ರೈತರೇ ಗಮನಿಸಿ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ

ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲೆಂದೇ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯೂ ಒಂದು. ಬೆಲೆ ಕುಸಿತದ ವಿರುದ್ಧ ರೈತರನ್ನು ರಕ್ಷಿಸುವ ಸಲುವಾಗಿ ಕೃಷಿ ವೆಚ್ಚ ಹಾಗೂ ಬೆಲೆಗಳ ಆಯೋಗದ (CACP) ಶಿಫಾರಸುಗಳ ಆಧಾರದ ಮೇಲೆ ಕೆಲವು ಬೆಳೆಗಳಿಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ.ಈ ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಕೃಷಿ ಉತ್ಪನ್ನಗಳಿಗೆ ನೀಡುವ ಖಾತರಿಯ ಬೆಲೆಯಾಗಿದೆ. ಸರಿಯಾದ ಬೆಲೆಗೆ ಸ್ವತಃ ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕಂತಾಗುತ್ತದೆ.

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯು ಆರಂಭವಾಗಿದ್ದು, ರೈತರಿಂದ ನೊಂದಣಿ ಮಾಡಿಕೊಂಡು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜೋಳ ಖರೀದಿ ಕೇಂದ್ರಗಳನ್ನು ತೆರೆದಿದೆ. ರೈತರಿಂದ ನೇರವಾಗಿ ಅವರು ಬೆಳೆದ ಕೃಷಿ ಪದಾರ್ಥಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯು 2022-23ನೇ ಸಾಲಿನಲ್ಲಿ ಬೆಳೆದ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನಿಸಿದೆ.

ರಾಜ್ಯದಲ್ಲಿ ಇನ್ನು 2 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಸರ್ಕಾರವು ರೈತರಿಂದ ಖರೀದಿಸಲು ಮುಂದಾಗಿದ್ದು, ಖರೀದಿ ಪ್ರಕ್ರಿಯೆಯಲ್ಲಿ ಖರೀದಿ ಮಿತಿಯು ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ ಮಿತಿಯು 20 ಕ್ವಿಂಟಾಲ್ ಇದ್ದು, ಸದ್ಯ ಖರೀದಿ ಮಿತಿಯನ್ನು ತೆರವುಗೊಳಿಸಿದೆ. ಜಿಲ್ಲೆಯ ರೈತರು ಹೊಂದಿರುವ ಜಮೀನಿಗೆ ಅನುಗುಣವಾಗಿ ಜೋಳವನ್ನು ಖರೀದಿಸಲು ಸರ್ಕಾರವು ಅನುಮತಿಯನ್ನು ನೀಡಿದೆ. ಈಗಾಗಲೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಮಾರಾಟ ಮಾಡಿದ ರೈತರು ಕೂಡ ಗರಿಷ್ಠ ಮಿತಿಯನ್ನು ಸಡಿಲಿಸಿ ಬಿಳಿಜೋಳ ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ರೈತರ ನೊಂದಣಿಯ ಪ್ರಾರಂಭ ಡಿಸೆಂಬರ್ 12ರಿಂದ ಜನವರಿ 31 2023ರವರೆಗೆ ಮತ್ತು ಖರೀದಿ ಪ್ರಾರಂಭ ಜನವರಿ 1 ರಿಂದ ಮಾರ್ಚ್ 31ರವರೆಗೆ ಖರೀದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಬೆಂಬಲ ಬೆಲೆ ವಿವರ:
ಹೈಬ್ರಿಡ್-ಬಿಳಿ ಜೋಳಕ್ಕೆ ರೂ.2970, ಮಾಲ್ದಂಡಿ-ಬಿಳಿ ಜೋಳಕ್ಕೆ ರೂ.2990. ಇತರೆ ಜಿಲ್ಲೆಗಳಲ್ಲಿ ಜೋಳ ಬೆಳೆಯುವ ರೈತರು ಒಮ್ಮೆ ನಿಮ್ಮ ಹತ್ತಿರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಗೆ ಭೇಟಿ ನೀಡಿ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

Leave A Reply

Your email address will not be published.