ಮಡಿಕೇರಿ: ಕಾಂಪೌಡ್ ಕೆಲಸ ಮಾಡುವಾಗ ಕುಸಿದ ಗುಡ್ಡ, 3 ಜನ ಸಾವು, 1 ಗಂಟೆ ಮಣ್ಣಿನಡಿ ಸಿಲುಕಿದ್ದ ನತದೃಷ್ಟರು !
ಮಡಿಕೇರಿಯಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಗುಡ್ಡ ಕುಸಿದ (Hill Collapse) ಪರಿಣಾಮ 3 ಜನ ಕೂಲಿ ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಡಿಕೇರಿ (Madikeri) ನಗರದಲ್ಲಿ ನಡೆದಿದೆ. ಮಡಿಕೇರಿಯ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿವಾಸಿಗಳಾದ ಬಸಪ್ಪ, ನಿಂಗಪ್ಪ ಹಾಗೂ ಆನಂದ ಮೃತ ದುರ್ದೈವಿಗಳು. ಅಲ್ಲಿನ ವ್ಯಕ್ತಿ ಒಬ್ಬರ ಮನೆಯ ಜಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅವರು ಮಣ್ಣು ತೆಗೆಯುತ್ತಿದ್ದ ಸಂದರ್ಭ ಪಕ್ಕದ ಗುಡ್ಡ ಕುಸಿದಿದೆ. ಕೆಲಸ ಮಾಡುತ್ತಿದ್ದ ಐವರ ಪೈಕಿ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಬಿದ್ದಿದ್ದಾರೆ. ಅವರಲ್ಲಿ ಒಬ್ಬ ಕಾರ್ಮಿಕ ಇತರರ ಸಹಾಯದಿಂದ ಮೇಲೆ ಬಂದು ಜೀವ ಉಳಿಸಿಕೊಂಡಿದ್ದರೆ, ಉಳಿದ 3 ಜನ ಮಣ್ಣಿನಡಿ ಸಿಲುಕಿ ಮೇಲೆ ಬರಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಮೂವರು 1 ಗಂಟೆ ಕಾಲ ಮಣ್ಣಿನಡಿ ಸಿಲುಕಿದ್ದರು. ಅವರನ್ನು ರಕ್ಷಿಸಲು ಎಲ್ಲರೂ ನಿರಂತರವಾಗಿ ಶ್ರಮಿಸಿದರು ಎಂದು ಹೇಳಿದರು.
ಘಟನೆ ನಡೆದ ತರುವಾಯ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಶಾಸಕ ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜು ಕೊಡಗು ಎಸ್ಪಿ ರಾಮರಾಜನ್ ಬಂದು ಪರಿಶೀಲನೆ ನಡೆಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.