ಜಾತಿ ಹಿಡಿದು ಬೈದರೆ ಆಗದು ಅಪರಾಧ, ಇನ್ನು ಉದ್ದೇಶಪೂರ್ವಕವಾಗಿ ನಿಂದಿಸಿದರೆ ಮಾತ್ರ ಬೀಳುತ್ತೆ ಅಟ್ರಾಸಿಟಿ ಕೇಸ್! ಹೈಕೋರ್ಟ್ ನೀಡಿತು ಮಹತ್ವದ ತೀರ್ಪು

ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಗಲಾಟೆ ಮಾಡುವಾಗಲೊ, ಇನ್ನೇನೋ ಕಾರಣಕ್ಕಾಗಿಯೋ ಜಾತಿ ಹೆಸರು ಹೇಳಿ ಬೈದರೂ ಸಾಕು, ಈ ವಿಚಾರವಾಗಿ ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣ ಎಂದು ಕೇಸು ದಾಖಲಾಗುತ್ತಿತ್ತು. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರೆ ಮಾತ್ರ ಅದು ಅಪರಾಧವೇ ಹೊರತು, ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಕಾಯಿದೆಯಡಿ ಅಪರಾಧವಾಗದು ಎಂದು ಆದೇಶಿಸಿದೆ.

ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರೆ ಅಪರಾಧವಾಗುತ್ತದೆಯೇ ಹೊರತು, ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯಿದೆಯಡಿ ಅಪರಾಧವಾಗದು ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಹಾಗಾಗಿ ಇನ್ನು ಮುಂದೆ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಆಗ ಕಾಯಿದೆ ಅನ್ವಯಿಸುತ್ತದೆ.

ಹೈಕೋರ್ಟ್ ಈ ರೀತಿ ತೀರ್ಪು ನೀಡಲು ಕಾರಣವೇನೆಂದರೆ, ಜಯಮ್ಮ ಎಂಬುವರು 2020ರ ಜೂ.14ರಂದು ಪೊಲೀಸರಿಗೆ ದೂರು ನೀಡಿ, ತನ್ನ ಮಗ ಮತ್ತು ಆತನ ಸ್ನೇಹಿತರು ಕ್ರಿಕೆಟ್‌ ಆಡುತ್ತಿದ್ದಾಗ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಆ ವೇಳೆ ತನ್ನ ಮಗನನ್ನು ಹಿಡಿದು ಹೊಡೆದಿದ್ದಾರೆ ಎಂದು ಐಪಿಸಿ ಸೆಕ್ಷನ್‌ಗಳಡಿ ದೂರು ನೀಡಿದ್ದರು. ಪೊಲೀಸರ ತನಿಖೆ ಸಂದರ್ಭದಲ್ಲಿ ಕೇವಲ ಥಳಿಸಿದ್ದಲ್ಲದೆ, ದೂರುದಾರರ ಮಗನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು ಎಂಬ ಅಂಶ ಹೊರ ಬಂದಿತು.
ಆಗ ಪೊಲೀಸರು ಎಸ್ಸಿ- ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿಯೂ ಆರೋಪಗಳನ್ನು ಕೇಸ್‌ನಲ್ಲಿ ಸೇರಿಸಿದರು. ಸೆಷನ್ಸ್‌ ಕೋರ್ಟ್‌ ಕಾಗ್ನಿಜೆನ್ಸ್‌ ಪಡೆದು ವಿಚಾರಣೆ ಕೈಗೆತ್ತಿಕೊಂಡಿತ್ತು. ಹಾಗಾಗಿ, ಅರ್ಜಿದಾರರು ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು

ಅನೇಕಲ್‌ನ ಸೂರ್ಯನಗರದ ವಾಸಿ ವಿ.ಶಶಿಕುಮಾರ್‌ ತಮ್ಮ ವಿರುದ್ಧದ ಎಸ್‌ಸಿ-ಎಸ್‌ಟಿ ದೌರ್ಜನ್ಯ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೆ ದೂರನ್ನು ಪರಿಶೀಲಿಸಿದ ನ್ಯಾಯಾಲಯವು ‘ಈ ಪ್ರಕರಣದಲ್ಲಿ ಘಟನೆ ನಡೆದ ತಕ್ಷಣ ನೀಡಿದ ದೂರಿನಲ್ಲಿ ಜಾತಿ ನಿಂದನೆ ವಿಚಾರ ಪ್ರಸ್ತಾಪವೇ ಆಗಿಲ್ಲ ಮತ್ತು ದೂರುದಾರರು ಕೂಡ ದೂರಿನಲ್ಲಿಅದನ್ನು ಹೇಳಿಲ್ಲ. ಆರೋಪ ಮಾಡಿರುವುದು ಜೀವ ಬೆದರಿಕೆ ಅಷ್ಟೇ’ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿಆರೋಪ ಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ಎಲ್ಲೂ ಏಕೆ ಜಾತಿ ನಿಂದನೆ ಮಾಡಲಾಯಿತು? ಹೇಗೆ ಮಾಡಲಾಯಿತು ಎಂಬ ಬಗ್ಗೆ ಯಾವುದೇ ವಿವರಗಳಿಲ್ಲ. ಜತೆಗೆ, ಉದ್ದೇಶಪೂರ್ವಕವಾಗಿ ನಿಂದನೆ ಮಾಡಲೇಬೇಕೆಂದು ನಿಂದನೆ ಮಾಡಿರುವುದಕ್ಕೆ ಸಾಕ್ಷ್ಯವಿಲ್ಲ. ಹಾಗಾಗಿ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿಯ ಪ್ರಕರಣ ಊರ್ಜಿತವಾಗದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಜಾತಿ ನಿಂದನೆ ಆರೋಪಗಳಿಗೆ ಸಂಬಂಧಿಸಿದಂತೆ ಜಗಳ ನಡೆದಾಗ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ನಡೆದಿವೆ. ಆರೋಪಿ ಅವರ ಜಾತಿಯ ಹೆಸರು ಬಳಸಿದ್ದಾರೆಂದು ಹೇಳಲಾಗಿದೆ. ಆದರೆ, ಆತ ಉದ್ದೇಶಪೂರ್ವಕವಾಗಿ ಅಥವಾ ಅಪಮಾನ ಮಾಡಲೆಂದೇ ಜಾತಿ ನಿಂದನೆ ಮಾಡಿದ್ದಾನೆ ಎನ್ನುವುದಕ್ಕೆ ಯಾವುದೇ ವಿವರಗಳಿಲ್ಲ. ಜತೆಗೆ, ಕಾಯಿದೆಯ ಉದ್ದೇಶ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಆಗ ಕಾಯಿದೆ ಅನ್ವಯಸುತ್ತದೆ ಎಂದೂ ನ್ಯಾಯಪೀಠ ಹೇಳಿದೆ.

Leave A Reply

Your email address will not be published.