Olympics History : ‘ಒಲಿಂಪಿಕ್ಸ್ ಕ್ರೀಡಾಕೂಟ ಹುಟ್ಟಿದ್ದು’ ಹೇಗೆ? ಕ್ರಿ. ಪೂ ದಲ್ಲೇ ‘ಒಲಿಂಪಿಯಾ ಬೆಟ್ಟ’ ದಲ್ಲಿ ಹುಟ್ಟಿಕೊಂಡ ಈ ಕ್ರೀಡೆ ವಿಶ್ವವಿಖ್ಯಾತ ಆಗಿದ್ದು ಹೇಗೆ ?

Share the Article

Olympics History : ಒಲಿಂಪಿಕ್ಸ್ 2024ಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ಯಾರಿಸ್‌ನಲ್ಲಂತೂ ಇದೀಗ ಒಲಿಂಪಿಕ್ಸ್‌ (Olympics 2024) ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಕ್ರೀಡೋತ್ಸವ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಅಖಾಡದಲ್ಲಿ ಸೆಣಸಲು ತೊಡೆ ತಟ್ಟಿ ನಿಂತಿದ್ದಾರೆ. ಒಲಿಂಪಿಕ್ಸ್‌ ವೇದಿಕೆಯಲ್ಲಿ ವಿಶ್ವದ ಅಗ್ರ ಕ್ರೀಡಾಪಟುಗಳು ಒಬ್ಬರನ್ನೊಬ್ಬರು ಸೆಣಸುವುದನ್ನು ಇಡೀ ವಿಶ್ವವೇ ಉಸಿರು ಬಿಗಿಹಿಡಿದು ನೋಡಲು ಕಾತರವಾಗಿದೆ. ಇದೊಂದು ವಿಶ್ವವೇ ಸಂಭ್ರಮಿಸೋ ಆಟಗಳ ಹಬ್ಬ ಎಂದರೆ ತಪ್ಪಾಗಲಾರದು.

ಅಂದಹಾಗೆ ನಾಲ್ಕು ವರ್ಷಗಳಿಗೆ ಬರುವ ಈ ಒಲಂಪಿಕ್ಸ್ ಕ್ರೀಡಾಕೂಟವನ್ನು ಸಂಭ್ರಮಿಸುತ್ತೇವೆ. ಆದರೆ ಇದಕ್ಕೆ ಶತಶತಮಾನಗಳ ಇತಿಹಾಸ ಇದೆ ಎಂಬುದು ಗೊತ್ತಿದೆಯೇ? ಇದರ ಹುಟ್ಟಿನ ಹಿಂದೆ ಪ್ರೀತಿಯ ಗುಟ್ಟಿದೆ ಎಂಬುದನ್ನು ತಿಳಿದಿದ್ದೇವೆಯೇ? ಇಲ್ಲಾ ಅಲ್ವಾ? ಹಾಗಿದ್ರೆ ಬನ್ನಿ ತಿಳಿಯೋಣ ಒಲಂಪಿಕ್ ಹುಟ್ಟಿನ ಕುತೂಹಲದ ರಹಸ್ಯವನ್ನು.

