Meghalaya’s Whistling Village: ಈ ಊರಲ್ಲಿ ಯಾರನ್ನೂ ಹೆಸರು ಹಿಡಿದು ಕರೆಯೋದಿಲ್ಲ! ಇಲ್ಲಿ ಒಬ್ಬೊಬ್ಬರಿಗೂ ಒಂದೊಂದು ಸಂಗೀತದ ರಾಗ, ಶಿಳ್ಳೆಗಳೇ ಹೆಸರು!

Meghalaya’s Whistling Village:

 

ನಾವು ಯಾರನ್ನಾದರೂ ಗುರುತಿಸೋದಾದರೆ ಅದು ಅವರ ಹೆಸರಿಂದಲೇ. ಎಲ್ಲದಕ್ಕೂ ಹೆಸರೇ ಮುಖ್ಯ. ಕೆಲವರಿಗೆ ಎರಡು ಮೂರು ಹೆಸರುಗಳಿರುತ್ತವೆ. ಮನೆಯಲ್ಲಿ ಕರೆಯಲೆಂದೇ ಒಂದು ಹೆಸರು, ಶಾಲಾ-ಕಾಲೇಜು ದಾಖಲಾತಿಗಳಲ್ಲೊಂದು ಹೆಸರು, ಇನ್ನು ಸ್ನೇಹಿತರು ಇಟ್ಟ ಮತ್ತೊಂದು ಹೆಸರು. ಆದ್ರೆ ನಮಗಾರಿಗೂ ಹೆಸರೇ ಇಲ್ಲದಿದ್ದರೆ ಏನಾಗ್ತಿತ್ತು? ಜನರು ಹೇಗೆಲ್ಲಾ ನಮ್ಮನ್ನು ಕರೀತಿದ್ರು?. ಅರೆ ಇದೆಂತಾ ಪ್ರಶ್ನೆ! ಯಾರಾದ್ರೂ ಹೆಸರಿಲ್ಲದೆ ಇರ್ತಾರಾ? ಇದನ್ನು ಊಹೆ ಮಾಡೋಕೂ ಸಾಧ್ಯವಿಲ್ಲ ಬಿಡಿ ಅಂತ ನೀವನ್ಬೋದು. ಆದರೆ ಹೆಸರೇ ಇಲ್ಲದ ಜನರಿರುವ ಊರೊಂದಿದೆ! ಇದು ನಿಮಗೆ ನಂಬೋಕೆ ಅಸಾಧ್ಯ ಆಗ್ಬೋದು. ಆದ್ರೆ ಸತ್ಯ.

ಹೌದು, ಆ ಒಂದು ಹಳ್ಳಿಯಲ್ಲಿ ವಿಶೇಷತೆಯೊಂದಿದೆ. ಬಹುಶಃ ಅದು ಜಗತ್ತಿನ ಬೇರೆಲ್ಲೂ ಇದ್ದಂತಿಲ್ಲ. ಅದೇನೆಂದರೆ ಅವರಿಗೆ ಹುಟ್ಟಿನಿಂದ ದಾಖಲೆಗಳಲ್ಲಿ ಒಂದು ಹೆಸರು ನಮೂದಾಗಿದ್ದರೂ, ಈ ಗ್ರಾಮದಲ್ಲಿ ಯಾರೂ ಆ ಹೆಸರಿನಲ್ಲಿ ಕರೆಯುವುದೇ ಇಲ್ಲ! ಇಲ್ಲಿ ಜನರು ಒಬ್ಬರನ್ನೊಬ್ಬರು ಕರೆಯುವುದು ಶಿಳ್ಳೆ ಅಥವಾ ವಿಶಿಷ್ಟವಾದ ಸುಮಧುರ ಸಂಗೀತದಿಂದ, ಸ್ವರದಿಂದ. ಇದು ಅಚ್ಚರಿಯಾದರೂ ನಿಜ. ಅಲ್ಲದೆ ಇದು ಬೇರಾವುದೋ ದೇಶದಲ್ಲಿರುವ ಹಳ್ಳಿ ಅಂತ ಭಾವಿಸ್ಬೇಡಿ. ಈ ಹಳ್ಳಿ ಇರೋದು ನಮ್ಮ ಭಾರತದಲ್ಲಿಯೇ! ಭಾರತದ ಈಶಾನ್ಯ ಭಾಗದ ರಾಜ್ಯದ ಈ ವಿಶಿಷ್ಟ ಹಳ್ಳಿಯೇ ‘ಕೊಂಗ್ ಥಾನ್’ ಅಥವಾ ‘ವಿಸ್ಲಿಂಗ್ ವಿಲೇಜ್’ (ಶಿಳ್ಳೆ ಗ್ರಾಮ).

ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 60 ಕಿಮೀ ದೂರದಲ್ಲಿ, ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಜಗತ್ತಿನ ಗಮನ ಸೆಳೆದಿದೆ. ಕೊಂಗ್‌ಥಾಂಗ್ ಎಂಬ ಹಳ್ಳಿಯ ವೈಶಿಷ್ಟ್ಯವೇ ಹೆಸರನ್ನು ಹೇಳದೆ ಸಂಗೀತದ ರಾಗಗಳ ಮೂಲಕ (Meghalaya’s Whistling Village) ಕರೆದುಕೊಳ್ಳುವುದು. ಇಲ್ಲಿ ಮಗು ಹುಟ್ಟಿದ ಬಳಿಕ ತಾಯಂದಿರೇ ತನ್ನ ಮಗುವಿಗಾಗಿ ರಾಗವನ್ನು ಸಂಯೋಜನೆ ಮಾಡುತ್ತಾರಂತೆ. ಅದರ ಆಧಾರದಲ್ಲಿಯೇ ಆ ಮಗು ಬೆಳೆದು ಸಾಯುವವರೆಗೂ ಅದನ್ನು ರಾಗದ ಮೂಲಕವೇ ಕರೆಯಲಾಗುತ್ತದೆಯಂತೆ! ಈಶಾನ್ಯ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುವ ಬಹುತೇಕ ಮಂದಿ ಈ ‘ಶಿಳ್ಳೆ ಗ್ರಾಮ’ಕ್ಕೆ ಕುತೂಹಲಕ್ಕಾಗಿಯಾದರೂ ಭೇಟಿ ನೀಡುತ್ತಾರಂತೆ.

ಮೇಲ್ನೋಟಕ್ಕೆ ನೋಡೋದಾದ್ರೆ, ಮೇಘಾಲಯದ ಸುಮಾರು 700 ಜನರಿರುವ ಈ ಕೊಂಗ್‌ಥಾಂಗ್ ಗ್ರಾಮದಲ್ಲಿ ಜನರಿಗೆ ಹೆಸರು ಇದೆ. ಹೆಸರುಗಳನ್ನು ಇರಿಸುವ ಪದ್ಧತಿ ಕೂಡ ಇದೆ. ಆದರೆ ಇಲ್ಲಿಯೇ ಇರುವುದು ವಿಶೇಷ. ಒಂದು ಹೆಸರು ಸಾಮಾನ್ಯವಾಗಿ ಕರೆಯುವ ಅಥವಾ ದಾಖಲಾತಿಯಲ್ಲಿ ನಮೂದಾಗುವಂಥದ್ದು. ಇನ್ನೊಂದು ನಾಮಕ್ಕೆ ಹೆಸರೇ ಅಲ್ಲ! ಏಕೆಂದರೆ ಇದು ಹಾಡೊಂದರ ಹೆಸರಾಗಿರುತ್ತದೆ. ಹಾಡಿನ ಹೆಸರುಗಳಲ್ಲಿಯೂ ಎರಡು ವಿಧಗಳಿವೆ. ಒಂದು ಸುದೀರ್ಘ ಹಾಡು ಹಾಗೂ ಇನ್ನೊಂದು ಕಿರು ಹಾಡು. ಕಿರು ಹಾಡನ್ನು ಸಾಮಾನ್ಯವಾಗಿ ಮನೆಯವರು ಪ್ರೀತಿಯಿಂದ ಕರೆಯಲು ಬಳಸುತ್ತಾರಂತೆ. ಉದ್ದನೆಯ ಹಾಡನ್ನು ಊರಿನವರು ಕರೆಯಲು ಬಳಸುತ್ತಾರೆ. ಅಂದರೆ ಈ ಊರಲ್ಲಿ ಬರೋಬ್ಬರಿ 700 ವಿಭಿನ್ನ ಶಿಳ್ಳೆಗಳು, ಸಂಗೀತದ ರಾಗಗಳು ಇದ್ದಾವೆ ಎಂದಾಯ್ತು!

ಇದರ ಬಗ್ಗೆ ಮಾತನಾಡಿದ ಗ್ರಾಮದ ಖಾಸಿ ಬುಡಕಟ್ಟಿನ ಫಿವ್‌ಸ್ತಾರ್ ಖೊಂಗ್ಸಿಟ್ ಎಂಬುವವರು ‘ಗ್ರಾಮದಲ್ಲಿ ಯಾರೇ ಸತ್ತರೂ, ಆತ ಅಥವಾ ಆಕೆಯ ಜತೆ ಆತನಿಗಾಗಿ ಸಂಯೋಜಿಸಿದ ಸ್ವರ ಕೂಡ ಸಾಯುತ್ತದೆ. ನಾವು ನಮ್ಮದೇ ಸ್ವರಗಳನ್ನು ಹೊಂದಿದ್ದೇವೆ. ಈ ರಾಗಗಳನ್ನು ನಮ್ಮ ಅಮ್ಮಂದಿರು ಸಂಯೋಜಿಸುತ್ತಾರೆ. ನಾವು ಎರಡು ರೀತಿಗಳಲ್ಲಿ ಈ ಸ್ವರಗಳನ್ನು ಬಳಸುತ್ತೇವೆ- ಸುದೀರ್ಘ ಮತ್ತು ಸಣ್ಣ ಸ್ವರ. ನಮ್ಮ ಗ್ರಾಮ ಅಥವಾ ಮನೆಗಳಲ್ಲಿ ಸಣ್ಣ ಸ್ವರಗಳನ್ನು ಬಳಸುತ್ತೇವೆ. ನನ್ನ ಹೆಸರಿನ ರಾಗವನ್ನು ನನ್ನ ತಾಯಿ ಸಂಯೋಜಿಸಿದ್ದರು. ಈ ಪದ್ಧತಿಯು ಪೀಳಿಗೆಯಿಂದ ಪೀಳಿಗೆಗೆ ನಮ್ಮ ಗ್ರಾಮದಲ್ಲಿ ನಡೆದುಬರುತ್ತಿದೆ. ಇದನ್ನು ಆರಂಭಿಸಿದ್ದು ಯಾರು ಎನ್ನುವುದು ನಮಗೂ ಗೊತ್ತಿಲ್ಲ. ಆದರೆ ಈ ಬಗ್ಗೆ ನಮ್ಮೆಲ್ಲರಿಗೂ ಸಂತಸವಿದೆ’ ಎಂದು ಅವರು ಹೇಳಿದ್ದಾರೆ.

