ಜಾತ್ರೆಯಲ್ಲಿ ದೇವರಿಗೆ ಬಂತೊಂದು ವಿಶೇಷ ಪ್ರಾರ್ಥನೆ! ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲೆಂದು ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ರೈತರು!!
ದೇವರಿಗೆ ಹರಕೆ ಹೇಳೋದು ಸಾಮಾನ್ಯ ವಿಚಾರ. ಹಿಂದೆಲ್ಲ ಅದಕ್ಕೊಂದು ಸಂಪ್ರದಾಯಗಳಿದ್ದು ಭಯ ಭಕ್ತಿಗಳಿಂದ ಹರಕೆ ಹೇಳೋದು, ಒಪ್ಪಿಸೋದು, ಪ್ರಾರ್ಥನೆ ಮಾಡೋದು ನಡೆಯುತ್ತಿತ್ತು. ಆದರೀಗ ಈ ಹರಕೆಯ ವಿಚಾರಗಳು ಒಂದು ರೀತಿ ಟ್ರೆಂಡ್ ಆಗಿರೋದು ವಿಪರ್ಯಾಸ. ಇತ್ತೀಚೆಗೆ ಪತ್ರ ಬರೆಯೋದು, ಕಾಣಿಕೆ ಹುಂಡಿಗೆ ಚೀಟಿ ಹಾಕೋದು, ನಾಲಗೆ ಕತ್ತರಿಸಿಕೊಳ್ಳೋದು ಹೀಗೇ ವಿಭಿನ್ನ ರೀತಿಯಲ್ಲಿ ಹರಕೆ ಹೇಳೋದು, ತೀರಿಸೋದನ್ನು ನೋಡಿದ್ದೇವೆ. ಇದರೊಂದಿಗೆ ಜಾತ್ರೆಗಳಲ್ಲಿ ತೇರಿಗೆಸೆಯುವ ಬಾಳೆ ಹಣ್ಣಿನಮೇಲೂ ತಮ್ಮ ಇಷ್ಟಾರ್ಥಗಳೆಲ್ಲವನ್ನು ಬರೆದು ದೇವರಿಗೆ ಪ್ರಾರ್ಥನೆ ಸಲ್ಲಿಸೋದನ್ನ ನೋಡಿದ್ದೇವೆ. ಇದೀಗ ಇಂತದೇ ಒಂದು ಘಟನೆ ಈ ಜಾತ್ರೆಯಲ್ಲಿ ನಡೆದಿದ್ದು, ಬಾಳೆ ಹಣ್ಣಿನ ಮೇಲೆ ಬರೆದಿರುವ ಹರಕೆ, ಪ್ರಾರ್ಥನೆ ಎಲ್ಲೆಡೆ ಭಾರೀ ಸುದ್ದಿಮಾಡುತ್ತಿದೆ.
ಬಾಳೆ ಹಣ್ಣಿನ ಮೇಲೆ ಬರೆದು ದೇವರಿಗೆ ಪ್ರಾರ್ಥನೆ ಸಲ್ಲಿಸೋದು ಈಗೇನು ಹೊಸ ವಿಚಾರ ಅಲ್ಲವೆನ್ನಬಹುದು. ಯಾಕೆಂದ್ರೆ ಹಿಂದೆಲ್ಲ ಹಲವು ಬಾರಿ ಅವರು ಶಾಸಕರಾಗಲಿ ಇವರು ಮಂತ್ರಿಯಾಗಲಿ ಎಂದು ರಾಜಕೀಯ ಬೆಂಬಲಿಗರು ತೇರಿಗೆ ಹರಕೆ ಹೊತ್ತು ಬಾಳೆ ಹಣ್ಣು ಎಸೆಯೋದು ಸಾಮಾನ್ಯವಾಗಿತ್ತು. ಆದರೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ನಮ್ಮ ರೈತಾಪಿ ಬಂದುಗಳು ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂಬ ಕಾರಣಕ್ಕೆ ‘ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ’ ಎಂದು ಬರೆದು ರಥದ ಮೇಲೆ ಬಾಳೆಹ್ಣು ಎಸೆದು ಪ್ರಾರ್ಥನೆ ಸಲ್ಲಿಸಿರುವವಂತಹ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕು ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ನಡೆದಿದೆ. ಬಹುಸಂಖ್ಯಾ ಹೆಣ್ಣೆತ್ತವರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯಾಕೊಡಲಿ ಎಂದು ತಾಯಿ ದುರ್ಗಾ ಮಾತೆಗೆ ರೈತರು ನಮನ ಸಲ್ಲಿಸಿದ್ದಾರೆ.
ಒಂದು ರೀತಿ ವಿಚಿತ್ರ ಎಪಿಸಿದರೂ ಇದೊಂದು ಯೋಚಿಸುವ ವಿಚಾರವೂ ಹೌದೆನ್ನಬಹುದು. ಯಾಕೆಂದ್ರೆ ದೇಶದ ಬಹುದೊಡ್ಡ ಸಮಸ್ಯೆ ಅಂದ್ರೇ ದೇಶದಲ್ಲಿ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಹುಡುಕುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಕೂಡ ರೈತರಿಗೆ ಕನ್ಯೆ ಕೊಡೊಲು ಯಾರೂ ಮುಂದಾಗುವುದಿಲ್ಲ. ಆದ್ದರಿಂದ ಹೆಣ್ಣು ಹುಡುಕಿ ಹುಡುಕಿ ಸುಸ್ತಾದ ಪಾಪ ನಮ್ಮ ಹುಡುಗರು ಹೀಗಾದರೂ ಒಂದು ಪ್ರಯತ್ನ ಮಾಡೋಣ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಲ್ಲದೆ ಇದು ಒಬ್ಬಿಬ್ಬರು ಅಂತಲ್ಲ ನೂರಾರು ಮಂದಿಗೆ ಹುಡುಗಿ ಬೇಕೆಂಬ ಬೇಡಿಕೆ ಇಟ್ಟುಕೊಂಡೇ ಈ ರೀತಿ ದೇವರಲ್ಲಿ ಪ್ರಾರ್ಥನೆ ನಡೆಸಿದ್ದಾರೆಂಬುದನ್ನು ಗಮನಿಸಬೇಕು. ಯಾಕೆಂದ್ರೆ ಈ ಭಾಗದಲ್ಲಿ ಹೆಚ್ಚಿನ ಜನರಿಗೆ ವಯಸ್ಸು ಮುವತ್ತೈದು ದಾಟಿದ್ದು, ಮದುವೆಯಾಗಲು ಹೆಣ್ಣು ಸಿಗದೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಜನರ ಮನಸ್ಸು ಬದಲಾಗಲಿ ರೈತರಿಗೆ ಕನ್ಯಾ ಕೊಡಲಿ ಎಂಬ ಬರಹದ ಬಾಳೆಹಣ್ಣನ್ನು ರೈತರ ಪರವಾಗಿ ಸಮರ್ಪಣೆ ಮಾಡಿದ ಯುವಕ, ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ ರೈತರಿಗೆ ಕನ್ಯೆ ಕೊಡುವಂತ ಮನಸ್ಥಿತಿ ಸರ್ವ ಜನಕ್ಕೂ ಕರುಣಿಸಲಿ ಎಂದು ಹಾರೈಕೆ ಮಾಡಿಕೊಂಡಿದ್ದಾನೆ.