ಕ್ರಿಸ್ತಪೂರ್ವದಲ್ಲಿ ಹುಟ್ಟಿದ ಒಲಿಂಪಿಕ್ಸ್‌ :
ಒಲಿಂಪಿಕ್‌ ಕ್ರೀಡಾಕೂಟದ ಮೂಲ ಗ್ರೀಸ್‌ ದೇಶದ್ದಾಗಿದೆ. ದಂತಕಥೆಗಳ ಪ್ರಕಾರ ಜೀಯಸ್‌ನ ಮಗ ಹರ್ಕ್ಯುಲಸ್‌ (ಹೆರಾಕ್ಲಿಸ್) ಈ ಕ್ರೀಡಾಕೂಟ ಆರಂಭಿಸಿದರು ಎಂದು ಹೇಳಲಾಗಿದೆ. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್‌ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆದ್ದುಕೊಂಡ ಮೊದಲ ಓಟಗಾರ ಒಬ್ಬಬಾಣಸಿಗ. ಎಲಿಸ್ ದ್ವೀಪದ ʻಕೊರೋಬಸ್ʼ ಎಂಬ ಹೆಸರಿನ ಈ ಬಾಣಸಿಗ, ʻಸ್ಟೇಡ್ʼ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ. ಆ ಕಾಲದಲ್ಲಿ ಮೊದಲು ಬಂದವರಿಗಷ್ಟೇ ಮನ್ನಣೆ ಸಿಗುತ್ತಿತ್ತು. ಹಾಗಾಗಿ ಬಹುಮಾನವಾಗಿ ಅವನ ತಲೆಯ ಮೇಲೆ ʻಕೋಟಿನೋಸ್ʼ (ಕಾಡು ಆಲಿವ್‌ ಮರದ ಎಲೆಗಳನ್ನು ಸೇರಿಸಿ ಮಾಡಿದ ವೃತ್ತಾಕಾರದ ಕಿರೀಟ) ಇಟ್ಟು ಗೌರವಿಸಲಾಗುತ್ತಿತ್ತು. ನಂತರ ಮುರ್ನಾಲ್ಕು ಶತಮಾನದವರೆಗೆ ಈ ಕೂಟವನ್ನು ಆಯೋಜನೆ ಮಾಡುತ್ತಾ ಬರಲಾಗಿತ್ತು. ಬಳಿಕ ಕ್ರಮೇಣ ಈ ಕ್ರೀಡಾಕೂಟವನ್ನು ನಿಲ್ಲಿಸಲಾಯಿತು.

ಒಲಿಂಪಿಕ್ಸ್ ಎಂದು ಹೆಸರು ಬರಲು ಕಾರಣವೇನು?
ಕ್ರಿಸ್ತಪೂರ್ವದಲ್ಲಿ ಒಲಿಂಪಿಕ್ಸ್‌ ಕ್ರೀಡೆ ನಡೆಯುತ್ತಿದ್ದದ್ದು ʻಒಲಿಂಪಿಯಾ’ ಎಂಬ ಬೆಟ್ಟದಲ್ಲಿ. ಆ ಕಾಲದಲ್ಲಿ ಇದು ಗ್ರೀಸ್‌ನ ಧಾರ್ಮಿಕ ಕೇಂದ್ರವಾಗಿತ್ತು. ಕ್ರೀಡಾಕೂಟ ಸ್ಥಾಪಕ ಹೆರಾಕ್ಲಿಸ್‌ ಈ ಕ್ರೀಡೋತ್ಸವಕ್ಕಾಗಿ ದೇವತೆ ಅಥೆನಾಳ ನೆರವಿನಲ್ಲಿ ಬೆಟ್ಟದ ಮೇಲೆ ಒಲಿಂಪಿಯಾ ದೇವಾಲಯ ಮತ್ತು ವಿಶಾಲ ಕ್ರೀಡಾಂಗಣ ನಿರ್ಮಿಸಿದ. ಒಲಿಂಪಿಯಾದ ಕ್ರೀಡಾಂಗಣ 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಷ್ಟು ವಿಶಾಲವಾಗಿತ್ತು. ಈ ಪ್ರಾರ್ಥನಾ ಮಂದಿರ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿತ್ತು ಎಂದೂ ಸಹ ಹೇಳಲಾಗಿದೆ. ಈ ಕ್ರೀಡಾಂಗಣದ ಸುತ್ತ ಕ್ರೀಡಾಳುಗಳ ತರಬೇತಿಗಾಗಿ ಭವ್ಯ ಕಟ್ಟಡಗಳಿದ್ದವಂತೆ.

