Apple store theft: ಅಬ್ಬಾಬ್ಬಾ! ಬಾತ್‌ರೂಮ್‌ಗೆ ಸುರಂಗ ಕೊರೆದ ಖದೀಮರು, 4.16 ಕೋಟಿ ಮೌಲ್ಯದ 436 ಐಫೋನ್ ಎಗರಿಸಿ ಬಿಟ್ಟರು!
Apple Store : ಹಿಂದೆಲ್ಲ ಸಿನಿಮಾಗಳನ್ನು ನೋಡಿ ಹಲವಾರು ಮಂದಿ ತಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದುಕೊಳ್ಳುತ್ತಿದ್ದರು. ಅವುಗಳಿಂದ ಉತ್ತೇಜನಗೊಂಡು ಹೊಸ ಜೀವನ ಪ್ರಾರಂರಂಭಿಸುತ್ತಿದ್ದರು. ಅಂತೆಯೇ ಇಂದು ಸಿನಿಮಾಗಳೊಂದಿಗೆ ಸಿರೀಸ್ ಗಳು ಶುರುವಾಗಿವೆ. ಅದರೆ ಅವುಗಳು ಹೆಚ್ಚಾಗಿ ಕ್ರೈಮ್ ವಿಚಾರಗಳು, ಕಳ್ಳತನ ಸುಲಿಗೆಯಂತಹ ಕಥೆಯಾಧಾರಿತವಾದವುಗಳೇ ಆದ್ದರಿಂದ ಜನ ಅಂತಹ ವಿಚಾರಗಳಿಂದಲೇ ಪ್ರೇರಿತರಾಗುತ್ತಿದ್ದಾರೆ. ಅಂತೆಯೇ ಇಲ್ಲೊಂದು ಖತರ್ನಾಕ್ ಕಳ್ಳರ ಐಡಿಯಾ ಕಂಡು ಪೊಲೀಸರೇ ಅಚ್ಚರಿ ಪಟ್ಟಿದ್ದಾರೆ.
ಹೌದು, ಹಾಲಿವುಡ್‌ನ ಪ್ರಖ್ಯಾತ ಚಿತ್ರ ಓಶಿಯನ್ಸ್ ಇಲೆವೆನ್‌ನಿಂದ ಪ್ರೇರಿತರಾದಂತೆ ಕಂಡುಬರುವ ಅಮೆರಿಕದ ಆಪಲ್ ಸ್ಟೋರ್ (Apple Store) ನ ಕಳ್ಳತನದ ಒಂದು ಘಟನೆ ನಿಜಕ್ಕೂ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಯಾಕೆಂದರೆ ಆಪಲ್ ಸ್ಟೋರ್‌ಗೆ ತಾಗಿಕೊಂಡೇ ಸುರಂಗ ಕೊರೆದ ಈ ಖತರ್ನಾಕ್ ಕಳ್ಳರು ಒಂದೆರಡಲ್ಲ ಬರೋಬ್ಬರು 436 ಐಫೋನ್‌ಗಳನ್ನು ಕದ್ದೊಯ್ದಿದ್ದಾರೆ. ಇದರ ಒಟ್ಟು ಮೌಲ್ಯ 4.10 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕುರಿತಾಗಿ ಸೀಟ್ಟಲ್‌ನ ಸುದ್ದಿವಾಹಿನಿ ಕಿಂಗ್-5 ನ್ಯೂಸ್ ವರದಿ ಮಾಡಿದೆ.
