ಮುಂಡೂರು: ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನ ಕಟ್ಟೆ ವಿವಾದ | ಭಕ್ತಾಧಿಗಳಿಂದ ಠಾಣೆಗೆ ದೂರು
ನರಿಮೊಗರು: ಪುತ್ತೂರು ತಾಲೂಕಿನ ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ವಿವಾದಿತ ನಾಗನ ಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ಭಕ್ತಾಧಿಗಳು ಸಂಪ್ಯ ಠಾಣಾ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.
ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಹಲವು ಶತಮಾನಗಳ ಇತಿಹಾಸವಿದ್ದು, ಭಕ್ತರ ನಂಬಿಕೆಯ ಶ್ರದ್ಧಾ ಕೇಂದ್ರವಾಗಿರುತ್ತದೆ.
ದೇವಳದಲ್ಲಿ ಅಷ್ಟಮಂಗಲ ನಡೆಸಿದಂತೆ ಮತ್ತು ಅದರಲ್ಲಿ ಕಂಡುಬಂದಂತೆ ನೂತನ ನಾಗನ ಕಟ್ಟೆ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಅದು ಶಾಸ್ತ್ರಕ್ಕೆ ಅನುಗುಣವಾಗಿ ಆಗಿರುವುದಿಲ್ಲ ಮತ್ತು ಅವೈಜ್ಞಾನಿಕವಾಗಿ ನಿರ್ಮಾಣ ಆಗಿದೆ ಅನ್ನುವ ಭಕ್ತಾದಿಗಳ ವಿರೋಧದಿಂದಾಗಿ ಕೆಲಸವನ್ನು ಸ್ಥಗಿತಗೊಳಿಸಿ ಸಾರ್ವಜನಿಕವಾಗಿ ಸಭೆ ನಡೆಸಿ ತಂತ್ರಿಗಳು, ಜ್ಯೋತಿಷಿಗಳು, ವಾಸ್ತು ಶಾಸ್ತ್ರಜ್ಞ, ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ತೀರ್ಮಾನವಾಗಿ ನಾಗನ ಕಟ್ಟೆಯನ್ನು ಸಂಪೂರ್ಣ ತೆಗೆದು ಅದರೊಳಗಿರುವ ಮರದ ಬುಡೆಯನ್ನು ಬುಡ ಸಮೇತ ತೆಗೆದು ಶಾಸ್ರೋಕ್ತವಾಗಿ ಜೀರ್ಣೋದ್ಧಾರ ಸಮಿತಿ ರಚಿಸಿ ಕೆಲಸ ಮಾಡಬೇಕೆಂದು ನಿರ್ಣಯಿಸಿದ್ದರೂ ಇವೆಲ್ಲವನ್ನು ಉಲ್ಲಂಘಿಸಿ ಮತ್ತೆ ನಾಗನಕಟ್ಟೆಯನ್ನು ಮರದ ಬುಡೆಯನ್ನು ಕಟ್ಟೆಯೊಳಗಿನಿಂದ ತೆಗೆಯದೆ ಕೆಲಸವನ್ನು ಮುಂದುವರಿಸುವ ಕುರಿತು ವಾಟ್ಸಪ್ ನಲ್ಲಿ ತಂತ್ರಿಗಳು ನಿದರ್ಶನ ನೀಡಿದ್ದಾರೆ ಎನ್ನುವ ಸುಳ್ಳು ಮಾಹಿತಿ ನೀಡಿ ಅವೈಜ್ಞಾನಿಕವಾಗಿ ನಾಗನ ಕಟ್ಟೆಯ ಕೆಲಸವನ್ನು ಮುಂದುವರಿಸುವ ಬಗ್ಗೆ ವ್ಯವಸ್ಥಾಪನಾ ಸಮಿತಿಯ ಏಕಪಕ್ಷೀಯ ನಿರ್ಧಾರ ಭಕ್ತರಿಗೆ ನೋವುಂಟು ಮಾಡಿದೆ.
ಈ ರೀತಿಯ ನಾಗನಕಟ್ಟೆ ನಿರ್ಮಾಣಕ್ಕೆ ಸಾರ್ವಜನಿಕರ, ಭಕ್ತಾದಿಗಳ ವಿರೋಧವಿದ್ದು ತಂತ್ರಿಗಳು, ವಾಸ್ತುಶಿಲ್ಪಿಗಳು, ಜ್ಯೋತಿಷಿಗಳು ಬಂದು ಈ ಬಗ್ಗೆ ಸಾರ್ವಜನಿಕರ ಮುಂದೆ ಅವರ ವಿಚಾರವನ್ನು ಸ್ಪಷ್ಟ ಪಡಿಸಬೇಕು ಮತ್ತು ಈ ನಾಗನ ಕಟ್ಟೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕೆಂದು ಮತ್ತು ಅವೈಜ್ಞಾನಿಕವಾಗಿ ನಿರ್ಮಾಣವಾಗುವ ಕಾಮಗಾರಿ ಕೆಲಸವನ್ನು ಮುಂದುವರಿಸಿದರೆ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.