರ್ಘಕಾಲದವರೆಗೆ ಮುಂದುವರಿದರೆ ಆತಂಕಕಾರಿ ಬೆಳವಣಿಗೆಯಾಗಬಹುದು.

ಸೈನಸ್ ಆರಂಭದಲ್ಲಿ ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.

ಬಿಸಿ ಪದಾರ್ಥಗಳನ್ನು ಸೇವಿಸುವ ಮೂಲಕ ಸೈನಸ್ ಚಿಕಿತ್ಸೆ ಪಡೆಯಬಹುದು. ಈ ಸಮಯದಲ್ಲಿ ಬಿಸಿನೀರು, ಕಷಾಯ, ಚಹಾ, ಕಾಫಿ ಅಥವಾ ಸೂಪ್ , ಯಾವುದಾದರು ಬಿಸಿ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು. ಬಿಸಿ-ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಗೂ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುವುದು. ಬಿಸಿ ರುಚಿಯ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಪರಿಹಾರವನ್ನು ಪಡೆಯಬಹುದು. ಸ್ಟೀಮ್ ತೆಗೆದುಕೊಳ್ಳುವುದರಿಂದಲೂ ಸೈನಸ್‌ ನಿಂದ ಪರಿಹಾರ ಪಡೆಯಬಹುದು. ಬೆಳ್ಳುಳ್ಳಿ ದೇಹಕ್ಕೆ ಉಷ್ಣತೆ ನೀಡುತ್ತದೆ. ಇದರ ಬಳಕೆಯಿಂದ ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ನಿಯಮಿತವಾಗಿ 2-3 ಎಸಳು ಬೆಳ್ಳುಳ್ಳಿಯನ್ನು ಹುರಿದು ಜಗಿಯುವುದರಿಂದ ತಲೆನೋವಿಗೆ ಪರಿಹಾರ ಸಿಗುತ್ತದೆ.

ಶುಂಠಿಯು ಕಫ ನಿವಾರಣೆಗೆ ಸಹಕಾರಿಯಾಗಿದ್ದು, ಸೈನಸ್ ಸಮಸ್ಯೆ ಇದ್ದಲ್ಲಿ ಪ್ರತಿದಿನ ಶುಂಠಿ ರಸ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ಕೆಮ್ಮು ಮತ್ತು ಕಫವನ್ನು ಗುಣಪಡಿಸುತ್ತದೆ. ಖಾರ ಅಥವಾ ಮಸಾಲೆಯುಕ್ತ ಆಹಾರ ಸೇವನೆಯಿಂದ ಸೈನಸ್‌ ಸಮಸ್ಯೆ ಶಮನವಾಗುತ್ತದೆ. ಕಾಳು ಮೆಣಸು, ಸಾಸಿವೆ ಇವುಗಳನ್ನು ಆಹಾರ ಪದಾರ್ಥದಲ್ಲಿ ಸೇರಿಸಿ ಪರಿಹಾರ ಪಡೆಯಬಹುದು.

ಪ್ರತಿದಿನ 4-5 ತುಳಸಿ ಎಲೆಗಳನ್ನು ತಿನ್ನುವುದರಿಂದ ಸೈನಸ್ ಸಮಸ್ಯೆ ನಿವಾರಣೆಯಾಗುತ್ತದೆ. ಕಷಾಯದಲ್ಲಿ ತುಳಸಿಯನ್ನು ಕುಡಿಯುವುದು ಸಹ ಪ್ರಯೋಜನಕಾರಿ. ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳು ದೇಹದಿಂದ ಒತ್ತಡವನ್ನು ಬಿಡುಗಡೆ ಮಾಡುತ್ತವೆ. ಈ ವಿಶ್ರಾಂತಿ ತಂತ್ರಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ತಲೆನೋವನ್ನು ನಿವಾರಿಸುತ್ತದೆ. ಉಸಿರಾಟದ ವ್ಯಾಯಾಮಗಳು ಸೈನಸ್ ಮತ್ತು ಉಸಿರಾಟದ ಆರೋಗ್ಯವನ್ನು ಸುಧಾರಿಸುತ್ತದೆ. ಸೈನಸ್ ಸಮಸ್ಯೆ ಇರುವವರು ಉಗುರು ಬೆಚ್ಚಗಿನ ನೀರು ದಿನನಿತ್ಯದಲ್ಲಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Leave A Reply

Your email address will not be published.