ಆರಂಭದ ಒಲಿಂಪಿಕ್ಸ್‌ನಲ್ಲಿ ʻಸ್ಟೇಡ್‌ʼ ಎಂಬ ಓಟದ ಸ್ಪರ್ಧೆ ಮಾತ್ರ ನಡೆಯಿತು. ಪುರುಷರು ಮತ್ತು ಹುಡುಗರಿಗೆ ಮಾತ್ರ ಮೀಸಲಾಗಿತ್ತು. ಈ ಓಟದ ದೂರವನ್ನು ಸ್ವತಃ ಹರ್ಕ್ಯುಲಸ್ ನಿಗದಿ ಮಾಡಿದ್ದ. ಮುಂದೆ ಪೆಂಟಾಥಾನ್ ಅಂದ್ರೆ ಜಾವೆಲಿನ್ ಎಸೆತ, ದೂರ ನೆಗೆತ, ಡಿಸ್ಕಸ್ ಎಸೆತ, ಓಟ ಮತ್ತು ಕುಸ್ತಿ ಐದು ಸ್ಪರ್ಧೆಗಳು, ಚಾರಿಯಟ್ ರೇಸ್ (ರಥಗಳ ಓಟ) ಮತ್ತು ಮುಷ್ಟಿಯುದ್ಧ ಸ್ಪರ್ಧೆಗಳನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಲಾಗಿತ್ತು.

ಕಣ್ಮರೆಯಾಯ್ತು ಒಲಿಂಪಿಯಾ ಪಟ್ಟಣ:
ಕಾಲಕ್ರಮೇಣ ಗ್ರೀಕ್ ಯುವಕರು ಆಟೋಟಗಳಿಂದ ದೂರವಾದರು. ಕ್ರಿಸ್ತಪೂರ್ವ 146ರ ಸುಮಾರಿಗೆ ರೋಮನ್ನರು ಗ್ರೀಸ್ ದೇಶವನ್ನು ಕಬಳಿಸಿದ ಬಳಿಕ ಒಲಿಂಪಿಕ್ಸ್‌ನ ಸ್ವರೂಪವೇ ಬದಲಾಯಿತು. ಒಲಿಂಪಿಕ್ಸ್ ಜೊತೆ ಸೇರಿದ್ದ ಧಾರ್ಮಿಕ ಸಂಪ್ರದಾಯಗಳು ಕಾಣೆಯಾಗಿ ರೋಮನ್ನರ ವಿಕೃತ ಕ್ರೀಡೆಗಳು ಆರಂಭವಾದವು. ಗ್ಲಾಡಿಯೇಟರ್‌ಗಳು, ಗುಲಾಮರು ಮತ್ತು ಕ್ರೂರ ಪ್ರಾಣಿಗಳ ನಡುವೆ ರಕ್ತಪಾತದ ಕ್ರೀಡೆಗಳು ಸ್ಟೇಡಿಯಮ್‌ಗಳಲ್ಲಿ ನಡೆದವು. ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದ ಥಿಯೋಡೋಸಿಯಸ್ ರೋಮ್‌ನ ಗದ್ದುಗೆ ಏರಿದ. ಬಳಿಕ ಕ್ರಿ.ಶ. 394ರಲ್ಲಿ ಈ ಕ್ರೀಡೆಗಳಿಗೆ ಶಾಶ್ವತ ಬಹಿಷ್ಕಾರ ಹಾಕಿದ. ಅಲ್ಲಿಗೆ ಸುಮಾರು 1,200 ವರ್ಷಗಳ ಇತಿಹಾಸದ ಒಲಿಂಪಿಕ್ಸ್‌ ಪರಿಸಮಾಪ್ತಿಯಾಯಿತು. ಕಾಲಾಂತರದಲ್ಲಿ ಒಲಿಂಪಿಕ್ಸ್ ಬರೀ ನೆನಪಾಗಿ ಉಳಿಯಿತು.

