ವೈಜಯಂತೀ ಪಂಚಾಂಗದ ಸಂಪಾದಕ ಯರ್ಮುಂಜ ಶಂಕರ ಜೋಯಿಸ ನಿಧನ

Share the Article

Puttur: ದೃಗ್ಗಣಿತರೀತ್ಯಾ ಪಂಚಾಂಗದ ಕರ್ತೃ, 108 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ ಸಂಪಾದಕ ಯರ್ಮುಂಜ ಶಂಕರ ಜೋಯಿಸ (72 ವ.) ಅವರು ಕೆದಿಲದ ಅಂಗರಜೆಯ ಸ್ವಗೃಹದಲ್ಲಿ ಫೆ. 8ರಂದು ನಿಧನ ಹೊಂದಿದರು.

ಯರ್ಮುಂಜ ಭೀಮ ಜೋಯಿಸರ ಪುತ್ರರಾಗಿರುವ ಶಂಕರ ಜೋಯಿಸರು, ವೈಜಯಂತೀ ಪಂಚಾಂಗದ ಆದ್ಯಪ್ರವರ್ತಕರಾದರು.

ಧರ್ಮಶಾಸ್ತ್ರದಲ್ಲಿಯೂ ಅಪಾರ ಪಾಂಡಿತ್ಯ ಸಂಪಾದಿಸಿದ್ದರು. ಹಲವು ಜ್ಯೋತಿಷ್ಯ ವಿದ್ವತ್ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಗೃಹನಿರ್ಮಾಣಕ್ಕೆ ವಾಸ್ತು ಮಾರ್ಗದರ್ಶನ ನೀಡುತ್ತಿದ್ದರು.

ಇವರಿಗೆ ಬೈಲೂರು ಅನಂತಪದ್ಮನಾಭ ತಂತ್ರಿ ಸಂಸ್ಮರಣಾ ಪ್ರಶಸ್ತಿ (2O18), ಪೋಳ್ಯ ಲ. ವೆಂ. ಮಠ-ತತ್ತ್ವ ಧರ್ಮ ಸಭಾ-ಸನ್ಮಾನ ಪತ್ರ (2019), ಮಿತ್ತೂರು ಸಂಪ್ರತಿಷ್ಠಾನ- ವಿದ್ವತ್ ಪ್ರಶಸ್ತಿ (2019),ಕಿಳಿಂಗಾರು ವಸಿಷ್ಠ ಪ್ರಶಸ್ತಿ 2022 ಮುಂತಾದ ಪ್ರಶಸ್ತಿಗಳು ಒಲಿದು ಬಂದಿದೆ.

ಉಡುಪಿಯ ಪುತ್ತಿಗೆ ಮಠದ ಮುಖ್ಯ ಪ್ರಾಣ ಶ್ರೀಕೃಷ್ಣ ಪಂಚಾಂಗಕ್ಕೆ ಗಣಿತ, ಸುಪ್ರಸಿದ್ಧ ಶಾರದಾ, ಹೊಸದಿಗಂತ, ಬೆಂಗಳೂರು ಮುದ್ರಣಾಲಯ, ಪ್ರಜಾವಾಣಿ ಇತ್ಯಾದಿ ಹತ್ತು ಹಲವು ಕ್ಯಾಲೆಂಡರ್ ಹಾಗೂ ಡೈರಿಗಳಿಗೆ ಸಂಪೂರ್ಣ ಪಂಚಾಂಗ ಮಾಹಿತಿ ನೀಡುತ್ತಿದ್ದರು.

ಮೃತರು ಪತ್ನಿ, ಮಗ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Comments are closed.