ನಮ್ಮ ಸೈನಿಕರಿಗೊಂದು ಸಲಾಂ | ಮೇರಾ ಭಾರತ್ ಮಹಾನ್
ಹಠ ಬಿಡದೆ, ಸುಖ ದುಃಖಗಳ ಲೆಕ್ಕಿಸದೆ, ಹೆತ್ತ ತಂದೆ ತಾಯಿಗಳನ್ನು ಮರೆತು ಭಾರತಮಾತೆಯನ್ನು ತನ್ನ ಹೆತ್ತ ತಾಯಿ ಎಂದು ನೆನೆದು ಸದಾ ಭಾರತಮಾತೆಯ ರಕ್ಷಣೆಗೆ ನಿಲ್ಲುವವನೇ ನಿಜವಾದ ಸೈನಿಕ. ಇವರೆಲ್ಲರನ್ನೂ ಸ್ಮರಿಸುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ.
ನಾವೆಲ್ಲರೂ ಯೋಚಿಸಬೇಕಾದ ನಿಜವಾದ ಸಂಗತಿಯೇನೆಂದರೆ ನಮ್ಮ ರಕ್ಷಣೆಗೋಸ್ಕರ ನಮ್ಮ ದೇಶದ ವೀರ ಯೋಧರು ನಡೆಸುತ್ತಿರುವ ಹರಸಾಹಸ. ಸೈನಿಕರು ತನ್ನೆಲ್ಲಾ ಆಸೆಗಳನ್ನು ಮೂಟೆಕಟ್ಟಿ ದೇಶದ ಜನ ಮತ್ತು ದೇಶಕ್ಕಾಗಿ ಗಡಿಯಲ್ಲಿ ಕಾವಲು ಕಾಯುತ್ತಾರೆ.
ಯಾರಾದರೊಬ್ಬರು ನಮ್ಮನ್ನ ಸಣ್ಣ ಸಮಸ್ಯೆಯಿಂದ ಪಾರು ಮಾಡಿದ್ರು ಸಹ “ಓ! ತುಂಬಾ ಥ್ಯಾಂಕ್ಸ್ ನಿಮ್ಮ ಉಪಕಾರನ ಯಾವತ್ತೂ ಮರೆಯೋಕೆ ಆಗಲ್ಲ” ಅಂತ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾವೆ. ಆದರೆ ಸದಾ ನಮ್ಮನ್ನು ಬಿಸಿಲು ,ಮಳೆ, ಚಳಿ ಏನನ್ನು ಲೆಕ್ಕಿಸದೆ ತನ್ನ ಜೀವನವನ್ನು ಪಣಕ್ಕಿಟ್ಟು ನಮ್ಮನ್ನು ಎಂದೆಂದಿಗೂ ರಕ್ಷಿಸುತ್ತಿರುವ ನಮ್ಮ ದೇಶದ ವೀರ ಯೋಧರಿಗೆ ಒಂದು ಥ್ಯಾಂಕ್ಸ್ ಅಲ್ಲ ಕನಿಷ್ಟಪಕ್ಷ ದಿನದಲ್ಲಿ ಒಂದು ಬಾರಿ ಕೂಡ ಅವರನ್ನು ಸ್ಮರಿಸುವುದಿಲ್ಲ. ಇದು ನಿಜಕ್ಕೂ ವಿಪರ್ಯಾಸ.ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಅದೆಷ್ಟೋ ಮಂದಿ ಸೈನಿಕರು ಇಂದು ತಾಯಿ ಭಾರತಾಂಬೆಯ ಎದೆಯಲ್ಲಿ ಚಿರಂಜೀವಿಯಾಗಿ ಉಳಿದಿದ್ದಾರೆ. ಇನ್ನು ಅದೆಷ್ಟೋ ಮಂದಿ ಸೈನಿಕರು ಹಸನ್ಮುಖಿಯಾಗಿ ತಾಯಿ ಭಾರತಾಂಬೆಯ ರಕ್ಷಣೆಯ ಹಣತೆಗೆ ತೈಲವೆಂಬ ವೀರಯೋಧನಾಗಿ ಅಮರರಾಗಿದ್ದಾರೆ.
ನಮ್ಮ ದೇಶದ ಸೈನಿಕರು ತಮ್ಮ ತಂದೆ-ತಾಯಿ ಕುಟುಂಬವನ್ನು ಮರೆತು ದೇಶರಕ್ಷಣೆಗೆ ಬಂದಿರುತ್ತಾರೆ. ಆ ತಂದೆ ತಾಯಿಯ ಎದೆಯಲ್ಲಿ ಪ್ರತಿಕ್ಷಣ ಒಂದು ಭಯವಿರುತ್ತದೆ ಅದೇನೆಂದರೆ ಸೈನ್ಯಕ್ಕೆ ಹೋದ ತನ್ನ ಮಗ ಸುರಕ್ಷಿತವಾಗಿ ಮನೆಸೇರುತ್ತಾನೆಯೇ? ಎಂದು.