ಅಂದಹಾಗೆ ಕಳ್ಳರು ಸಿಯಾಟಲ್ ಕಾಫಿ ಗೇರ್‌ನ ಬಾತ್‌ರೂಮ್‌ಗೆ ಸುರಂಗ ಕೊರೆಯುವ ಮೂಲಕ ಅದಕ್ಕೆ ತಾಕಿಕೊಂಡೇ ಇದ್ದ, ಆಪಲ್ ಸ್ಟೋರ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಕಳ್ಳರು ಆಪಲ್ ಸ್ಟೋರ್‌ನ ಭದ್ರತಾ ವ್ಯವಸ್ಥೆಯನ್ನು ಪಕ್ಕದ ಕಾಫಿ ಶಾಪ್ ಬಳಸಿ ಬೈಪಾಸ್ ಮಾಡಿದ್ದಾರೆ ಮತ್ತು ಸುಮಾರು 500,000 ಅಮೆರಿಕನ್ ಡಾಲರ್ ಅಂದರೆ ಸುಮಾರು 4.10 ಕೋಟಿ ಮೌಲ್ಯದ 436 ಐಫೋನ್‌ಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಆಪಲ್ ಸ್ಟೋರ್‌ನ ಬಾತ್ರೂಮ್‌ನಲ್ಲಿ ಕಳ್ಳರು ಸೃಷ್ಟಿಸಿದ ಸುರಂಗದ ಚಿತ್ರದೊಂದಿಗೆ ಕಾಫಿ ಶಾಪ್‌ನ ಸಿಇಒ-ಮೈಕ್ ಅಟ್ಕಿನ್ಸನ್ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದು “ಇಬ್ಬರು ನಮ್ಮ ರಿಟೇಲ್ ಮಳಿಗೆಗೆ ನುಗ್ಗಿದ್ದರು. ಯಾಕಾಗಿ ಗೊತ್ತೇ, ನಮ್ಮ ಬಾತ್‌ರೂಮ್ ಗೋಡೆಗೆ ಸುರಂಗವನ್ನು ಕೊರೆದು ಆಪಲ್ ಸ್ಟೋರ್‌ಗೆ ನುಗ್ಗಲು. ಇದರಿಂದ ಅವರು 500000 ಯುಎಸ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಕದ್ದಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಕಾಫಿ ಶಾಪ್‌ನ ಪ್ರಾದೇಶಿಕ ರಿಟೇಲ್ ಮ್ಯಾನೇಜರ್ ಆಗಿರುವ ಎರಿಕ್ ಮಾರ್ಕ್ಸ್ ಮಾತನಾಡಿ ಮುಂಜಾನೆ ನನಗೆ ದೂರವಾಣಿ ಕರೆ ಬಂದಿತ್ತು. ಈ ವೇಳೆ ಕಳ್ಳತನದ ವಿಚಾರ ತಿಳಿಸಲಾಗಿತ್ತು. ಈ ಹಂತದಲ್ಲಿ ನನಗೆ ಏನು ಹೇಳಬೇಕು ಅನ್ನೋದೆ ಗೊತ್ತಾಗಲಿಲ್ಲ. ಆಪಲ್ ಸ್ಟೋರ್‌ಗೆ ಪ್ರವೇಶ ಪಡೆಯಲು ಕಳ್ಳಲು ನನ್ನ ಶಾಪ್ ಅನ್ನು ಬಳಸಿದ್ದನ್ನು ಪೊಲೀಸರು ಕೂಡ ಖಚಿತಪಡಿಸಿದ್ದರು. ಇದೇ ವೇಳೆ ನಮ್ಮ ಪಕ್ಕದಲ್ಲಿ ಆಪಲ್ ಸ್ಟೋರ್ ಇತ್ತೇ? ಎನ್ನುವ ಅನುಮಾನವ ಕಾಡಿತ್ತು. ಇದನ್ನೆಲ್ಲಾ ಕಳ್ಳರು ಹೇಗೆ ಮಾಡಲು ಸಾಧ್ಯ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ದುರಸ್ತಿಯನ್ನು ಸರಿಮಾಡಲಾಗುತ್ತಿದ್ದು ಸಿಯಾಟಲ್ ಕಾಫಿ ಗೇರ್ ತಮ್ಮ ಲಾಕ್ ಸಿಸ್ಟಮ್ ಬದಲಿಸಲು ಸುಮಾರು 900 ಯುಎಸ್ ಡಾಲರ್ ಖರ್ಚು ಮಾಡಿದೆ. ಬಾತ್ರೂಮ್ ರಿಪೇರಿಗಾಗಿ 600 ರಿಂದ 800 ಡಾಲರ್ ನಡುವೆ ಖರ್ಚು ಮಾಡಬೇಕಾಗಿದೆ ಎಂದು ತಿಳಿಸಿದೆ. ಪೊಲೀಸರು ಈಗಾಗಲೇ ಅಪರಾಧದ ತನಿಖೆ ನಡೆಸುತ್ತಿದೆ.