ಮತ್ತೆ ಒಲಂಪಿಕ್ಸ್ ಪ್ರಾರಂಭ:
18ನೇ ಶತಮಾನದ ವೇಳೆಗೆ ಗ್ರೀಸ್ ದೇಶ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯದ ಸಾಮಂತ ರಾಷ್ಟ್ರವಾಗಿತ್ತು. ಒಟ್ಟೋಮನ್‌ಗಳ ವಿರುದ್ಧ ಗ್ರೀಕರು ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಆ ಕಾಲದಲ್ಲಿ ʻಪೆಲೋಪೊನೀಸ್’ ಎಂಬ ದ್ವೀಪದ ನಡುವೆ ಮರಳಿನಲ್ಲಿ ಒಂದು ಪುರಾತನ ಸ್ತಂಭದ ಅವಶೇಷ ಪತ್ತೆಯಾಗಿತ್ತು. ಜರ್ಮನಿಯ ಆರ್ನ್ಸ್ ಕರ್ಟಿಯಸ್ (1814-1896) ಎಂಬ ಪುರಾತತ್ತ್ವ ಶೋಧಕ, ಈ ಸ್ತಂಭದ ಕೆಳಗೆ ಗ್ರೀಸ್‌ನ ಗತಕಾಲದ ಇತಿಹಾಸ ಇರಬೇಕು ಎಂದು ಲೆಕ್ಕ ಹಾಕಿದ್ದ. ಅವನ ಸತತ ಪ್ರಯತ್ನದ ಫಲವಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಒಲಿಂಪಿಯಾ ಪಟ್ಟಣ ಮೇಲೆದ್ದು ಬಂತು. ʻಒಲಿಂಪಿಯಾ’ ಎಂಬ ಜಾಗ ನಿಜಕ್ಕೂ ಇತ್ತು ಎಂದು ತಿಳಿದಾಗ ಜಗತ್ತೇ ಬೆರಗಾಗಿತ್ತು.

ಒಲಿಂಪಿಕ್ಸ್‌ನ ಅವಶೇಷಗಳ ನಡುವೆ ʻಪಾನಥಿನಾಯ್ಯೋಸ್’ ಎಂಬ ಪ್ರಾಚೀನ ಕ್ರೀಡಾಂಗಣ ಬೆಳಕಿಗೆ ಬಂತು. ಇವಾಂಜೆಲೋಸ್ ಜಾಪ್ಪಾಸ್ ಎಂಬ ಧನಿಕ ಗ್ರೀಕ್ ವ್ಯಾಪಾರಿ 1859ರಲ್ಲಿ ಈ ಸ್ಟೇಡಿಯಮ್‌ನ ಪುನರುತ್ಥಾನ ಮಾಡಿ, ಅಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಿದ. ಈ ಬಗ್ಗೆ ಐರೋಪ್ಯ ಪತ್ರಿಕೆಗಳು ವರದಿ ಮಾಡಿದ್ದವು. ಈ ಕ್ರೀಡೋತ್ಸವದ ಯಶಸ್ಸಿನಿಂದ ಉತ್ತೇಜಿತನಾದ ಜಾಪ್ಪಾಸ್ 1870 ಮತ್ತು 1875ರಲ್ಲಿ ಒಲಿಂಪಿಕ್ಸ್‌ನಲ್ಲಿ ಇನ್ನೆರಡು ಅಂತಾರಾಷ್ಟ್ರೀಯ ಕ್ರೀಡಾಮೇಳಗಳನ್ನು ನಡೆಸಿದ. ಫ್ರಾನ್ಸ್‌ನ ಗಣ್ಯ ಬ್ಯಾರನ್ ಪಿಯರೆ ಡಿ ಕೂಬರ್ಟಿನ್ ಈ ಸುದ್ದಿಯಿಂದ ಪ್ರೇರಣೆ ಪಡೆದಿದ್ದ. ಯುವಕರ ಮನಸ್ಸನ್ನು ಕ್ರೀಡೆಯತ್ತ ತಿರುಗಿಸಿದರೆ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ, ಜಗತ್ತು ಒಂದುಗೂಡುತ್ತದೆ ಎಂಬುದನ್ನ ಮನಗಂಡ. ಹಾಗಾಗಿ ಕೂಬರ್ಟಿನ್ 1893ರಲ್ಲಿ ಒಂಬತ್ತು ದೇಶಗಳ 79 ಪ್ರತಿನಿಧಿಗಳನ್ನು ಸೇರಿಸಿ ಒಲಿಂಪಿಕ್ಸ್ ಮತ್ತೆ ಆರಂಭಿಸುವ ಬಗ್ಗೆ ತಿಳಿಸಿದ.

