ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ! ಹುಟ್ಟುಹಬ್ಬದಂದೇ ಅಧಿಕೃತ ಘೋಷಣೆ ಮಾಡಿದ್ರು, ಶ್ರೀ ರಾಮ ಸೇನೆ ಮುಖ್ಯಸ್ಥ!!

ಶ್ರೀರಾಮ ಸೇನೆಯ ಸಂಘಟನೆ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಅವರು ಬರುವ ವಿಧಾನಸಭೆಯ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿ ಸುದ್ದಿಗೆ ಗ್ರಾಸವಾಗಿದ್ದ ಪ್ರಮೋದ್ ಮುತಾಲಿಕ್, ಇದೀಗ ತಾವು ಸ್ಪರ್ಧಿಸುವ ಕ್ಷೇತ್ರದ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ.

ಕಾರ್ಕಳದಲ್ಲಿ 68ನೇ ಹುಟ್ಟುಹಬ್ಬದ ಆಚರಿಸಿಕೊಂಡ ಮುತಾಲಿಕ್, 2023ರ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು. ನಾನು ಕಾರ್ಕಳದಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಸಾವಿರಾರು ಕಾರ್ಯಕರ್ತರ ಒತ್ತಡದಿಂದ, ಅವರೆಲ್ಲರ ನೋವಿಗೆ ಧನಿಯಾಗುವ ಆಸೆಯೊಂದಿಗೆ ನಾನಿಲ್ಲಿ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದಿದ್ದಾರೆ.

ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ ಜನ ಬೆಂಬಲಿಸಿದ್ದಾರೆ. ಕ್ಷೇತ್ರದಲ್ಲಿ ಹಿಂದೂಗಳಿಗೆ ನೋವಾಗಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವ-ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮುತಾಲಿಕ್ ಶಪಥಗೈದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಯಾರು ಏನೇ ಒತ್ತಡ ಹಾಕಿದರೂ ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ನುಡಿದಿದ್ದಾರೆ.

ಬಳಿಕ ಮಾತನಾಡಿದ ಅವರು ನಾನು ಬಿಜೆಪಿ ವಿರೋಧಿಯಲ್ಲ. ನಾನು ಮೋದಿ ಪರವಾಗಿ ಹಿಂದುತ್ವದ ಪರವಾಗಿದ್ದೇನೆ, ಗೆದ್ದ ನಂತರವೂ ನನ್ನ ಬೆಂಬಲ ಬಿಜೆಪಿಗೆ ಇರಲಿದೆ. ಬಿಜೆಪಿ ಸಿದ್ಧಾಂತವನ್ನು ಬೆಂಬಲಿಸುವವ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳು, ಅವರ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ. ಬಿಜೆಪಿ ಅಂದು ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ನನ್ನ ಸ್ಪರ್ಧೆ ಏನಿದ್ದರೂ ವ್ಯಕ್ತಿಗಳ ವಿರುದ್ಧ, ಭ್ರಷ್ಟರ ವಿರುದ್ದ, ಹಿಂದು ವಿರೋಧಿಗಳ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಪ್ರಮೋದ್ ಮುತಾಲಿಕ್ ಅವರ ಈ ಘೋಷಣೆಯಿಂದ ಕಾರ್ಕಳ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇದರಂತೆ ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿ ಇದೀಗ ತ್ರಿಕೋನ ಸ್ಪರ್ಧೆ ಏರ್ಪಟ್ಟಂತಾಗಿದೆ.

Leave A Reply

Your email address will not be published.