Period Leave : ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ ಮಾಡಿದ ಮೊದಲ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಇದು!
Period Leave :ಇತ್ತೀಚೆಗೆ ಮಹಿಳೆಯರ ಮುಟ್ಟಿನ ರಜೆ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಸಾಮರ್ಥ್ಯ, ಏಕಾಗ್ರತೆ ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಕನಿಷ್ಠ ಎರಡು ದಿನವಾದರೂ ರಜೆ ನೀಡಬೇಕು ಎಂದು ಪ್ರಪಂಚದಾದ್ಯಂತ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಈ ವಿಚಾರವಾಗಿ ಕೋರ್ಟ್(Court) ಮೆಟ್ಟಿಲೇರಿದ್ದಾರೆ. ಈ ಇನ್ನೂ ಚರ್ಚೆಗಳು ನಡೆಯುತ್ತಿರುವಾಗಲೆ ಕೇರಳ(Kerala) ಸರ್ಕಾರ ಮುಟ್ಟಿನ ರಜೆ (Period Leave) ನೀಡುವುದಾಗಿ ಘೋಷಿಸಿತ್ತು. ಇದರ ಬೆನ್ನಲೇ ಆನ್‌ಲೈನ್ ಕೌಶಲ್ಯಾಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್ Zupee ಕಂಪೆನಿ ಕೂಡ ಮಹಿಳೆಯರಿಗೆ ಈ ರಜೆಯನ್ನು ನೀಡುವುದಾಗಿ ಘೋಷಣೆ ಮಾಡಿದೆ.
ಹೌದು, ಆನ್‌ಲೈನ್ ಕೌಶಲ್ಯಾಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್ Zupee ಕಂಪೆನಿಯು ತನ್ನ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ನೀಡುವುದಾಗಿ ಘೋಷಿಸಿದ್ದು, ರಜೆಯೊಂದಿಗೆ ಸಂಬಳವನ್ನೂ ನೀಡುತ್ತದೆಯಂತೆ. ಈ ಕಂಪೆನಿಯಲ್ಲಿದ್ದು ಮನೆಯಿಂದ ಅಥವಾ ಕಚೇರಿಯಿಂದ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ಪ್ರತಿ ತಿಂಗಳು ಒಂದು ದಿನವನ್ನು ಮುಟ್ಟಿನ ರಜಾ ದಿನವಾಗಿ ಬಳಸಿಕೊಳ್ಳಬಹುದು.
ಅಂದಹಾಗೆ Zupeeಯು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಅಥವಾ ಪಿರಿಯಡ್ಸ್ ರಜೆಯನ್ನು ಹೊರ ತರುತ್ತಿರುವ ಮೊದಲ ಕೌಶಲ್ಯ ಆಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಕಂಪೆನಿಯು ಈ ನೀತಿಯನ್ನು ಏಪ್ರಿಲ್ 1ರಿಂದ ಜಾರಿಗೆ ತರಲಿದೆ ಎಂದು ತಿಳಿಸಿದೆ. ಹಲವಾರು ಇತರೆ ಸ್ಟಾರ್ಟ್‌ಅಪ್‌ಗಳು ಕೂಡ ಇತ್ತೀಚೆಗೆ ಮಹಿಳಾ ಉದ್ಯೋಗಿಗಳಿಗಾಗಿ ಈ ರೀತಿಯ ಉಪಕ್ರಮವನ್ನು ಪ್ರಾರಂಭಿಸಿವೆ.
ಈ ಕುರಿತು ಮಾತನಾಡಿದ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷೆ ಸುರಭಿ ಸಂಚಿತಾ(Surabhi Sanchita) ಅವರು ‘ಮುಟ್ಟಿನ ಕುರಿತಂತೆ ಸುದೀರ್ಘ ಕಾಲದಿಂದ ಇರುವ ಸ್ಟಿಗ್ನಾವನ್ನು ದೂರ ಮಾಡಿ ಮಹಿಳಾ ಉದ್ಯೋಗಿಗಳಿಗೆ ಆರೋಗ್ಯಕರ ಹಾಗೂ ಆರಾಮದಾಯಕವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸುವುದಕ್ಕೆ ಈ ಹೊಸ ರಜಾ ನೀತಿ ಸಹಕಾರಿಯಾಗಲಿದೆ. Zupee ಈ ರೀತಿಯ ನೀತಿಯನ್ನು ಜಾರಿಗೊಳಿಸುವುದರಿಂದ ಮಹಿಳಾ ಉದ್ಯೋಗಿಗಳ ಆರೋಗ್ಯ ಸುರಕ್ಷತೆಯನ್ನಷ್ಟೇ ಕಾಪಾಡುವುದಲ್ಲ, ಜತೆಗೆ ಮುಟ್ಟಿನ ಕುರಿತಂತೆ ಇರುವ ತಪ್ಪು ಕಲ್ಪನೆಗಳನ್ನು ಕೂಡ ಹೋಗಲಾಡಿಸುವುದಕ್ಕೆ ಜಾಗೃತಿ ಮೂಡಿಸಲಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಕೆಲ ದೇಶಗಳು ಮಹಿಳೆಯರ ಅಹವಾಲು, ಅವರ ಕಷ್ಟವನ್ನು ಅರ್ಥೈಸಿಕೊಂಡು ಮುಟ್ಟಿನ ಅವಧಿಯಲ್ಲಿ ರಜೆಯನ್ನು ಸಹ ಮಂಜೂರು ಮಾಡಿದೆ. ಅಂತಹ ದೇಶಗಳಲ್ಲಿ ಮೊದಲನೇಯದು ಸ್ಪೇನ್. ಹೌದು, ಸ್ಪೇನ್ ತನ್ನ ರಾಷ್ಟ್ರದ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.
ಅಲ್ಲದೆ ಇಲ್ಲಿ 3 ದಿನಗಳ ಕಾಲ ರಜೆ ನೀಡಲಾಗುತ್ತದೆ. EuroNews ನ ವರದಿಯ ಪ್ರಕಾರ, ಸಂತಾನೋತ್ಪತ್ತಿ, ಆರೋಗ್ಯ ಮತ್ತು ಗರ್ಭಪಾತ ಹಕ್ಕುಗಳ ಕುರಿತಾದ ವಿಶಾಲ ಕರಡು ಮಸೂದೆಯ ಭಾಗವಾಗಿ ಸ್ಪ್ಯಾನಿಷ್ ಸರ್ಕಾರವು ಈ ಕ್ರಮವನ್ನು ಅನುಮೋದಿಸಿದೆ. ಎಲ್ ಪೈಸ್ ಪತ್ರಿಕೆಯ ಪ್ರಕಾರ, ಪ್ರಸ್ತಾವಿತ ಕಾನೂನು ಪ್ರತಿ ತಿಂಗಳು ತೀವ್ರ ಮುಟ್ಟಿನ ನೋವಿನಿಂದ ಬಳಲುತ್ತಿರುವ ಮಹಿಳೆಯರಿಗೆ ಕನಿಷ್ಠ ಮೂರು ಅನಾರೋಗ್ಯದ ವಿಶೇಷ ರಜೆಯನ್ನು ನಿಗದಿಪಡಿಸಿದೆ.
ಇದನ್ನೂ ಓದಿ: Eye Glasses : ಕನ್ನಡಕ ಹಾಕುವುದರಿಂದ ಮುಖದ ಮೇಲಾಗುವ ಕಲೆ ಹೋಗಲಾಡಿಸುವುದು ಹೇಗೆ?