ಹೀಗಾಗಿ ಮತ್ತೇ ಈ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು, 1859 ರಲ್ಲಿ. ಇವಾಂಜೆಲಾಸ್ ಝಪ್ಪಾನ್ ಎಂಬುವವರು ಪ್ರಪ್ರಥಮವಾಗಿ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದರು. 1896 ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಾಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾ ಕೂಟವಾಗಿದೆ.


ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿ ಭಾರತ ಭಾಗವಹಿಸಿದ್ದು, 900ರ ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ. ಪ್ಯಾರಿಸ್‌ನಲ್ಲಿ ರಜೆ ಕಳೆಯಲೆಂದು ತೆರಳಿದ್ದ ಆಂಗ್ಲೋ-ಇಂಡಿಯನ್‌ ಅಥ್ಲೀಟ್‌ ನಾರ್ಮನ್‌ ಪಿಚರ್ಡ್‌ ಭಾರತವನ್ನು ಪ್ರತಿನಿಧಿಸಿ 200 ಮೀ. ಓಟ ಮತ್ತು 200 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಬಳಿಕ 1920ರಲ್ಲಿ ಬೆಲ್ಜಿಯಂನ ಎಂಟ್‌ವರ್ಪ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಭಾರತದ ಇಬ್ಬರು ಹಾಗೂ 1924ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎಂಟು ಮಂದಿಯ ತಂಡ ಭಾಗವಹಿಸಿತ್ತು. 1928ರಲ್ಲಿ ನೆದರ್ಲೆಂಡ್‌ನ ಆಮ್‌ಸ್ಟರ್‌ಡಂ ಒಲಿಂಪಿಕ್‌ ಕ್ರೀಡಾಕೂಟ ನಡೆಯುವ ವೇಳೆ ಭಾರತೀಯ ಒಲಿಂಪಿಕ್‌ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಆಗ ಭಾರತದ ಅಧಿಕೃತ ಕ್ರೀಡಾತಂಡ ಪ್ರತಿನಿಧಿಸಿ ಮೊದಲ ಬಾರಿ ಗೆದ್ದು ಚಿನ್ನ (ಹಾಕಿ) ತಂದಿತ್ತು.

ಒಲಂಪಿಕ್ ಚಿಹ್ನೆ:
ಬಿಳಿಬಣ್ಣದ ಒಲಿಂಪಿಕ್‌ ಧ್ವಜದಲ್ಲಿ ಐದು ವರ್ತುಲಗಳು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಐದು ವರ್ತುಲಗಳು ಕೆಂಪು, ನೀಲಿ, ಹಸಿರು, ಹಳದಿ ಹಾಗೂ ಕಪ್ಪು ವರ್ಣಗಳಿಂದ ಕೂಡಿರುತ್ತವೆ. ಈ ಐದು ವರ್ತುಲಗಳು ಜಗತ್ತಿನ ಐದು ಜನವಸತಿಯುಳ್ಳ ಭೂಖಂಡ (ಏಷ್ಯಾ, ಆಫ್ರಿಕಾ, ಆಸ್ಪ್ರೇಲಿಯಾ, ಯುರೋಪ್‌ ಮತ್ತು ಅಮೆರಿಕಾ)ಗಳನ್ನು ಪ್ರತಿನಿಧಿಸುತ್ತವೆ (ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ).

Leave A Reply