ಒಂದು ವೇಳೆ ಸೈನ್ಯದಲ್ಲಿ ಏನೋ ಒಂದು ದುರಂತ ಸಂಭವಿಸಿ ತನ್ನ ಮಗ ಸುರಕ್ಷಿತವಾಗಿ ಮನೆ ತಲುಪದೆ, ತನ್ನ ಮನೆಯವರನ್ನು ಎಂದೂ ನೋಡಲಾಗದ ಸಂದರ್ಭ ಬಂದಾಗ ಆ ತಂದೆ ತಾಯಿ ಹೆಮ್ಮೆಯಿಂದ ಹೇಳುವುದೇನೆಂದರೆ “ನನ್ನ ಮಗ ದೇಶಕ್ಕಾಗಿ, ದೇಶದ ರಕ್ಷಣೆಗಾಗಿ, ಜನರ ಒಳಿತಿಗಾಗಿ ಪ್ರಾಣತೆತ್ತ” ಎಂದು.ಆ ಮಾತನ್ನು ಕೇಳಿದಾಗಲೇ ಮೈ ರೋಮಾಂಚನವಾಗುತ್ತದೆ.
ಸೈನಿಕರು ಜಾತಿ ಧರ್ಮ ಎಂದು ಭೇದಭಾವಗಳನ್ನು ತೋರದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನಮ್ಮ ದೇಶದ ರಕ್ಷಣೆ ಮಾಡುತ್ತಾರೆ. ಒಂದು ವೇಳೆ ಅವರು ಸಹ ಈ ಸಮಾಜದ ಜನಗಳಂತೆ ಜಾತಿ ಧರ್ಮ ಎಂಬ ಭೇದ ಭಾವಗಳನ್ನು ತೋರಿ ಕಚ್ಚಾಡಿಕೊಳ್ಳುತ್ತಿದ್ದರೆ ಖಂಡಿತವಾಗಿಯೂ ನಮ್ಮ ದೇಶದ ರಕ್ಷಣೆ ಸಾಧ್ಯವಿರುತ್ತಿರಲಿಲ್ಲ.
ನಮ್ಮ ದೇಶ ಸ್ವತಂತ್ರಗೊಂಡು ಸ್ವತಂತ್ರದ ಸವಿಯನ್ನು ನಾವಿಂದು ಅನುಭವಿಸುತ್ತಿದ್ದೇವೆ. ಆದರೆ ನಮ್ಮ ದೇಶದ ಸೈನಿಕರು ದೇಶದ ರಕ್ಷಣೆಯಲ್ಲಿ ತಮ್ಮ ಸ್ವತಂತ್ರವನ್ನು ಕಂಡುಕೊಳ್ಳುತ್ತಿದ್ದಾರೆ.
ಇಂದು ನಾವು ಸುರಕ್ಷಿತವಾಗಿ ಮನೆಯಲ್ಲಿ ಕುಳಿತು ನಮ್ಮ ಬಂಧು ಬಳಗದವರಿಗೆ ಖುಷಿಯಾಗಿದ್ದೇವೆ ಎಂದರೆ ಅದಕ್ಕೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸೈನಿಕರೇ ಕಾರಣ.
ದೇಶದಲ್ಲಿ ನೈಸರ್ಗಿಕ ವಿಕೋಪಗಳ ಆದಾಗ ದೇಶದ ಜನತೆಯ ರಕ್ಷಣೆಗೆ ಮೊದಲು ಬರುವವರು ಸೈನಿಕರೇ. ದೇಶದ ಒಳಿತಿಗಾಗಿ ಇಷ್ಟೆಲ್ಲಾ ಕಷ್ಟಪಡುತ್ತಿರುವ ಸೈನಿಕರಿಗೆ ನಾವೇನು ಮಾಡಿದ್ದೇವೆ? ವರ್ಷದಲ್ಲಿ ಕೇವಲ ಒಂದೆರಡು ದಿನ ಸೈನಿಕರ ಬಗ್ಗೆ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾ ದಲ್ಲಿ ಸ್ಟೇಟಸ್ ಮತ್ತು ಸ್ಟೋರಿಗಳನ್ನು ಹಾಕುತ್ತೇವೆ ಹೊರತು ಬೇರೆ ಏನು ಮಾಡೋದಿಲ್ಲ.
ಇದು ನಿಜಕ್ಕೂ ವಿಷಾದನೀಯ ಸಂಗತಿ. ನಮ್ಮ ದೇಶ ಮತ್ತು ದೇಶದ ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಏಕೆಂದರೆ ನಮ್ಮ ದೇಶದ ಧ್ವಜ ಹಾರಾಡುತ್ತಿರುವುದು ಗಾಳಿಯಿಂದ ಅಲ್ಲ ಅದು ಹಾರಾಡುವುದು ಸೈನಿಕನ ಉಸಿರಿನಿಂದ .
? ಸಂದೀಪ್ ಎಸ್. ಮಂಚಿಕಟ್ಟೆ, ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.