ಮತ್ತೊಬ ಗ್ರಾಮಸ್ಥ ಜಿಪ್ಸನ್ ಸೊಹ್‌ಖ್ಲೆತ್ ಮಾತನಾಡಿ ‘ನಮ್ಮ ಹಳ್ಳಿಯಲ್ಲಿ ಸುಮಾರು 700 ಜನರಿದ್ದೇವೆ. ಹೀಗಾಗಿ ನಮ್ಮಲ್ಲಿ ಸುಮಾರು 700 ವಿಭಿನ್ನ ರಾಗಗಳಿವೆ. ಈ ರಾಗಗಳನ್ನು ಸಂವಹನಕ್ಕಾಗಿ ಮಾತ್ರ ಬಳಸುತ್ತೇವೆ. ಆದರೆ ಅವರ ಮೂಲ ಹೆಸರನ್ನು ನಾವು ಬಳಸುವುದಿಲ್ಲ. ಕಾಡು ಅಥವಾ ಹೊಲದಲ್ಲಿ ಕೆಲಸ ಮಾಡುವ ಇತರೆ ಗ್ರಾಮಸ್ಥರ ಜತೆ ಸಂವಹನ ಮಾಡಲು ಪೂರ್ಣ ಹಾಡು ಅಥವಾ ಸ್ವರವನ್ನು ಬಳಸುತ್ತೇವೆ. ಒಂದೇ ಹಾಡು ಇದ್ದರೂ, ಅದರಲ್ಲಿ ಎರಡು ವಿಭಿನ್ನ ಮಾದರಿಗಳಿವೆ- ಒಂದು ಪೂರ್ಣ ಹಾಡು, ಇನ್ನೊಂದು ಕಿರು ಹಾಡು ಅಥವಾ ಸ್ವರ” ಎಂದಿದ್ದಾರೆ.

ಇನ್ನು ಕಳೆದ ವರ್ಷ ಪ್ರವಾಸೋದ್ಯಮ ಸಚಿವಾಲಯವು ಕೊಂಗ್‌ಥಾಂಗ್ ಗ್ರಾಮವನ್ನು ಯುಎನ್‌ಡಬ್ಲ್ಯೂಟಿಒದ (ವಿಶ್ವ ಪ್ರವಾಸೋದ್ಯಮ ಸಂಸ್ಥೆ) ‘ಅತ್ಯುತ್ತಮ ಪ್ರವಾಸಿ ಗ್ರಾಮಗಳು’ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. 2019ರಲ್ಲಿ ಬಿಹಾರದ ರಾಜ್ಯಸಭಾ ಸಂಸದ ರಾಕೇಶ್ ಸಿನ್ಹಾ ಅವರು ಈ ಗ್ರಾಮವನ್ನು ದತ್ತು ಪಡೆದಿದ್ದರು. ಈ ಗ್ರಾಮಕ್ಕೆ ಯುನೆಸ್ಕೋ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದರು. ಕೆಲವು ಸಂಪ್ರದಾಯಗಳು ಆಧುನಿಕತೆ ಬೆಳೆದಂತೆ ಕ್ರಮೇಣ ನಶಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ಪದ್ಧತಿಯನ್ನೆಲ್ಲ ನೋಡಿದಾಗಿ ಅದು ನಶಿಸುತ್ತಿಲ್ಲ ಇನ್ನೂ ಜೀವಂತ ಇದೆ ಎನಿಸುತ್ತದೆ. ಮೇಘಾಲಯದ ಗ್ರಾಮಗಳಲ್ಲಿ ಈ ತರದ ವಿಶೇಷ ಪದ್ಧತಿಗಳಿರುವುದೇ ಒಂದು ವಿಶೇಷ.

Leave A Reply

Your email address will not be published.