ಏರ್ ಪೋರ್ಟ್ ನಿಂದ ಟೇಕಾಫ್ ಆದ ವಿಮಾನ, 13 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿ, ಮತ್ತಲ್ಲೇ ಬಂದು ಲ್ಯಾಂಡ್ ಆಯ್ತು!!

ಹೊಸ ವರ್ಷ ಆರಂಭವಾದಗಿನಿಂದ ವಿಮಾನಗಳು ವಿವಾದದ ಸುಳಿಯಲ್ಲೇ ಸಿಲುಕಿ ನಲುಗುತ್ತಿವೆ ಎನ್ನಬಹುದು. ಯಾಕೆಂದರೆ ವಾರದಲ್ಲಿ ಒಂದಾದರೂ ವಿಮಾನದ ಸಮಸ್ಯೆಗಳು ಗೋಚರವಾಗುತ್ತಿವೆ. ವಿಮಾದೊಳಗೊಬ್ಬ ಮಹಿಳೆ ಮೇಲೆ ಮೂತ್ರ ಮಾಡಿ ಆ ವಿಮಾನ ಸಂಸ್ಥೆ ಭಾರೀ ದಂಡ ತೆರುವಂತೆ ಮಾಡಿದ, ಕೆಲವು ವಿಮಾನಗಳು ಏರ್ ಪೋರ್ಟ್ ನಲ್ಲಿಯೇ ಪ್ರಯಾಣಿಕರನ್ನು ಬಿಟ್ಟು ಹಾರಿ, ಅವರ ಕೆಂಗಣ್ಣಿಗೆ ಗುರಿಯಾಗಿದ್ದವು. ಆದರೀಗ ಇಲ್ಲೊಂದು ವಿಮಾನವು ಟೇಕಾಫ್ ಆಗಿ 13 ಗಂಟೆಗಳ ಕಾಲ ಹಾರಾಟ ನಡೆಸಿದ ಬಳಿಕ ಮತ್ತದೇ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿರುವ ಅಸಾಮಾನ್ಯ ಘಟನೆಯೊಂದು ನಡೆದಿದೆ.

ಹೌದು, ಶುಕ್ರವಾರ ಬೆಳಗ್ಗೆ ದುಬೈನಿಂದ ನ್ಯೂಜಿಲೆಂಡಿನತ್ತ ಪ್ರಯಾಣಿಕರನ್ನು ಹೊತ್ತು ಹೊರಟ ವಿಮಾನವು ಸುಮಾರು 13 ಗಂಟೆಗಳ ಕಾಲ ಆಗಸದಲ್ಲಿ ಹಾರಾಡಿದ ಬಳಿಕ ಮತ್ತೆ ಟೇಕಾಫ್ ಆದ ದುಬೈ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್‌ ಆಗಿದೆ. ಈ ಘಟನೆಯನ್ನು ಫಾಕ್ಸ್‌ ನ್ಯೂಸ್‌ ವರದಿ ಮಾಡಿದ್ದು EK448 ವಿಮಾನವು ದುಬೈನ ಸ್ಥಳೀಯ ಕಾಲಮಾನಗಳ ಪ್ರಕಾರ ಬೆಳಗ್ಗೆ ಸುಮಾರು 10:30 ಕ್ಕೆ ಟೇಕ್ ಆಫ್ ಆಗಿತ್ತು. ಇನ್ನು, ಪೈಲಟ್ ಸುಮಾರು 9,000-ಮೈಲಿ ಪ್ರಯಾಣವನ್ನು ಪೂರೈಸದೆ ಅರ್ಧದಾರಿಯಲ್ಲೇ ಯು-ಟರ್ನ್ ಮಾಡಿ ಮತ್ತೆ ದುಬೈಗೆ ತಂದು ವಿಮಾನವನ್ನು ಲ್ಯಾಂಡ್‌ ಮಾಡಿದ್ದಾನೆ. ಶನಿವಾರ ಮಧ್ಯರಾತ್ರಿಯ ಸುಮಾರಿಗೆ ವಿಮಾನವು ಅಂತಿಮವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಫ್ಲೈಟ್‌ ಅವೇರ್‌ ಮಾಹಿತಿ ನೀಡಿದೆ.

ಇದೇನಪ್ಪಾ, ಪೈಲೆಟ್ ಏನು ಆಟ ಆಡ್ತಿದ್ದಾನ? ಅವನ್ಯಾಕೆ ಹೀಗೆ ಮಾಡಿದ ಎಂದು ಚಿಂತೆ ಮಾಡ್ತಿದ್ದೀರಾ? ದುಬೈ ನಿಂದ ಹೊರಟ ಈ ವಿಮಾನವು ನ್ಯೂಜಿಲೆಂಡ್‌ನ ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಆ ನಿಲ್ದಾಣದ ಬಳಿ ತೀವ್ರ ಪ್ರವಾಹ ಉಂಟಾಗಿ ವಾರಾಂತ್ಯದಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಈ ಹಿನ್ನೆಲೆ ಎಮಿರೇಟ್ಸ್‌ ವಿಮಾನ ಪುನಃ ದುಬೈಗೆ ಮರಳಿದೆ ಎಂದು ತಿಳಿದುಬಂದಿದೆ.

ಇನ್ನು, ಆಕ್ಲೆಂಡ್‌ ವಿಮಾನ ನಿಲ್ದಾಣ ಮುಚ್ಚಿರುವ ಕುರಿತು ಆಕ್ಲೆಂಡ್ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್‌ ಮಾಡುವುದರ ಮೂಲಕ ಮಾಹಿತಿ ನೀಡಿದ್ದು, ಅತಿಯಾದ ಪ್ರವಾಹದ ಕಾರಣದಿಂದ ದುರದೃಷ್ಟವಶಾತ್ ಇಂದು ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇದು ಅತ್ಯಂತ ಹತಾಶಕರ ಪರಿಸ್ಥಿತಿ, ಆದರೆ ನಮಗೆ ಪ್ರಯಾಣಿಕರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಹಾಗಾಗಿ ತಾತ್ಕಾಲಿಕವಾಗಿ ವಿಮಾನ ಹಾರಾಟ, ಲ್ಯಾಂಡಿಂಗ್ ಎಲ್ಲವನ್ನೂ ಸ್ಥಗಿತಮಾಡಲಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ವಿಡಿಯೋಗಳ ಪ್ರಕಾರ ವಿಮಾನ ನಿಲ್ದಾಣವು ಸಂಪೂರ್ಣವಾಗಿ ಜಲಾವೃತಗೊಂಡು, ಅದು ಇಳಿದ ನಂತರ ಭಾನುವಾರ ಕಾರ್ಯಾಚರಣೆಯನ್ನು ಪುನಾರಂಭಿಸಿದೆ. ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ನೀರಿಗಿಳಿದಿದ್ದರು. ಇದು ಸಹ ವಿಡಿಯೋದಲ್ಲಿ ಸೆರೆಯಾಗಿತ್ತು.

Leave A Reply

Your email address will not be published.